ರೇಣುಕಾಸ್ವಾಮಿ ಕೊಲೆ ಬಳಿಕ ಆರೋಪಿಗಳಾದ ಲಕ್ಷ್ಮಣ್‌ ಮತ್ತು ಪವನ್‌ ಶೋರೂಮ್‌ಗೆ ತೆರಳಿ ಹೊಸ ಬಟ್ಟೆ ಖರೀದಿಸಿದ್ದ ವಿಚಾರ ಆರೋಪಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

 ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಬಳಿಕ ಆರೋಪಿಗಳಾದ ಲಕ್ಷ್ಮಣ್‌ ಮತ್ತು ಪವನ್‌ ಶೋರೂಮ್‌ಗೆ ತೆರಳಿ ಹೊಸ ಬಟ್ಟೆ ಖರೀದಿಸಿದ್ದ ವಿಚಾರ ಆರೋಪಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಜೂ.8ರ ರಾತ್ರಿ ರೇಣುಕಾಸ್ವಾಮಿ ಕೊಲೆ ಬಳಿಕ ಈ ಇಬ್ಬರು ಆರೋಪಿಗಳು ರಾಜರಾಜೇಶ್ವರಿ ನಗರದ ಟ್ರೆಂಡ್ಸ್‌ ಶೋರೂಮ್‌ಗೆ ತೆರಳಿ ಎರಡು ಜತೆ ಹೊಸ ಬಟ್ಟೆ ಖರೀದಿಸಿದ್ದರು. ಬಳಿಕ ತಮ್ಮ ಹಳೇ ಬಟ್ಟೆ ಕಳಚಿಟ್ಟು ಹೊಸಬಟ್ಟೆ ಧರಿಸಿದ್ದರು. ಬಳಿಕ ನೇರ ರಾಜರಾಜೇಶ್ವರಿನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಬಂದು ದೇವರಿಗೆ ಕೈ ಮುಗಿದಿದ್ದರು ಎಂಬ ವಿಚಾರ ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಟ್ರೆಂಡ್ಸ್‌ ಷೋ ರೂಮ್‌ ಮತ್ತು ದೇವಸ್ಥಾನಕ್ಕೆ ಕರೆದೊಯ್ದು ಸೋಮವಾರ ಸ್ಥಳ ಮಹಜರು ನಡೆಸಿದರು. ಇದೇ ವೇಳೆ ಎರಡೂ ಕಡೆಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.ಮತ್ತೆ ಇನ್‌ಸ್ಟಾಗ್ರಾಮ್‌ ಗೆ ಬಂದ ವಿಜಯಲಕ್ಷ್ಮೀ ದರ್ಶನ್‌:

ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಅವರು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಡಿಲೀಟ್‌ ಮಾಡಿದ್ದ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ. ಆದರೆ, ಇಷ್ಟು ದಿನ ವಿಜಯಲಕ್ಷ್ಮೀ ಅವರು ಮಾಡಿದ್ದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ.ಚಿಕ್ಕಣ್ಣನ ಬೆನ್ನಲ್ಲೇ ನಟ ಯಶಸ್‌ ಸೂರ್ಯಗೆ ನೋಟಿಸ್‌ ಸಾಧ್ಯತೆ:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಹಾಸ್ಯನಟ ಚಿಕ್ಕಣ್ಣ ವಿಚಾರಣೆ ಬೆನ್ನಲ್ಲೇ ಮತ್ತೊಬ್ಬ ನಟ ಯಶಸ್‌ ಸೂರ್ಯಗೂ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಜೂ.8ರಂದು ರೇಣುಕಾಸ್ವಾಮಿ ಕೊಲೆಗೂ ಮುನ್ನ ರಾಜರಾಜೇಶ್ವರಿನಗರದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ನಡೆದ ಪಾರ್ಟಿಯಲ್ಲಿ ಆರೋಪಿ ನಟ ದರ್ಶನ್‌ ಜತೆಗೆ ನಟ ಯಶಸ್‌ ಸೂರ್ಯ ಸಹ ಇದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಅವರಿಗೂ ಪೊಲೀಸರು ನೋಟಿಸ್‌ ಜಾರಿ ಮಾಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ನಟ ಯಶಸ್‌ ಸೂರ್ಯ, ಗರಡಿ ಸೇರಿದಂತೆ ಕನ್ನಡ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಆರೋಪಿ ನಟ ದರ್ಶನ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.ಈಗಾಗಲೇ ಪಬ್‌ನ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿರುವ ಪೊಲೀಸರು, ಅಂದು ಪಾರ್ಟಿಯಲ್ಲಿ ಆರೋಪಿ ದರ್ಶನ್‌ ಜತೆಗೆ ಯಾರೆಲ್ಲಾ ಪಾಲ್ಗೊಂಡಿದ್ದರು ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಹೀಗಾಗಿ ಒಬ್ಬೊಬ್ಬರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಯಾರೋ ಕೊಂದಿದ್ದಕ್ಕೆ ಛೇಂಬರ್‌ಗೆ ಟ್ಯಾಕ್ಸ್‌: ಭಾ ಮ ಹರೀಶ್

‘ಯಾರೋ ಮರ್ಡರ್‌ ಮಾಡಿದ್ದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆರಿಗೆ ಕಟ್ಟುವಂತಾಗಿದೆ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ ಮ ಹರೀಶ್‌ ಪ್ರತಿಕ್ರಿಯಿಸಿದ್ದಾರೆ. ರೇಣುಕಾಸ್ವಾಮಿ ಅವರಿಗೆ ವಾಣಿಜ್ಯ ಮಂಡಳಿ 5 ಲಕ್ಷ ರು. ಪರಿಹಾರ ನೀಡಿದ ಕುರಿತಾಗಿ ಪ್ರತಿಕ್ರಿಯಿಸಿದ ಭಾ.ಮ.ಹರೀಶ್‌, ‘ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಸಾವು ಕಂಡಾಗ ಮಾನವೀಯ ನೆಲೆಯಲ್ಲಿ ಆ ವ್ಯಕ್ತಿಗೆ ಸಹಾಯ ಮಾಡಿದ್ದು ತಪ್ಪಲ್ಲ. ಆದರೆ, ಯಾರೋ ಕೊಲೆ ಮಾಡಿದರೆ ಅದಕ್ಕೆ ವಾಣಿಜ್ಯ ಮಂಡಳಿ ಹೋಗಿ ತೆರಿಗೆ ಕಟ್ಟುವಂತಹ ಪರಿಸ್ಥಿತಿ ಬಂದಿದೆ. ಇದು ಬೇಕಿತ್ತಾ ಎಂಬುದು ನನ್ನ ಪ್ರಶ್ನೆ’ ಎಂದು ಪ್ರಶ್ನಿಸಿದ್ದಾರೆ.ದರ್ಶನ್‌ ಕೊಲೆ ಮಾಡಿದ್ದಾರೆಂದರೆ ನಂಬಲಾಗುತ್ತಿಲ್ಲ: ನಟಿ ಅನುಷಾ ರೈ

