ಸ್ಥಳ ಮಹಜರು ವೇಳೆ ತಪ್ಪಿಸಿಕೊಂಡಿದ್ದ ಆರೋಪಿ ಬಂಧನ

| Published : Nov 06 2024, 11:50 PM IST

ಸಾರಾಂಶ

ಹೈದರಾಬಾದ್‌ನ ಉಪ್ಪಳ್ ಎಂಬಲ್ಲಿ ಮಹಜರ್‌ ಪ್ರಕ್ರಿಯೆ ವೇಳೆ ಪರಾರಿಯಾಗಿದ್ದ ಹರಿಯಾಣ ರಾಜ್ಯದ ಕಾರ್ನಲ್‌ಗರುಂದ ನಿವಾಸಿ ಅಂಕುರ್ ರಾಣಾನನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿ ಜಿಲ್ಲೆಗೆ ಕರೆತಂದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ಥಳ ಮಹಜರು ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ನ ಉಪ್ಪಳ್ ಎಂಬಲ್ಲಿ ಮಹಜರ್‌ ಪ್ರಕ್ರಿಯೆ ವೇಳೆ ಪರಾರಿಯಾಗಿದ್ದ ಹರಿಯಾಣ ರಾಜ್ಯದ ಕಾರ್ನಲ್‌ಗರುಂದ ನಿವಾಸಿ ಅಂಕುರ್ ರಾಣಾನನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿ ಜಿಲ್ಲೆಗೆ ಕರೆತಂದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಪನ್ಯ ಎಸ್ಟೇಟ್ ಎಂಬಲ್ಲಿ ಅರ್ಧಂಬರ್ಧ ಬೆಂದ ಸ್ಥಿತಿಯಲ್ಲಿ ಪುರುಷನ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಕೊಲೆ ಪ್ರಕರಣ ಬೇಧಿಸಿ ಆರೋಪಿಗಳಾದ ಮೃತ ವ್ಯಕ್ತಿಯ ಪತ್ನಿ ನಿಹಾರಿಕಾ ಸೇರಿದಂತೆ ಆಕೆಯ ಗೆಳೆಯರಾದ ಆಂಧ್ರಪ್ರದೇಶದ ಕಡಪ ಮೂಲದ ಬೆಂಗಳೂರಿನಲ್ಲಿ ನೆಲೆಸಿದ್ದ ನಿಖಿಲ್ ಮೈರೆಡ್ಡಿ ಹಾಗೂ ಅಂಕುರ್ ರಾಣಾನನ್ನು ಬಂಧಿಸಿದ್ದರು.

ಬಂಧಿತರ ಪೈಕಿ ಅಂಕುರ್ ರಾಣಾನನ್ನು ಕೊಲೆ ಕೃತ್ಯ ನಡೆದಿದ್ದ ಸ್ಥಳದ ಮಹಜರಿಗೆಂದು 13 ಮಂದಿ ಪೊಲೀಸರು, ಸುಂಟಿಕೊಪ್ಪ ಪಂಚಾಯಿತಿಯ ಇಬ್ಬರು ಸಿಬ್ಬಂದಿಯೊಂದಿಗೆ ಹೈದರಾಬಾದ್‌ನ ಉಪ್ಪಳ್ ಎಂಬಲ್ಲಿಗೆ ಕರೆದೊಯ್ದು ಮಹಜರ್‌ ನಡೆಸಿದ್ದರು. ಬಳಿಕ ಅಲ್ಲಿನ ಲಾಡ್ಜ್‌ವೊಂದರಲ್ಲಿ ಅ.30ರಂದು ರಾತ್ರಿ ತಂಗಿದ್ದರು. ಅ.31ರ ಮುಂಜಾನೆ ಆರೋಪಿ ಅಂಕುರ್ ರಾಣಾ ಪೊಲೀಸ್‌ರೊಬ್ಬರ ಮೊಬೈಲ್ ಕಳವು ಮಾಡಿ ಕೈಗೆ ಹಾಕಿದ್ದ ಬೇಡಿಯನ್ನು ಕಳಚಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಿಂದಲೂ ಪೊಲೀಸರ ವಿಶೇಷ ತನಿಖಾ ತಂಡ ಅಲ್ಲಿಗೆ ತೆರಳಿ ಅಂಕುರ್ ರಾಣಾನಿಗಾಗಿ ಹುಡುಕಾಟದಲ್ಲಿ ತೊಡಗಿತ್ತು. ಇದೀಗ ರಾಜಸ್ಥಾನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.