ರಾಜ್ಯದಲ್ಲಿ 100 ಕಾಂಗ್ರೆಸ್ ಭವನ ಸ್ಥಾಪಿಸುವ ಉದ್ದೇಶ

| Published : May 11 2025, 11:49 PM IST

ಸಾರಾಂಶ

ರಾಮನಗರ: ಮಹಾತ್ಮ ಗಾಂಧಿರವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ 100 ವರ್ಷಗಳ ಸ್ಮರಣಾರ್ಥ ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ರಾಮನಗರ: ಮಹಾತ್ಮ ಗಾಂಧಿರವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ 100 ವರ್ಷಗಳ ಸ್ಮರಣಾರ್ಥ ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಆಂಜನೇಯಸ್ವಾಮಿ ಆರ್ಚ್ ಮುಂಭಾಗದ ಸ್ಥಳದಲ್ಲಿ ಆಯೋಜಿಸಿದ್ದ ರಾಮನಗರ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ - ಯುವ ಪರ್ವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಆನ್‌ಲೈನ್ ಮೂಲಕ 100ಸ್ಥಳದಲ್ಲಿ ನಿರ್ಮಿಣವಾಗಲಿರುವ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುವುದು. ಈ ವೇಳೆ ರಾಹುಲ್ ಗಾಂಧಿ ಅವರು ಕಾರ್ಯಕರ್ತರ ಜತೆಗೂ ಚರ್ಚೆ ನಡೆಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೇ 20ಕ್ಕೆ ಎರಡು ವರ್ಷ ತುಂಬಲಿದೆ. ಹಾಗಾಗಿ ವಿಜಯನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ. ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಲಾಗುತ್ತಿದೆ. ಯುದ್ಧದ ನಡೆಯುತ್ತಿರುವ ಕಾರಣ ಕಾರ್ಯಕ್ರಮ ಆಯೋಜಿಸುವ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಈ ದೊಡ್ಡ ಸಮಾವೇಶದಲ್ಲಿ 1 ಲಕ್ಷ ಗೊಲ್ಲರ ತಾಂಡ್ಯದವರನ್ನು ಒಂದು ಕಡೆ ಸೇರಿಸಿ ಪಟ್ಟ ವಿತರಣೆ ಮಾಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಯಾರೂ ಶಾಶ್ವತ ಅಲ್ಲ:

ದೇಶದ ಇತಿಹಾಸ ಕಾಂಗ್ರೆಸ್ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಿರಿಯರಿಂದ ಹಿಡಿದು ಹಿರಿಯರ ತನಕ ಅಧಿಕಾರ ನೀಡುತ್ತದೆ. ಇದಕ್ಕೆ ನಾನೇ ಉತ್ತಮ ಉದಾಹರಣೆ. ಬೇರೆ ಪಕ್ಷಗಳದ್ದು ಭಾವನಾತ್ಮಕ ರಾಜಕಾರಣವಾದರೆ, ಕಾಂಗ್ರೆಸ್‌ನದ್ದು ಜನರ ಜೀವನದ ರಾಜಕಾರಣ. ರಾಜಕಾರಣದಲ್ಲಿ ಯಾರು ಶಾಶ್ವತ ಅಲ್ಲ. ಕಾಲ ಚಕ್ರ ತಿರುಗಿದಂತೆ ನಡೆಯುತ್ತಿರುತ್ತದೆ. ಪಕ್ಷದ ಕಾರ್ಯಕರ್ತರು ಎದೆಗುಂದಬಾರದು. ದೇವೇಗೌಡರವರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಅಂಬರೀಶ್ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಸಿಎಂ ಲಿಂಗಪ್ಪ ಅವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದೆವು. ನಾನು 8 ಬಾರಿ ಶಾಸಕನಾಗಿದ್ದೇನೆ. ಯಾರು ಎದೆಗುಂದಬಾರದು, ಅಧಿಕಾರ ಶಾಶ್ವತ ಅಲ್ಲ. ಒಂದಲ್ಲ ಒಂದು ದಿನ ಅವರು ಕೆಳಗೆ ಇಳಿಯಬೇಕು ಎಂದು ಹೇಳಿದರು.

