ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿರುವ ಘಟನೆ ಖಂಡಿಸಿ ಶಿವಮೊಗ್ಗ ಬಿಜೆಪಿ ಮಹಿಳಾ ಮೋರ್ಚಾದಿಂದ ಶನಿವಾರ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆ ವೇಳೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಬೆಳಗಾವಿಯಲ್ಲಿ ಕ್ಲುಲಕ ಕಾರಣಕ್ಕೆ, ಪ್ರೇಮಿಗಳಿಬ್ಬರು ಪ್ರೀತಿಸಿ ಮನೆಬಿಟ್ಟು ಹೋಗಿದ್ದಕ್ಕೆ ಹುಡುಗನ ತಾಯಿಯನ್ನು ಬೆತ್ತಲೆಗೊಳಿಸಿದ್ದು ಅಲ್ಲದೆ ಕಂಬಕ್ಕೆ ಕಟ್ಟಿಹಾಕಿ, ಹಲ್ಲೆ ಮಾಡಿರುವುದು. ಇಡೀ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ಎಂದು ಆರೋಪಿಸಿದರು.ಈ ಘಟನೆ ನಡೆದಾಗ ಸರ್ಕಾರ ಕೂಡಲೇ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಬೇಕಿತ್ತು. ಮುಖ್ಯಮಂತ್ರಿ ಅವರು ಕೂಡಲೇ ಈ ಘಟನೆಗೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆದು ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದೆ. ಕೇಂದ್ರದಿಂದ ಘಟನೆಯ ಸತ್ಯ ಪರಿಶೀಲನೆಗೆ ಸತ್ಯಶೋಧನ ತಂಡ ಬಂದಿದೆ. ಮುಖ್ಯಮಂತ್ರಿ ಅವರಿಗೂ ಅಕ್ಕ ತಂಗಿಯರಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಏನು ಬೇಕಾದರೂ ಮಾಡಬಹುದು ಎಂಬ ಸ್ಥಿತಿಯಲ್ಲಿ ಕೀಡಿಗೇಡಿಗಳಿದ್ದಾರೆ ಎಂದು ಕಿಡಿಕಾರಿದರು.
ಶಾಸಕ ಚನ್ನಬಸಪ್ಪ ಮಾತನಾಡಿ, ಅಧಿವೇಶದಲ್ಲಿ ಈ ಘಟನೆ ಬಗ್ಗೆ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ನೀಡಲಿಲ್ಲ. ಬೆಳಗಾವಿ ಅಧಿವೇಶನ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದ್ದು, ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡಬೇಕಿತ್ತು. ಅದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕ್ಷೇತ್ರವಾಗಿದೆ. ಅವರಾದರೂ ಸದನದಲ್ಲಿ ಈ ವಿಚಾರವನ್ನೆತ್ತಿ ಖಂಡನೆ ವ್ಯಕ್ತಪಡಿಸಬೇಕಿತ್ತು. ಈ ಸರ್ಕಾರ ಮಹಿಳೆಯನ್ನು ಗೌರವಿಸುವುದಿಲ್ಲ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ಹರಿಹಾಯ್ದರು.ಕಾಂಗ್ರೆಸ್ ಇಂತಹ ದುಷ್ಟ ಶಕ್ತಿಗಳಿಗೆ ಶಕ್ತಿಕೊಡುತ್ತ ಬಂದಿದೆ. ಮಹಿಳೆಯರ ಮೇಲೆ ಅಪಮಾನ ಯಾವುದೇ ಕಾರಣಕ್ಕೂ ಬಿಜೆಪಿ ಸಹಿಸುವುದಿಲ್ಲ. ಸಚಿವರು ಕೂಡ ಚಕಾರ ಎತ್ತಲಿಲ್ಲ. ಲಜ್ಜೆಗೆಟ್ಟ ಭಂಡ ಸರ್ಕಾರವಿದು. ಮಹಿಳೆಯರ ಮತ್ತು ಸಂಸ್ಕೃತಿಯ ರಕ್ಷಣೆ ಮಾಡದ ಇಂತಹ ಸರ್ಕಾರ ಇರಬಾರದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಅಂತರಾಷ್ಡ್ರೀಯ ಷಡ್ಯಂತ್ರಕ್ಕೆ ಬಲಿಯಾದ ಕೆಲವರಿಂದ ಮಣಿಪುರದಲ್ಲಿ ಇಂತಹ ಘಟನೆ ನಡೆದಾಗ, ಬೊಬ್ಬಿರಿದ ಶಕ್ತಿಗಳು ಈಗ ಸುಮ್ಮನಾಗಿವೆ. ಕಾಂಗ್ರೆಸ್ ನಾಯಕರು ಈಗ ಪ್ರತಿಕ್ರಿಯಿಸುತ್ತಿಲ್ಲ. ಕರ್ನಾಟಕ ರಾಜ್ಯಕ್ಕೆ ಇದು ಕಳಂಕ ತಂದಿದೆ. ಘಟನೆಯನ್ನು ಇಡೀ ರಾಜ್ಯದ ಜನತೆ ಖಂಡಿಸಿದ್ದು, ಸರ್ಕಾರ ಇನ್ನೂ ಯಾವುದೇ ಗಂಭೀರ ಕ್ರಮಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿಲ್ಲ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿದೆ ಎನ್ನುವುದು ಸಾಕ್ಷಿಯಾಗಿದೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಮಹಿಳಾ ಮೋರ್ಚಾದ ಸುನೀತ ಅಣ್ಣಪ್ಪ, ರಶ್ಮಿ ಶ್ರೀನಿವಾಸ್, ಲಕ್ಷ್ಮೀ ಶಂಕರ್‌ನಾಯಕ್, ಸುವರ್ಣ ಶಂಕರ್, ಅನಿತಾ ರವಿಶಂಕರ್, ಆರತಿ ಅ.ಮಾ.ಪ್ರಕಾಶ್, ನಗರಾಧ್ಯಕ್ಷ ಜಗದೀಶ್, ಎನ್.ಡಿ.ಸತೀಶ್, ಜ್ಞಾನೇಶ್ವರ್ ಮತ್ತಿತರರು ಇದ್ದರು.---------------------------------------ಪೋಟೋ: 16ಎಸ್‌ಎಂಜಿಕೆಪಿ05ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿರುವ ಘಟನೆ ಖಂಡಿಸಿ ಶಿವಮೊಗ್ಗ ಬಿಜೆಪಿ ಮಹಿಳಾ ಮೋರ್ಚಾದಿಂದ ಶನಿವಾರ ನಗರದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.