ಕನ್ನಡ ನಾಡು, ನುಡಿಗಾಗಿ ಕಸಾಪ ಕಾರ್ಯ ಮಹತ್ವದ್ದಾಗಿದೆ-ಶಂಭುಲಿಂಗ

| Published : May 10 2025, 01:08 AM IST

ಕನ್ನಡ ನಾಡು, ನುಡಿಗಾಗಿ ಕಸಾಪ ಕಾರ್ಯ ಮಹತ್ವದ್ದಾಗಿದೆ-ಶಂಭುಲಿಂಗ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡು, ನುಡಿ, ನೆಲ, ಜಲಗಳ ಸಂರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಿರಂತರವಾಗಿ ಕಾರ್ಯಕ್ರಮಗಳು ಜರುಗುತ್ತಾ ಬಂದಿದ್ದು, ಕಸಾಪ ಕಾರ್ಯ ಮಹತ್ವದ್ದಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಶಂಭುಲಿಂಗ ಚಿಗರಿ ಹೇಳಿದರು.

ಮುಂಡರಗಿ:ಕನ್ನಡ ನಾಡು, ನುಡಿ, ನೆಲ, ಜಲಗಳ ಸಂರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಿರಂತರವಾಗಿ ಕಾರ್ಯಕ್ರಮಗಳು ಜರುಗುತ್ತಾ ಬಂದಿದ್ದು, ಕಸಾಪ ಕಾರ್ಯ ಮಹತ್ವದ್ದಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಶಂಭುಲಿಂಗ ಚಿಗರಿ ಹೇಳಿದರು. ಅವರು ಈಚೆಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಶರಣ ಸಾಹಿತ್ಯ ಪರಿಷತ್, ಚೈತನ್ಯ ಶಿಕ್ಷಣ ಸೌರಭ ಇವುಗಳ ಸಹಯೋಗದಲ್ಲಿ ನಡೆಯುತ್ತಿರುವ ಶರಣ ಚಿಂತನ ಉಪನ್ಯಾಸ ಮಾಲೆ 16 ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು, ಅವರ ವಚನದ ಅರ್ಥಗಳನ್ನು ಉಪನ್ಯಾಸದ ಮೂಲಕ ಸರ್ವರಿಗೂ ಮುಟ್ಟಿಸುತ್ತಿರುವ ಕಾರ್ಯ ಎಲ್ಲರೂ ಮೆಚ್ಚುವಂತದ್ದು. ಯುವಕರಿಗೂ ಉಪನ್ಯಾಸದ ಅವಕಾಶ ಮಾಡಿಕೊಡಬೇಕು. ಕಸಾಪದಲ್ಲಿ ಆಜೀವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು. ಶರಣ ಚಿಂತನ ಮಾಲೆ 16ರ ಉಪನ್ಯಾಸ ಮಾಲೆಯಲ್ಲಿ ಶರಣ ಮೇದಾರ ಕೇತಯ್ಯನವರ ಕುರಿತು ಉಪನ್ಯಾಸಕಿ ಲತಾ ಕಡ್ಡಿ ಮಾತನಾಡಿ, 12ನೇ ಶತಮಾನದಲ್ಲಿ ಸಾವಿರಾರು ವರ್ಷಗಳಿಂದ ಬೆರೂರಿದ ವರ್ಣಾಶ್ರಮ, ಅಂಧಶ್ರದ್ಧೆ, ಶೋಷಣೆ ಮುಂತಾದ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಡಿ ಸಾಮಾಜಿಕ ಕ್ರಾಂತಿ ಮಾಡಿದರು. ಬಸವಣ್ಣವರು ಈ ಹೋರಾಟದ ನೇತೃತ್ವ ವಹಿಸಿದ್ದರು. ಮೇದಾರ ಕೇತಯ್ಯನವರು ಬಿದಿರು ಕಾಯಕ ಮಾಡಿ ಶ್ರೇಷ್ಠರಾಗಿ ಬಸವಣ್ಣವರನ್ನು ಗುರುವಾಗಿ ಪಡೆದು ಲಿಂಗ ಜಂಗಮರಲ್ಲಿ ನಿಜಸುಖ ಪಡೆದವರು ಎಂದರು.

ಕಸಾಪ ತಾಲೂಕು ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು 111ನೇ ಸಂಸ್ಥಾಪನಾ ದಿನ ಆಚರಿಸುತ್ತಿದ್ದೇವೆ. ಇದರ ಬೆಳವಣಿಗೆ ಪಣತೊಟ್ಟ ಸರ್ ಎಂ. ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣ ರಾಜ ಒಡೆಯರ್, ಸರ್ ಮಿರ್ಜಾ ಇಸ್ಮಾಯಿಲ್ ಅವರ ಪಾತ್ರ ಪ್ರಮುಖವಾಗಿದೆ. ರಾಜ್ಯದಲ್ಲಿ ಅಷ್ಟೆ ಅಲ್ಲದೆ ಗಡಿನಾಡಿನಲ್ಲೂ ಕನ್ನಡದ ಕಂಪನ್ನು ಬೆಳಗಿಸಿದ್ದಾರೆ ಎಂದರು. ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್.ಬಿ. ಹಿರೇಮಠ, ಕೃಷ್ಣಮೂರ್ತಿ ಸಾವುಕಾರ, ಮಧುಮತಿ ಇಳಕಲ್, ಸಿ.ಎಸ್. ಅರಸನಾಳ, ಆರ್. ವೈ. ಪಾಟೀಲ, ವಿಶ್ವನಾಥ ಉಳ್ಳಾಗಡ್ಡಿ, ಕಾವೇರಿ ಬೋಲಾ, ಜ್ಯೋತಿ ಗಣಪ್ಪನವರ, ಮುತ್ತು ಬಳ್ಳಾರಿ, ಶಂಕರ ಕೂಕನೂರ, ಎಂ.ಐ. ಮುಲ್ಲಾ, ಅಕ್ಕಮಹಾದೇವಿ ಕೊಟ್ಟೂರ ಶೆಟ್ಟರ, ಆರ್.ಕೆ. ರಾಯನಗೌಡ, ಸಂತೋಷ ಹಿರೇಮಠ, ವೆಂಕಟೇಶ ಗುಗ್ಗರಿ, ಸಂಗಪ್ಪ ಲಿಂಬಿಕಾಯಿ, ರವಿಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎನ್.ಎನ್.ಕಲಕೇರಿ ನಿರೂಪಿಸಿದರು. ಸಿ.ಕೆ. ಗಣಪ್ಪನವರ ವಂದಿಸಿದರು.