ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಬಿಹಾರದಲ್ಲಿರುವ ಬುದ್ಧಗಯಾದ ಮಹಾಬೋಧಿ, ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬುದ್ಧರಿಗೆ ವಹಿಸಬೇಕೆಂದು ಚೆನ್ನಲಿಂಗನಹಳ್ಳಿ ಚೇತವನ ಬುದ್ಧವಿಹಾರದ ಮನೋರಖ್ಖಿತ ಬಂತೇಜಿ ಆಗ್ರಹಿಸಿದರು.ಪಟ್ಟಣದಲ್ಲಿ ಹೊನ್ನೂರು ಗ್ರಾಮದ ಮಹಾವನ ಬುದ್ಧವಿಹಾರದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ತಥಾಗತ ಗೌತಮ ಬುದ್ಧರಿಗೆ ಜ್ಞಾನೋದಯವಾದ ಸ್ಥಳ ಹಾಗೂ ಪ್ರಪಂಚದಲ್ಲೇ ಬುದ್ಧರಿಗೆ ಪವಿತ್ರ ಸ್ಥಳವಾದ ಬಿಹಾರದ ಬುದ್ಧಗಯಾದ ಮಹಾಬೋಧಿ, ಮಹಾವಿಹಾರದ ಬೋದ್‌ಗಯ ಟೆಂಪಲ್ ಆಕ್ಟ್-೧೯೪೯ನ್ನು ರದ್ದುಗೊಳಿಸಬೇಕು. ಮಹಾವಿಹಾರದ ಆಡಳಿತ ಸಂಪೂರ್ಣ ಬುದ್ಧರಿಗೆ ವಹಿಸಬೇಕೆಂದು ಆಗ್ರಹಿಸಿ ನೂರಾರು ಬೌದ್ಧ ಬಿಕ್ಕುಗಳು ಕಳೆದ ಫೆ.೧೨ ರಿಂದಲೂ ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಶಾಂತಿಯುತವಾಗಿ ನಡೆಸಲಾಗುತ್ತಿದೆ. ಆದರೆ, ಈ ಹೋರಾಟವನ್ನು ವಿಫಲಗೊಳಿಸಲು ಕೆಲವು ಪುರೋಹಿತಶಾಹಿಗಳು ನಿರಂತರ ಯತ್ನಗಳನ್ನು ನಡೆಸುತ್ತಲೇ ಇವೆ. ಅಲ್ಲದೆ ಇದರ ಮುಂಭಾಗ ನಕಲ ಬುದ್ಧ ಬಿಕ್ಕುಗಳನ್ನು ಸೃಷ್ಟಿಸಿ ಅವರಿಗೆ ಭೋಜನ ನೀಡಿ ನಮ್ಮ ಹೋರಾಟಕ್ಕೆ ನಮಗೆ ಅವಮಾನ ಮಾಡಿದ್ದಾರೆ. ಅಲ್ಲದ ಮಹಾಬೋಧಿಯ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಆದರೂ ಕೂಡ ಬುದ್ಧ ಪರಂಪರೆಯಿಂದ ಬಂದಿರುವ ಬಿಕ್ಕುಗಳು ಶಾಂತಿಯುತವಾಗಿ ತಮ್ಮ ಸತ್ಯಾಗ್ರಹ ಮುಂದುವರೆಸಿದ್ದರು. ಆದರೆ ಬಿಹಾರದ ಸರ್ಕಾರದ ಕುತಂತ್ರ ಬುದ್ಧಿಯಿಂದ ಫೆ.೨೭ರಂದು ಮಧ್ಯರಾತ್ರಿ ಸಮಯದಲ್ಲಿ ಸತ್ಯಾಗ್ರಹ ನಿರತ ಬಂತೇಜಿಗಳು ಮಲಗಿರುವ ಸ್ಥಳದಲ್ಲಿ ಅನಾರೋಗ್ಯದ ಸುಳ್ಳು ನೆಪವೊಡ್ಡಿ ಅವರನ್ನು ಬಲವಂತವಾಗಿ ಆ್ಯಂಬುಲೆನ್ಸ್‌ನಲ್ಲಿ ಎತ್ತಿಹಾಕಲಾಗಿದೆ. ಸತ್ಯಾಗ್ರಹಕ್ಕೆ ಅನುಮತಿ ಪಡೆದಿಲ್ಲ ಎಂಬ ವೆಪವೊಡ್ಡಿ ಪೊಲೀಸ್ ವ್ಯಾನ್‌ಗೆ ಬಲವಂತವಾಗಿ ಎತ್ತಿ ಹಿಂಸೆ ನೀಡಿ ದೌರ್ಜನ್ಯ ಎಸೆಗಲಾಗಿದೆ. ಮಹಿಳೆ ಬಿಕ್ಕುಣಿಯರೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರತಿಭಟನಾನಿರತ ಬಂತೇಜಿಗಳನ್ನು ಕನಿಷ್ಠ ಆಸ್ಪತ್ರೆಗೂ ದಾಖಲಿಸಿಲ್ಲ. ಬಿಹಾರ ಪೊಲೀಸರ ಇಂತಹ ಅಮಾನವೀಯ ಕ್ರಮವನ್ನು ಖಂಡಿಸಿ ದೇಶಾದ್ಯಂತ ಅನೇಕ ಕಡೆ ಬೌದ್ಧ ಹಾಗೂ ದಲಿತಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಬಿಹಾರ ಸರ್ಕಾರ ಮತ್ತು ಪೊಲೀಸರ ಇಂತಹ ಅಮಾನವೀಯ ಕೃತ್ಯ ನಮ್ಮಂತಹ ಬೌದ್ಧ ಧರ್ಮಿಯರಿಗೆ ಅಪಾರ ನೋವುಂಟು ಮಾಡಿದೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ನಮ್ಮ ಜಿಲ್ಲೆಯ ಬೌದ್ಧ ಸಂಘಸಂಸ್ಥೇಗಳು ಮತ್ತಯ ದಲಿತಪರ ಸಂಘಟನೆಗಳು ಜಿಲ್ಲಾ ಕೇಂದ್ರವೂ ಸೇರಿದಂತೆ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುತ್ತಿವೆ ಎಂದರು.ಹೊನ್ನೂರು ಮಹಾವನ ಬುದ್ಧವಿಹಾರದ ಬುದ್ಧರತ್ನ ಬಂತೇಜಿ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿಗೆ ತಲುಪಿ ಗ್ರೇಡ್-೦೨ ತಹಸೀಲ್ದಾರ್ ಶಿವರಾಜುರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮುಖಂಡರಾದ ಚೇತವನದ ಸುಗತಪಾಲ ಬಂತೇಜಿ, ಸಿ. ರಾಜಣ್ಣ, ಕಂದಹಳ್ಳಿ ನಾರಾಯಣ, ಸಂಗಸೇನ, ಮಹೇಶ, ಸಿ.ಎಂ. ಕೃಷ್ಣಮೂರ್ತಿ, ಶಾಂತರಾಜು, ಸುಂದರ್ ಕಲಿವೀರ್, ನಾಗರಾಜು, ದೊರೆಸ್ವಾಮಿ, ಕುಮಾರ್, ರವಿಚಂದ್ರ, ಚಾಮರಾಜು, ಮಹೇಶ್, ಕಿರಣ್, ಚಂದ್ರು, ನಂಜುಂಡ, ಸುರೇಶ್, ಜಲೇಂದ್ರ, ನಂಜುಂಡಯ್ಯ, ಶಂಕರಮೂರ್ತಿ ಸೇರಿದಂತೆ ಅನೇಕರು ಇದ್ದರು.