ರೈತ ವಿದ್ಯಾನಿಧಿಯಂತಹ ಯೋಜನೆ ಬಂದ್ ಮಾಡಿದ್ದು ಕಾಂಗ್ರೆಸ್ ಸಾಧನೆ-ಬಸವರಾಜ ಬೊಮ್ಮಾಯಿ

| Published : Mar 27 2024, 01:03 AM IST

ರೈತ ವಿದ್ಯಾನಿಧಿಯಂತಹ ಯೋಜನೆ ಬಂದ್ ಮಾಡಿದ್ದು ಕಾಂಗ್ರೆಸ್ ಸಾಧನೆ-ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳಂಬೀಡ ಏತ ನೀರಾವರಿಗೆ ಉಳಿದ ಶೇ.೧೦ರಷ್ಟು ಕೆಲಸ ಮಾಡದೇ ಯೋಜನೆಯಿಂದ ನೀರು ಹರಿಸಲು ಇವರಿಂದ ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹರಿಹಾಯ್ದರು.

ಹಾನಗಲ್ಲ: ರೈತರು ಸಾಮಾನ್ಯ ಜನರಿಗೆ ಸಲ್ಲಬೇಕಾದ ರೈತ ವಿದ್ಯಾನಿಧಿಯಂತಹ ಯೋಜನೆಗಳನ್ನು ಬಂದ ಮಾಡಿರುವುದೇ ಈಗಿನ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದ್ದು, ಬಾಳಂಬೀಡ ಏತ ನೀರಾವರಿಗೆ ಉಳಿದ ಶೇ.೧೦ರಷ್ಟು ಕೆಲಸ ಮಾಡದೇ ಯೋಜನೆಯಿಂದ ನೀರು ಹರಿಸಲು ಇವರಿಂದ ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹರಿಹಾಯ್ದರು.

