ನಾನು ಈಗಾಗಲೇ ಈ ಕಾರ್ಯಕ್ಕೆ ವೈಯಕ್ತಿಕವಾಗಿ ₹5 ಲಕ್ಷ ದೇಣಿಗೆ ನೀಡಿದ್ದು, ಇನ್ನು ನನ್ನಿಂದ ಅಗತ್ಯವಿದ್ದಲ್ಲಿ ನನ್ನನ್ನು ಸಂಪರ್ಕಿಸಿದರೆ ಸಾಧ್ಯವಾದಷ್ಟು ಸಹಾಯ ಸಹಕಾರ ಮಾಡುತ್ತೇನೆ. ಬೇಗನೆ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು ಬಡ ಮಕ್ಕಳಿಗೆ ಅನುಕೂಲವಾಗುವಂತೆ ಆಗಲಿ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ವೀರಶೈವ ಲಿಂಗಾಯತ ಸಮಾಜ ಮತ್ತು ಮಠಾಧೀಶರು ಸರ್ವರನ್ನು ಒಗ್ಗೂಡಿಸಿಕೊಂಡು ಸರ್ವ ಸಮುದಾಯಗಳನ್ನು ಸಮಾನವಾಗಿ ಕಾಣುತ್ತಾ ಸಾಗುತ್ತಿದ್ದಾರೆ ಎಂದು ಜವಳಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಹಳೆ ಸಾಲೋಟಗಿ ರಸ್ತೆಯಲ್ಲಿ ಶಿರಶ್ಯಾಡ ಸಂಸ್ಥಾನ ಹಿರೇಮಠದ ಇಂಡಿ ಶಾಖಾಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಡ ಮಕ್ಕಳ ಶಿಕ್ಷಣ ಮತ್ತು ಉಚಿತ ಅನ್ನಪ್ರಸಾದ ಹಾಗೂ ವಸತಿ ನಿಲಯದ ಮಹಾದ್ವಾರದ ಪ್ರಥಮ ಹೊಸ್ತಿಲ ಪೂಜಾ ಕಾರ್ಯಕ್ರಮದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಮಠಾಧೀಶರು ಜಾತಿ, ಧರ್ಮ, ಮತ, ಪಂಥ ಎನ್ನದೆ ಸರ್ವರಿಗೂ ಸಮಾನತೆಯಿಂದ ಕಾಣುತ್ತಾರೆ. ಹೀಗಾಗಿ ವೀರಶೈವ ಧರ್ಮ ಅತಿ ಶ್ರೇಷ್ಠ ಧರ್ಮ ಎಂದರು.

ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಇಂದಿನ ನಗರದಲ್ಲಿ ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯ ಹಾಗೂ ವಸತಿ ನಿಲಯ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ಇಂದು ರಾಜಕಾರಣಿಗಳು ಧರ್ಮ ಧರ್ಮಗಳ ಮಧ್ಯೆ ಕಿತ್ತಾಟ ಹಚ್ಚಿ ರಾಜಕಾರಣ ಮಾಡುತ್ತಾರೆ. ಆದರೆ ವೀರಶೈವ ಮಠಾಧೀಶರು ಎಲ್ಲ ಧರ್ಮಗಳನ್ನು ಒಂದೇ ಧರ್ಮದ ದಾರಿಯಲ್ಲಿ ನಡೆಸುತ್ತಾ ಬಂದಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದರು.

ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಆಶೀರ್ವಚನ ನೀಡಿ, ನಮ್ಮ ದೇಹದ ಎಲ್ಲಾ ಅಂಗಾಂಗಗಳು ಸುಂದರವಾಗಿರುವಂತೆ ನಾವು ನೋಡಿಕೊಳ್ಳಬೇಕೆಂದರೆ ಮೊದಲು ನಮ್ಮ ನಾಲಿಗೆ ನಮ್ಮ ಹಿಡಿತದಲ್ಲಿರಬೇಕು. ನಾಲಿಗೆ ಹಿಡಿತ ತಪ್ಪಿದರೆ ಅದರಿಂದ ಆಗುವ ಅನಾಹುತ ಬಹಳಷ್ಟು, ಹೀಗಾಗಿ ಯಾರ ಜೊತೆ ಮಾತನಾಡಿದರು ಸೌಮ್ಯ ಹಾಗೂ ಮೃದುವಾಗಿ ಮಾತನಾಡಬೇಕು ಎಂದ ಅವರು, ಶಿರಶ್ಯಾಡದ ಪರಮಪೂಜ್ಯರು ಇಂಡಿ ನಗರದಲ್ಲಿ ಬಡ ಮಕ್ಕಳಿಗಾಗಿ ಉಚಿತ ಅನ್ನಪ್ರಸಾದ ಹಾಗೂ ವಸತಿ ನಿಲಯ ಕಟ್ಟುವ ಸಂಕಲ್ಪ ಹೊಂದಿದ್ದು ಭಕ್ತರು ಇದಕ್ಕೆ ಕೈಜೋಡಿಸಿ ಶೀಘ್ರವೇ ಈ ಕಾಮಗಾರಿ ಪೂರ್ಣಗೊಂಡು ಬಡ ಮಕ್ಕಳಿಗೆ ಅನುಕೂಲವಾಗಲಿ, ಶ್ರೀಗಳ ಸಂಕಲ್ಪ ಬಹುಬೇಗನೆ ಈಡೇರಲಿ ಎಂದರು.