ಈ ಹಿಂದೆ ನಾನು ಸಹ ಯುವ ಕಾಂಗ್ರೆಸ್ ಮೂಲಕವೇ ರಾಜಕಾರಣ ಪ್ರವೇಶ ಮಾಡಿದ್ದೆ. ಶಾಸಕನಾಗಿಯು ಯುವ ಕಾಂಗ್ರೆಸ್ ಪದಾಧಿಕಾರಿಯಾಗಿ ಮುಂದುವರೆದಿದ್ದೆ. ನಂತರ ರಾಜೀನಾಮೆ ನೀಡಿದೆ. ಯುವ ಕಾಂಗ್ರೆಸ್‌ನಲ್ಲಿ ಬೆಳೆದವರು ಶಾಶ್ವತವಾಗಿ ನಾಯಕರಾಗಿ ಉಳಿದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಇಕ್ಬಾಲ್ ಹುಸೇನ್,ಶಾಸಕ ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ರಂಗನಾಥ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಕೆ.ರಾಜು, ಅಶ್ವತ್ಥ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್, ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್, ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಮುನಿರಾಜು, ಮುಖಂಡರಾದ ವಿಶ್ವನಾಥ್, ಸಿಎನ್ ಆರ್ ವೆಂಕಟೇಶ್, ವಿ.ಎಚ್.ರಾಜು, ರೈಡ್ ನಾಗರಾಜ್, ಪ್ರಾಣೇಶ್ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌............

ರಾಮನಗರ ಅಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ : ಡಿಕೆಶಿ

ಜಿಲ್ಲೆಯ ಜನ ಉದ್ಯೋಗಕ್ಕೆಂದು ಬೆಂಗಳೂರಿಗೆ ಹೋಗುತ್ತಿದ್ಧಾರೆ. ಇದನ್ನು ತಪ್ಪಿಸಿ ಜಿಲ್ಲೆಯಲ್ಲಿಯೇ ಉದ್ಯೋಗ ಸೃಷ್ಟಿಸುವ ಸಲುವಾಗಿ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕಾರಣ ಮಾಡಲಾಗುತ್ತಿದೆ

ಇಷ್ಟೇ ಅಲ್ಲದೆ, ಆಸ್ತಿ ಮೌಲ್ಯ ಹೆಚ್ಚಳ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುನರುಚ್ಛರಿಸಿದರು. ಯುವ ಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ಕನಕಪುರ ಇದ್ದ ಲೋಕಸಭಾ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಎಂದು ಮರುನಾಮಕರಣ ಮಾಡಲಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆಯಾದರೂ ರಾಮನಗರವೇ ಜಿಲ್ಲಾ ಕೇಂದ್ರವಾಗಿರುತ್ತದೆ ಎಂದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬಾರದು ಎಂದು ದೇವೇಗೌಡ ಹಾಗೂ ಸಂಸದ ಡಾ.ಸಿ.ಎನ್‌ಮಂಜುನಾಥ್ ಅವರು ಪತ್ರ ಬರೆದಿದ್ದಾರೆ. ಕುಮಾರಸ್ವಾಮಿ ಅವರು ರಚನೆ ಮಾಡಲು ಯೋಚಿಸಿದ್ದರು ಎಂದು ಹೇಳಿದರು.

11ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಆಂಜನೇಯಸ್ವಾಮಿ ಆರ್ಚ್ ಮುಂಭಾಗದ ಸ್ಥಳದಲ್ಲಿ ಆಯೋಜಿಸಲಾಗಿದ್ದ ರಾಮನಗರ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ - ಯುವ ಪರ್ವ ಸಮಾರಂಭವನ್ನು ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.