ಸಾರಾಂಶ
13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
12ನೆಯ ಶತಮಾನದಲ್ಲಿನ ಶರಣರು ಧಾರ್ಮಿಕ, ಸಾಮಾಜಿಕ, ಆರ್ಥಿಕ ಭಾವನಾತ್ಮಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಗುರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೊಂದಿದೆ ಎಂದು ಸುತ್ತೂರಿನ ವೀರಸಿಂಹಾಸನ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.ನಗರದ ಬಸವ ಕೇಂದ್ರದಲ್ಲಿ ನಡೆಯುತ್ತಿರುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾತಃ ಸ್ಮರಣೀಯರು ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶರಣ ಜೀವನದ ವಚನ ಇತರೆ ವಿಚಾರಧಾರೆಗಳನ್ನು ಸಾರ್ವಜನಿಕರ ಮನಮುಟ್ಟುವಂತೆ ಈ ಶರಣ ಸಾಹಿತ್ಯ ಸಮ್ಮೇಳನ ನಡೆಯುತ್ತಾ ಬಂದಿದೆ. ಪರಿಷತ್ ರಾಜ್ಯವ್ಯಾಪ್ತಿ ಕಾರ್ಯ ನಿರ್ವಹಿಸುತ್ತಿದ್ದು, ದೆಹಲಿಯಲ್ಲಿ ಅನುಭಾವ ಸಾಹಿತ್ಯದ ಬಗ್ಗೆ ಕಾರ್ಯಕ್ರಮ ನೀಡಿದೆ ಎಂದರು.ಪ್ರತಿನಿತ್ಯ ಕಾರ್ಯಕ್ರಮಗಳು ನಡೆದು ಧಾರ್ಮಿಕ ವಿಚಾರಗಳನ್ನು ಪಸರಿಸುತ್ತಿದೆ ಜಯದೇವ ಜಗದ್ಗುರುಗಳಿಗೆ ಐತಿಹಾಸ ಸಂಘಟನೆಯನ್ನು ಮಾಡಿದ ಕೀರ್ತಿ ದೊರೆಯುತ್ತದೆ. ಈ ಭಾಗದಲ್ಲಿ ತಿಪ್ಪೇರುದ್ರಸ್ವಾಮಿಯವರು ಪವಾಡಗಳ ಮೂಲಕ ಪ್ರಸಿದ್ಧರಾಗಿದ್ದಂತಹ ಶ್ರೀಗಳಾಗಿದ್ದರು. ಶಿವಕುಮಾರ ಮಹಾಸ್ವಾಮಿಗಳು ವಚನ ಸಾಹಿತ್ಯವನ್ನು ಕ್ರೋಢೀಕರಿಸುವಲ್ಲಿ ಶ್ರಮ ವಹಿಸಿದ್ದವರಾಗಿದ್ದಾರೆ. ಅವರು ಧಾರ್ಮಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ನುಡಿದರು.