ಮಂಗಳವಾರ ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸಿಗೆ ದುಡ್ಡೇ ದೊಡ್ಡಪ್ಪ, ಮೋದಿಜಿಗೆ ದುಡಿಮೆಯೇ ದೊಡ್ಡಪ್ಪ. ಕರ್ನಾಟಕದ ಕಾಂಗ್ರೆಸ್ ಕ್ಷುಲ್ಲಕ ಜಾತಿ ರಾಜಕಾರಣ ಮಾಡುತ್ತಿದೆ. ಮುಖ್ಯಮಂತ್ರಿ ಒಂದು ವರ್ಗದ ನಾಯಕರಾಗಿದ್ದಾರೆ. ವಿಧಾನಸಭಾ ಚುನಾವಣೆಯೇ ಬೇರೆ. ಲೋಕಸಭಾ ಚುನಾವಣೆಯೇ ಬೇರೆ. ಇದು ಭಾರತದ ಭವಿಷ್ಯ ತೀರ್ಮಾನಿಸುವ ಚುನಾವಣೆ. ವಿದೇಶದ ಮುಂದೆ ಕೈಚಾಚಿ ನಿಲ್ಲುವ ಸ್ಥಿತಿಯಿಂದ ಭಾರತವನ್ನು ಹೊರತಂದು, ೧೦ ವರ್ಷಗಳಲ್ಲಿ ಇಡೀ ಜಗತ್ತು ಮೆಚ್ಚುವಂತಹ ಅಭಿವೃದ್ಧಿಗೆ ಮುಂದಾಗಿದೆ. ಭಯೋತ್ಪಾದನೆ ನಿಗ್ರಹವಾಗಿದೆ. ರಸ್ತೆ ರೈಲು ಸೇರಿದಂತೆ ಸಮಗ್ರ ಅಭಿವೃದ್ಧಿಯಾಗುತ್ತಿದೆ. ಭಾರತಕ್ಕೆ ಈಗ ಅಮೃತ ಕಾಲ ಬಂದಿದೆ. ಹಾನಗಲ್ಲ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಕನಸಿದೆ. ನಾವು ಕೊಟ್ಟ ಯೋಜನೆಗಳ ಅಲ್ಪಸ್ವಲ್ಪ ಕೆಲಸವನ್ನೂ ಮಾಡದಿರುವ ಕಾರಣ ಬಾಳಂಬೀಡ ಏತ ಆರಂಭವಾಗದ ಕಾರಣ ಬರಗಾಲದಲ್ಲಿ ಅಡಕೆ ತೆಂಗು ಸೇರಿದಂತೆ ಹಲವು ಬೆಳೆಗಳು ಒಣಗುತ್ತಿದ್ದು, ಈ ಬೆಳೆಗಳ ಅಭಿವೃದ್ಧಿ ೨೦ ವರ್ಷ ಹಿಂದಕ್ಕೆ ಹೋಗುತ್ತಿದೆ. ಈ ತಾಲೂಕಿನ ಜನ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಭವಿಷ್ಯದ ಕೇಂದ್ರ ಮಂತ್ರಿಗಳು. ಜಗ ಮೆಚ್ಚಿದ ಮಗ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬೆಳಗುತ್ತಿದೆ. ಈಗ ಮತ್ತೆ ಮೋದಿ ಪ್ರಧಾನಿಯಾಗುವ ಮೂಲಕ ಇಡೀ ಜಗತ್ತಿನಲ್ಲಿ ಭಾರತ ಸದೃಢ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನಿಲ್ಲಬೇಕಾಗಿದೆ. ಕಾಂಗ್ರೆಸ್ ಅಭಿವೃದ್ಧಿ ಪರ ಅಲ್ಲ. ನನ್ನನ್ನು ತೀರ ಕನಿಷ್ಠವಾಗಿ ಕಂಡ ಕಾಂಗ್ರೆಸ್ ಹಲವು ಬಗೆಯಿಂದ ನನಗೆ ಅಗೌರವ ತೋರಿದರು. ಬಿಜೆಪಿಯಲ್ಲಿ ನನ್ನನ್ನು ಗೌರವದಿಂದ ಕಾಣುತ್ತಿದ್ದಾರೆ. ನನಗೆ ಯಾವುದೇ ಅಧಿಕಾರ ಬೇಡ. ಬಿಜೆಪಿ ಗೆಲ್ಲಬೇಕಷ್ಟೇ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ ಕಮಡೊಳ್ಳಿ ಮಾತನಾಡಿ, ಹಾನಗಲ್ಲ ತಾಲೂಕು ಬಿಜೆಪಿಯ ಭದ್ರ ಕೋಟೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡು ಮತಗಳನ್ನು ಪಡೆದು ಈ ಬಾರಿ ಬಿಜೆಪಿಗೆ ಅಭೂತಪೂರ್ವ ಗೆಲುವು ನೀಡುವುದು ಸತ್ಯ. ಮೋದಿಜಿ ದೇಶಕ್ಕೆ ಅತ್ಯಗತ್ಯ ಎಂದರು.

ಮಾಜಿ ಶಾಸಕ ಶಿವರಾಜ ಸಜ್ಜನವರ, ಮುಖಂಡರಾದ ರಾಜಶೇಖರ ಕಟ್ಟೇಗೌಡರ, ಬಸವರಾಜ ಹಾದಿಮನಿ, ಮಲ್ಲಿಕಾರ್ಜುನ ಹಾವೇರಿ, ಎಸ್.ಎಂ. ಕೋತಂಬರಿ, ಸಂದೀಪ ಪಾಟೀಲ, ಮಾಲತೇಶ ಸೊಪ್ಪಿನ, ನಿಂಗಪ್ಪ ಗೊಬ್ಬೇರ, ಎಂ.ಆರ್.ಪಾಟೀಲ, ಬಿ.ಎಸ್.ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ ಮೊದಲಾದವರಿದ್ದರು.