ಶ್ರೀಗಳು ವ್ಯಸನಮುಕ್ತ ಸಮಾಜಕ್ಕೆ ಕೈಗೊಂಡ ಕ್ರಮ ಶ್ಲಾಘನೀಯ

| Published : Aug 03 2024, 12:30 AM IST

ಸಾರಾಂಶ

ಮಾದಕ ವಸ್ತು, ತಂಬಾಕು ವಸ್ತುಗಳ ಸೇವನೆಯಿಂದ ಮಾನವನ ದೇಹವಲ್ಲದೇ ಮನಸ್ಸು ಮತ್ತು ಸ್ವಾಸ್ಥ್ಯ ಹಾಳಾಗುತ್ತದೆ.

ಕೊಟ್ಟೂರು: ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದು ಕೊಟ್ಟೂರು ಉಪತಹಸೀಲ್ದಾರ್ ಅನ್ನದಾನೇಶ ಬಿ. ಪತ್ತಾರ್ ಹೇಳಿದರು.

ಕೊಟ್ಟೂರು ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ನಿಮಿತ್ತ ವ್ಯಸನ ಮುಕ್ತ ದಿನಾಚರಣೆಯ ಅಂಗವಾಗಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಟ್ಟೂರು ಉಪ ತಹಸೀಲ್ದಾರ್ ಮಾತನಾಡಿದರು.

ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ''''''''ವ್ಯಸನ ಮುಕ್ತ ಸಮಾಜ'''''''' ನಿರ್ಮಾಣಕ್ಕೆ ೧೯೭೫ರಿಂದ ಕೈಗೊಂಡ ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು. ಕುಡಿತದ ಚಟದಿಂದ ಪ.ಜಾತಿಯ ಯುವಕನೊಬ್ಬ ನಿಧನದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳು ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು, ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು ಎಂದರು.

ಮಾದಕ ವಸ್ತು, ತಂಬಾಕು ವಸ್ತುಗಳ ಸೇವನೆಯಿಂದ ಮಾನವನ ದೇಹವಲ್ಲದೇ ಮನಸ್ಸು ಮತ್ತು ಸ್ವಾಸ್ಥ್ಯ ಹಾಳಾಗುತ್ತದೆ. ಅಲ್ಲದೇ ಮಾನವನ ಆರ್ಥಿಕ, ಸಾಮಾಜಿಕ ಸ್ಥಿತಿ ಅಧೋಗತಿಗೆ ಇಳಿಯುತ್ತದೆ ಎಂದು ವಿವಿಧ ಶ್ಲೋಗನ್ ಗಳ ಹೇಳುವ ಮೂಲಕ ಪಟ್ಟಣದಲ್ಲಿ ಜಾಗೃತಿ ಮೂಡಿಸಲಾಯಿತು. ಇದೇ‍ವೇಳೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ಸಮಯದಲ್ಲಿ ಶಾಲಾ ಮಕ್ಕಳಿಗೆ ನಡೆಸಿದ ಪ್ರಬಂಧ ಸ್ವರ್ಧೆಯಲ್ಲಿ ವಿಜೇತ ಮಕ್ಕಳಾದ ಚಿನ್ಮಯಿ ಸಿಎಂಎಂ, ಪ್ರಿಯಾಂಕಾ ಹಾಗೂ ರಾಜೇಶ್ವರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. ನಂತರ ಸರ್ಕಾರಿ ಬಾಲಕರ ಪ್ರೌಢಶಾಲಾ ಮಕ್ಕಳಿಂದ ಉಜ್ಜಿನಿ ಸರ್ಕಲ್‌ನಿಂದ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು.ಈ ಸಮಯದಲ್ಲಿ ಶಿರಸ್ತೇದಾರ ರೇಖಾ ಎಸ್., ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ, ಶಿಕ್ಷಣ ಇಲಾಖೆಯ ನಿಂಗಪ್ಪ, ಬಿಆರ್‌ಪಿ ರವೀಂದ್ರ, ಸಿಆರ್‌ಪಿ ಅಜ್ಜಯ್ಯ ಜಿ., ಕೊಟ್ರೇಶ್, ಮಹಾಂತೇಶ, ವೀರಭದ್ರೇಶ್ವರ ಪ್ರೌಢಶಾಲೆಯ ಮುಖ್ಯಗುರು ಗೋಪಾಲಕೃಷ್ಣ ಎಸ್., ಶಿವಕುಮಾರ ಡಿ., ಹರೀಶ, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಸಿ.ಮ. ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.