ಶಿರಶ್ಯಾಡ ಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಮಾತನಾಡಿ, ಸೌಮ್ಯ ಸ್ವಭಾವದ ಸಚಿವರು ಧರ್ಮದ ಕಾರ್ಯಗಳಿಗೆ ಸದಾ ಮುಂಚೂಣಿಯಲ್ಲಿ ನಿಂತು ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಇನ್ನೂ ಉನ್ನತ ಸ್ಥಾನಗಳು ಲಭಿಸಲಿ ಎಂದರು. ಇಂಡಿ ನಗರ ಹಾಗೂ ತಾಲೂಕಿನ ಜನರು ಬಹಳಷ್ಟು ಸಹಾಯ ಸಹಕಾರ ಮಾಡುತ್ತಿದ್ದಾರೆ. ಎಲ್ಲಾ ಭಕ್ತರ ಸಹಾಯದಿಂದ ಅತಿ ವೇಗವಾಗಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲಿಯೇ ಈ ಕಟ್ಟಡ ಕಾಮಗಾರಿ ಮುಗಿದು ಉಚಿತ ಅನ್ನದಾಸೋಹ ವಸತಿ ನಿಲಯ ಪ್ರಾರಂಭವಾಗುವ ವಿಶ್ವಾಸವಿದೆ ಎಂದರು.

ಗೋಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ರೋಡಗಿಯ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಅರ್ಜುನಗಿಯ ರೇಣುಕ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಗುರುಕುಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ರಾಕೇಶ ಕಲ್ಲೂರ, ಎಂ.ಆರ್. ಪಾಟೀಲ, ಶ್ರೀಮಂತ ಇಂಡಿ, ಅಶೋಕಗೌಡ ಬಿರಾದಾರ, ಉದ್ಯಮಿದಾರರಾದ ಅನಿಲ್ ಏಳಗಿ, ಉದ್ದಿಮೆದಾರ ಸಂತೋಷ ಶಾಪೇಟಿ, ಡಿ.ಆರ್.ಶಹಾ, ಜಟ್ಟೆಪ್ಪ ರವಳಿ, ಶಿವಯೋಗಪ್ಪ ಚನ್ನಗೊಂಡ, ಮಲ್ಲನಗೌಡ ಪಾಟೀಲ, ಶ್ರೀಕಾಂತ ಕುಡಿಗನೂರ, ಸತೀಶ ಕುಂಬಾರ, ಪ್ರಭುಗೌಡ ಪಾಟೀಲ, ಸುಧೀರ ಕರಕಟ್ಟಿ, ಉಮೇಶ ದೇಗಿನಾಳ, ಶಾಂತುಗೌಡ ಬಿರಾದಾರ, ಹರಿಶ್ಚಂದ್ರ ಪವಾರ, ಜೀತಪ್ಪ ಕಲ್ಯಾಣಿ, ಈರಣ್ಣ ತೆಲ್ಲೂರ, ಬಾಳು ಮುಳಜಿ, ರಾಮಸಿಂಗ ಕನ್ನೊಳ್ಳಿ ಸೇರಿದಂತೆ ಅನೇಕರಿದ್ದರು.

ಇಂಡಿ ನಗರದಲ್ಲಿ ಬಡ ಮಕ್ಕಳಿಗಾಗಿ ಉಚಿತ ವಸತಿ ಹಾಗೂ ದಾಸೋಹ ನಿಲಯ ಕಟ್ಟಡ ನಿರ್ಮಾಣ ಮಾಡಲು ನಾನು ಬಹಳ ವರ್ಷಗಳ ಹಿಂದೆಯೇ ಸಂಕಲ್ಪ ಮಾಡಿದ್ದೆ, ಈಗ ಕಾಲ ಕೂಡಿಬಂದಿದೆ. ಈ ಕಟ್ಟಡ ನಿರ್ಮಾಣಕ್ಕೆ ಸಚಿವ ಶಿವಾನಂದ ಪಾಟೀಲರು ವೈಯಕ್ತಿಕವಾಗಿ ಹಣ ನೀಡಿದ್ದಲ್ಲದೆ, ಇನ್ನು ಏನೇ ಸಹಾಯ ಸಹಕಾರ ಇದ್ದರೂ ಹೇಳಿ ಎಂದು ತಿಳಿಸಿದ್ದಾರೆ. ಇಂತಹ ರಾಜಕಾರಣಿಗಳು ಜಿಲ್ಲೆಗೆ ಅವಶ್ಯವಾಗಿದ್ದಾರೆ. ಅಭಿನವ ಮುರುಘೇಂದ್ರ ಶಿವಾಚಾರ್ಯರು, ಶಿರಶ್ಯಾಡ ಮಠ ಇಂಡಿ