ಕೂಡಲಸಂಗಮ ಲಿಂಗಾಯಿತ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ, 20, 21ನೇ ಶತಮಾನದಲ್ಲಿ ಇಡೀ ಸಮಾಜದ ಘನತೆ ಸ್ವಾಭಿಮಾನವನ್ನು ಎತ್ತಿ ಹಿಡಿದವರು ಪರಮ ಪೂಜ್ಯ ಜಯದೇವ ಜಗದ್ಗುರುಗಳು ಮತ್ತು ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮಿಗಳು. ಶಿಕ್ಷಣ, ಅನ್ನ, ಸಂಸ್ಕಾರ ಈ ಮೂರನ್ನು ಸಮಾಜಕ್ಕೆ ಕೊಟ್ಟವರು ಬಸವಣ್ಣನವರು. ನಂತರ ಅದನ್ನು ಮುಂದುವರೆಸಿಕೊಂಡು ಬಂದದ್ದು ಮುರುಘಾಮಠ ಮತ್ತು ಸುತ್ತೂರು ಮಠ ಎಂದು ಹೇಳಿದರು. ಅಸಂಘಟಿತ ಸಮಾಜ ಸಂಘಟಿಸಲು ರಾಜ್ಯವನ್ನು ಸುತ್ತಿದರು ಜಯದೇವ ಜಗದ್ಗುರುಗಳು. ಹಸಿದವರಿಗೆ ಅನ್ನದ ಜೊತೆಗೆ ಶಿಕ್ಷಣ ಕೊಟ್ಟಿದ್ದಾರೆ. ಅವರೆಲ್ಲ ಮಠ ಬಿಟ್ಟು ಸಮಾಜ ಕಟ್ಟುವ ಕೆಲಸ ಮಾಡಿದರು. ಶರಣರಿಗೆ ಸಂಘಟನೆ ಮಾಡುವ ಶಕ್ತಿಯಿದೆ ಎಂದು ತೋರಿಸಿಕೊಟ್ಟವರು ದೇಶಿಕೇಂದ್ರ ಸ್ವಾಮಿಗಳು ಎಂದರು.ಪಂಚಮಸಾಲಿ ಗುರುಪೀಠದ ಡಾ.ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವತತ್ವ ಹೇಗಿರಬೇಕು ಎಂದು ಹೇಳಿ ಬಾಳಿದವರು ದೇಶಿಕೇಂದ್ರ ಸ್ವಾಮಿಗಳು. ನಮಗೆ ಬದುಕಿನಲ್ಲಿ ಹೇಗೆ ಬಾಳಬೇಕೆಂಬುದನ್ನು ಕಲಿಸಿಕೊಟ್ಟವರು ಸಿದ್ದೇಶ್ವರ ಸ್ವಾಮಿಗಳು. ಸಾವಿನ ಕೊನೆಯ ಕ್ಷಣದಲ್ಲೂ ಸಹ ವಚನಗಳನ್ನು ಪಸರಿಸಿದವರು. ಸಿದ್ದೇಶ್ವರ ಸ್ವಾಮಿಗಳು ಸೂಕ್ಷ್ಮ ಜೀವಿಯಾಗಿದ್ದರು ಎಂದು ನುಡಿದರು.
ಈ ವೇಳೆ ಹಿರಿಯ ಪತ್ರಕರ್ತ ಶ್ರೀ ದೊಣೆಹಳ್ಳಿ ಗುರುಮೂರ್ತಿ, ವಿಜಯಪುರ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಡಾ. ಮಹಾಂತೇಶ ಬಿರಾದಾರ್, ಮೈಸೂರಿನ ಪ್ರೊ.ಮೊರಬದ ಮಲ್ಲಿಕಾರ್ಜುನ, ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಸಿದ್ದಗಂಗಪ್ಪ ಹಾಗೂ ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿದರು.ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಸಿದ್ದರಾಮ ಬೆಲ್ದಾಳ ಶರಣರು, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಮಹಾಸ್ವಾಮಿಗಳು, ಗುರುಮಠಕಲ್ ಖಾಸಾ ಶ್ರೀ, ಮುರುಘಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಿಜಾಪುರ ಶ್ರೀ ಕೈವಲ್ಯನಾಥ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ್ಷ ಡಾ.ಸಿ.ಸೋಮಶೇಖರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್, ಹರಗುರುಚರಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ಸಿ.ಸೋಮಶೇಖರ್ ರಚಿಸಿದ ‘ಮಾತೆಂಬುದು ಜ್ಯೋತಿರ್ಲಿಂಗ’ ಕೃತಿ ಲೋಕಾರ್ಪಣೆ ಮಾಡಲಾಯಿತು. ಬಾಪೂಜಿ ವಿದ್ಯಾಸಂಸ್ಥೆಯವರು ದೇವಮಾನವ ಸಿದ್ದೇಶ್ವರ ಶ್ರೀ ಕುರಿತು ರೂಪಕ ನಡೆಸಿಕೊಟ್ಟರು. 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ನಿಮಿತ್ತ ತುಮಕೂರಿನ ಗಮಕಿ ಪೂರ್ಣಿಮಾ ವೆಂಕಟೇಶ್ ಹಾಗೂ ಗಮಕ ಕಲಾಶ್ರೀ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯನವರು ಶಿವಶರಣರ ವಾಚನ ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಟ್ಟರು.