‘ರೇಣುಕಾಸ್ವಾಮಿ ಮಾಡಿದ ತಪ್ಪಿಗೆ ಕಾನೂನಿನ ಪ್ರಕಾರವೇ ಶಿಕ್ಷೆ ಕೊಡಿಸುವ ಬದಲು ಜೀವ ತೆಗೆದಿದ್ದು ಅಕ್ಷಮ್ಯ ಅಪರಾಧ. ತಂದೆಯಾಗುವ ಮೊದಲೇ ಕಣ್ಣು ಮುಚ್ಚಿದ ರೇಣುಕಾಸ್ವಾಮಿ ಮತ್ತೆ ಮಗುವಾಗಿ ಹೆಂಡತಿಯ ಹೊಟ್ಟೆಯಲ್ಲಿ ಹುಟ್ಟಲಿ ಅನ್ನೋದೇ ನಮ್ಮ ಹಾರೈಕೆ’ ಎಂದು ನಟಿ ಅನುಷಾ ರೈ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಅನುಷಾ ರೈ, ‘ಅಭಿಮಾನಿಗಳ ಕ್ಷೇಮವನ್ನು ಬಯಸುತ್ತಿದ್ದ, ಹಲವು ರೀತಿಯಲ್ಲಿ ದಾನಧರ್ಮಗಳನ್ನು ಮಾಡುತ್ತಿದ್ದ ದರ್ಶನ್‌ ಅವರಿಂದ ಕೊಲೆಯಂತಹ ತಪ್ಪು ಆಗಿದೆ ಎಂದರೆ ನಂಬಲಾಗುತ್ತಿಲ್ಲ. ಆದರೂ ಈ ವಿಚಾರಕ್ಕೆ ಕಾನೂನು ನೋಡಿಕೊಳ್ಳುತ್ತದೆ. ದರ್ಶನ್‌ ಸದ್ಯಕ್ಕಿನ್ನು ಆರೋಪಿಯಷ್ಟೆ, ಅಪರಾಧಿಯಾಗಿಲ್ಲ. ಅವರು ತಪ್ಪು ಮಾಡಿಲ್ಲವಾದರೆ ಅವರ ದಾನಧರ್ಮಗಳೇ ಅವರನ್ನು ಕಾಪಾಡುತ್ತೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

‘ಕೊಲೆ ಪ್ರಕರಣದ ವಿಚಾರವಾಗಿ ದರ್ಶನ್ ಕುಟುಂಬಕ್ಕೆ ಶಾಪ ಹಾಕಿದರೆ ಪ್ರಯೋಜನವೇನು? ದರ್ಶನ್ ಪುತ್ರ ವಿನೀಶ್ ನೋಡಿದರೆ ಸಂಕಟವಾಗುವುದಿಲ್ಲವೇ? ದರ್ಶನ್‌ ಜೀವನಕ್ಕೆ 22 ವರ್ಷಗಳಿಂದ ಜೊತೆ ಇರುವ ವಿಜಯಲಕ್ಷ್ಮೀ ಅವರನ್ನು ತಪ್ಪಿತಸ್ಥರಂತೆ ಕಾಣೋದು ಸರಿಯೇ? ಇಂತಹ ಸಂದರ್ಭದಲ್ಲಿ ಅವರಿಬ್ಬರಿಗೂ ಧೈರ್ಯ ಹೇಳಬೇಕೇ ಹೊರತು ಹೀಯಾಳಿಸೋದು ನ್ಯಾಯವೇ’ ಎಂದು ಪ್ರಶ್ನಿಸಿದ್ದಾರೆ.ಅನುಷಾ ರೈ ‘ಧೈರ್ಯಂ ಸರ್ವತ್ರ ಸಾಧನಂ’, ‘ಅಬ್ಬಬ್ಬಾ’, ‘ಖಡಕ್’, ‘ಪೆಂಟಗಾನ್’, ‘ಕರ್ಷಣಂ’, ‘ದಮಯಂತಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.ಪಾರದರ್ಶಕ ವಿಚಾರಣೆ ನಡೆಯಲಿ, ನ್ಯಾಯ ಸಿಗಲಿ: ಉಪೇಂದ್ರ

‘ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ದರ್ಶನ್‌ ಬಂಧನದ ವಿಚಾರದಲ್ಲಿ ಪಾರದರ್ಶಕ ವಿಚಾರಣೆ ಆಗಲಿ. ಆ ಮೂಲಕ ನ್ಯಾಯ ಸಿಗಲಿ’ ಎಂದು ನಟ ಉಪೇಂದ್ರ ಅಭಿಪ್ರಾಯಪಟ್ಟಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್‌ ಬಂಧನ, ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ಅದರ ವಿಚಾರಣೆಯನ್ನು ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಬೆರಗಾಗಿ ನೋಡುತ್ತಿದೆ.ಈ ಹೈ ಪ್ರೊಫೈಲ್‌ ಕೇಸಿನ ವಿಚಾರಣೆಯಲ್ಲಿ ನಿಸ್ಪಕ್ಷಪಾತವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. 

ರೇಣುಕಾಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟೀವಿ ಮಾಧ್ಯಮಗಳಲ್ಲಿ ಹಾಗೂ ದರ್ಶನ್ ಅಭಿಮಾನಿಗಳಲ್ಲಿ ಆತಂಕ, ಅನುಮಾನಗಳು ಕಾಡುತ್ತಿದೆ, ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ. ಯಾಕೆಂದರೆ ಯಾವುದೇ ಕೇಸ್ ಆದರೂ ಆ ಕೇಸಿನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂಧಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು’ ಎಂದಿದ್ದಾರೆ.

‘ಈ ಹಿಂದೆ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು. ಈಗ ತಂತ್ರಜ್ಞಾನ ಮುಂದುವರೆದಿದ್ದು, ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು. ಅದೇ ರೀತಿ ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ ಆ ಕೇಸಿನ ವಿಚಾರಣೆಯ ವಿಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲಿಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು. ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗಿಯೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು. ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ.

ಆಗ ರೇಣುಕಾಸ್ವಾಮಿ ಕುಟುಂಬಕ್ಕೆ, ಜನರಿಗೆ, ಟೀವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೆ ಪೋಲೀಸ್ ಮತ್ತು ಟೀವಿ ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ’ ಎಂದು ಉಪೇಂದ್ರ ತಿಳಿಸಿದ್ದಾರೆ.ಕೊಲೆಗೂ ನನಗೂ ಸಂಬಂಧವಿಲ್ಲ: ಶೆಡ್‌ ಬಾಡಿಗೆಗೆ ಕೊಟ್ಟಿದ್ದೇನೆ: ಜಯಣ್ಣ

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಶೆಡ್‌ ಮಾಲೀಕ ಪಟ್ಟಣಗೆರೆ ಜಯಣ್ಣ ಅವರನ್ನು ಪೊಲೀಸರು ಸೋಮವಾರ ವಿಚಾರಣೆ ಮಾಡಿದ್ದಾರೆ.

ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಗೆ ಕರೆಸಿದ್ದ ಪೊಲೀಸರು, ಜಯಣ್ಣ ಅವರನ್ನು ವಿಚಾರಣೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆಯ ಶೆಡ್‌ ಜಯಣ್ಣ ಅವರಿಗೆ ಸೇರಿರುವುದರಿಂದ ಪೊಲೀಸರು ವಿಚಾರಣೆ ನಡೆಸಿ ಕೆಲ ಮಾಹಿತಿ ಪಡೆದಿದ್ದಾರೆ.

ಈ ಶೆಟ್‌ ಮಾಲೀಕ ನಾನೇ. ಆದರೆ, ಈ ಜಾಗವನ್ನು ಕೆಲ ವರ್ಷಗಳಿಂದ ಬೇರೆ ವ್ಯಕ್ತಿಗಳಿಗೆ ಗುತ್ತಿಗೆ ನೀಡಿದ್ದೇನೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿನಯ್‌ ನನ್ನ ತಂಗಿಯ ಮಗ. ಆರೋಪಿ ನಟ ದರ್ಶನ್‌ ಸಹ ನನಗೆ ಪರಿಚಿತ. ಆದರೆ, ಈ ಕೊಲೆ ಘಟನೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಟ್ಟಣಗೆರೆ ಜಯಣ್ಣ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.