ಸಾರಾಂಶ
ಕಳೆದ ಬಾರಿಗಿಂತ ಈ ಬಾರಿ ರಾಜಧಾನಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಾಯುಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಕಳೆದ ವರ್ಷದ (2023) ದೀಪಾವಳಿಗೆ ಹೋಲಿಸಿದರೆ ಈ ವರ್ಷ ದೀಪಾವಳಿ ಸಂದರ್ಭದಲ್ಲಿ ವಾಯು ಗುಣಮಟ್ಟದಲ್ಲಿ (ಎಕ್ಯುಐ) ಸುಧಾರಣೆ ಕಂಡು ಬಂದಿದೆ. ಅಲ್ಲದೇ, ಈ ವರ್ಷ ಭಾರಿ ಪ್ರಮಾಣದ ಪಟಾಕಿ ಸಿಡಿತದ ನಡುವೆಯು ನಗರದ 2 ಪ್ರದೇಶಗಳಲ್ಲಿ ಸಾಮಾನ್ಯ ದಿನಗಳಿಗಿಂತ ವಾಯು ಗುಣಮಟ್ಟ ಉತ್ತಮವಾಗಿತ್ತು ಎಂಬುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗವಾಗಿದೆ.ಕಳೆದ ವರ್ಷ ದೀಪಾವಳಿ ವೇಳೆ ನಗರದ ಸರಾಸರಿ ಎಕ್ಯುಐ 159 ಇದ್ದದ್ದು, ಈ ವರ್ಷ 120ಕ್ಕೆ ಇಳಿದಿದೆ. ಆದರೆ, ಈ ವರ್ಷದ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದೀಪಾವಳಿ ವೇಳೆ ಮಾಲಿನ್ಯ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
ಈ ವರ್ಷ ಅ.24ರಂದು ಸಿಲ್ಕ್ ಬೋರ್ಡ್‌ನಲ್ಲಿ ಎಕ್ಯುಐ 141 ಇತ್ತು. ದೀಪಾವಳಿಯ 3 ದಿನ ಸರಾಸರಿ ಎಕ್ಯುಐ 106ಕ್ಕೆ ಇಳಿಕೆಯಾಗಿದೆ. ಮೈಸೂರು ರಸ್ತೆ ಕರ್ನಾಟಕ ವಿದ್ಯುತ್ ಕಂಪನಿ ಮಾಪನದಲ್ಲಿ ಅ.24ರಂದು ಎಕ್ಯುಐ 117 ಇದ್ದದ್ದು, ದೀಪಾವಲಿ ವೇಳೆ 103ಕ್ಕೆ ಇಳಿಕೆಯಾಗಿದೆ.ಆದರೆ, ಜಯನಗರ, ಹೆಬ್ಬಾಳ, ನಿಮ್ಹಾನ್ಸ್, ಪೀಣ್ಯ ಮುಂತಾದ ಪ್ರದೇಶದಲ್ಲಿ ವಾಯು ಗುಣಮಟ್ಟ ಡಿ.24ರಂದು 100ರ ಒಳಗೆ ಇದ್ದದ್ದು, ದೀಪಾವಳಿ ವೇಳೆ ಏರಿಕೆಯಾಗಿ 100 ರಿಂದ 185ರ ವರೆಗೆ ದಾಖಲಾಗಿದೆ.
ದೀಪಾವಳಿ ಹಬ್ಬಕ್ಕೆ ಮೂರು ದಿನಗಳ ಕಾಲ ಹಬ್ಬಕ್ಕೆ ರಜೆಯಿಂದ ವಾಹನ ಸಂಚಾರ ಕಡಿಮೆ ಇರುವುದು ಕೂಡ ವಾಯು ಮಾಲಿನ್ಯ ನಿಯಂತ್ರಣದಲ್ಲಿರಲು ಕಾರಣವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಹಬ್ಬದ ಮುಂಚಿನ 7 ದಿನಗಳು ಹಾಗೂ ಹಬ್ಬದ ನಂತರದ 7 ದಿನಗಳ ವರೆಗೆ ವಾಯು ಗುಣಮಟ್ಟ ಹಾಗೂ ಶಬ್ಧದ ಮಟ್ಟದ ವಿವಿಧ ಪರಿಮಾಣಗಳ ವಿಶೇಷ ಮಾಪನವನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚಿಸಿತ್ತು. ಅದರಂತೆ ನಗರದ 11 ಕಡೆಗಳಲ್ಲಿ ಅ.24ರಿಂದ ನ.7ರ ವರೆಗೆ ನಿರಂತರವಾಗಿ ಮಾಪನ ಮಾಡಲಾಗುತ್ತಿದೆ.