ದಾಬಸ್‍ಪೇಟೆ: ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿರುವ ಮಹಿಳೆಯರ ಸಾಧನೆ ಗಮನಾರ್ಹ ಎಂದು 1ನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಶ್ ಅಭಿಪ್ರಾಯಪಟ್ಟರು.
ನೆಲಮಂಗಲ ತಾಲೂಕಿನ ಓಬನಾಯಕನಹಳ್ಳಿ ರಸ್ತೆಯಲ್ಲಿರುವ ಸಂದೀಪ್ ಸೇವಾ ನಿಲಯಂನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಕಾನೂನು ಸೇವಾಸಮಿತಿ, ತಾಲೂಕು ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಸಮಾಜ ಹಾಗೂ ಕುಟುಂಬದಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಉಚಿತ ಕಾನೂನು ಸೇವೆ ನೀಡುವ ಉದ್ದೇಶದಿಂದ ಕಾನೂನು ಸೇವಾ ಸಮಿತಿ ರಚಿಸಲಾಗಿದೆ. ಕಾನೂನಿನಲ್ಲಿ ಮಹಿಳೆಯರ ಭದ್ರತೆಗಾಗಿ ಇರುವ ಹಕ್ಕುಗಳು ಕಾಯ್ದೆಗಳ ಮಾಹಿತಿ ಕಾನೂನು ಸೇವಾ ಸಮಿತಿ ತಿಳಿವಳಿಕೆ ನೀಡಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ಸಿವಿಲ್ ನ್ಯಾಯಾಧೀಶರಾದ ಎಂ.ಮಂಜು ಮಾತನಾಡಿ, ಮಹಿಳೆಯರಿಗಾಗಿ ಸರ್ಕಾರ ಸಾಕಷ್ಟು ಅವಕಾಶ ಕಲ್ಪಿಸುತ್ತಿವೆ. ಕಾನೂನು ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಶಿಶುಅಭಿವೃದ್ಧಿ ಯೋಜನಾಧಿಕಾರಿ ಎಂ.ನಾಗೇಶ, ಮೇಲ್ವಿಚಾರಕಿ ಸುಜಾತಾ, ಸಂದೀಪ್, ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ವೇದಾವತಿ ಸೇವಾನಿಲಯಂ ಕಾರ್ಯದರ್ಶಿ ಲಿಲ್ಲಿಸ್ಯಾಮುಯಲ್, ಸ್ಯಾಮುಯಲ್ ಪ್ರಭಾಕರ್, ರೇಣುಕಾ ಇತರರಿದ್ದರು.
ಪೋಟೋ 8 :
ನೆಲಮಂಗಲದ ಸಂದೀಪ್ ಸೇವಾ ನಿಲಯಂನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಶ್ ಉದ್ಘಾಟಿಸಿದರು.