ಸಾರಾಂಶ
ಕನಕಪುರ: ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಒಂದೇ ಒಂದು ಹಗರಣಕ್ಕೆ ಆಸ್ಪದ ಕೊಡದೆ ನಿಷ್ಕಳಂಕವಾಗಿ ದಿಟ್ಟವಾದ ನಿರ್ಧಾರಗಳನ್ನು ಕೈಗೊಂಡ ಪರಿಣಾಮ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರೈತರು, ಸೈನಿಕರು, ಸಾಮಾನ್ಯ ಜನತೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರದಾನ ಕಾರ್ಯದರ್ಶಿ ನಾಗಾನಂದ್ ತಿಳಿಸಿದರು.
ನಗರದ ಕೋಟೆ ಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ನಗರ ಘಟಕದ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆ ಸುಳ್ಳು-ಸತ್ಯಗಳ ನಡುವೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಏನೇ ಅಪಪ್ರಚಾರ ಮಾಡಿದರೂ ದೇಶದ ಮತದಾರರು ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷದ ಮೇಲೆ ವಿಶ್ವಾಸ ಇಟ್ಟಿದ್ದು ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ತಂದುಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನೂತನ ಪದಾಧಿಕಾರಿಗಳು ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರು "ನನ್ನ ದೇಶ ನನ್ನ ಮತ " ಎಂಬ ಘೋಷಣೆಯೊಂದಿಗೆ ಮುಂದಿನ ಎರಡು ತಿಂಗಳ ಕಾಲ ಹಗಲಿರುಳು ಶ್ರಮಿಸಿ ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಯ ವೈಫಲ್ಯ ಕುರಿತ ಜನರಿಗೆ ವಿವರಿಸಲಿದ್ದೇವೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವೊಲಿಸುವಂತೆ ಸಲಹೆ ನೀಡಿದರು.
ನಗರ ಮಂಡಲ ಅಧ್ಯಕ್ಷ ಕೆ.ಎಂ.ಮಂಜುನಾಥ್ ಮಾತನಾಡಿ, ದೇಶದ ಅಭಿವೃದ್ಧಿ ಹಾಗೂ ಒಳಿತಿಗಾಗಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಗುರಿಯಾಗಿದೆ. ಇಂದು ಇಡೀ ವಿಶ್ವವೇ ಭಾರತದ ನಾಯಕತ್ವವನ್ನು ಗೌರವಿಸುವುದರ ಜೊತೆಗೆ ನಮ್ಮ ಸಂಸ್ಕೃತಿಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಕಾರಣ ಮೋದಿ ಯವರ ಭ್ರಷ್ಟಾಚಾರರಹಿತ ಆಡಳಿತ, ದಿಟ್ಟ ನಿರ್ಧಾರಗಳು ಎಂಬುದು ಗಮನಾರ್ಹ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎದುರಾಳಿ ಪಕ್ಷಗಳಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದ್ದು ದೇಶಕ್ಕೆ ಸುಭದ್ರ ಆಡಳಿತ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಹಾಗೂ ನಮ್ಮ ನೆರೆಯ ರಾಷ್ಟ್ರಗಳ ಆರ್ಥಿಕ ಸ್ಥಿತಿಯನ್ನು ಗಮನಿಸಿರುವ ದೇಶದ ಜನ ನೆಮ್ಮದಿಯ ಜೀವನ ನಡೆಸಲು ಬಿಜೆಪಿಯೊಂದೇ ಪರಿಹಾರ ಎಂದು ತೀರ್ಮಾನಿಸಿದ್ದಾರೆ ಎಂದರು.ಸಭೆಯಲ್ಲಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಡಿ. ಶ್ರೀನಿವಾಸ್, ನಗರ ಮಂಡಲದ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಮಹಿಳಾ ಘಟಕದ ಪವಿತ್ರ, ವರಲಕ್ಷ್ಮಿ, ಪ್ರಮೀಳಾ, ಹಿರಿಯ ಮುಖಂಡ ರಾಜೇಶ್, ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷ ಶೇಖರ್ ಇತರರಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರದ ಕೋಟೆ ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ನಗರ ಮಂಡಲದ ನೂತನ ಪದಾಧಿಕಾರಿಗಳ ಅಭಿನಂದನಾ ಸಭೆ ನಡೆಯಿತು.