ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ಸ್ವಯಂ ಉದ್ಯೋಗದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ‘ಅಕ್ಕ ಕೆಫೆ’ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಭೋಸರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಮಾನ್ವಿ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ಸ್ವಯಂ ಉದ್ಯೋಗದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ‘ಅಕ್ಕ ಕೆಫೆ’ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಭೋಸರಾಜು ಹೇಳಿದರು.

ಪಟ್ಟಣದ ತಾಪಂ ಕಾರ್ಯಾಲಯದ ಆವರಣದಲ್ಲಿ ನೂತನವಾಗಿ ಆರಂಭಿಸಲಾಗಿರುವ ‘ಅಕ್ಕ ಕೆಫೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಅಕ್ಕ ಕೆಫೆ’ಯಂತಹ ಘಟಕಗಳ ಮೂಲಕ ಮಹಿಳಾ ಸ್ವಸಹಾಯ ಸಂಘಗಳಿಗೆ ಮಾರುಕಟ್ಟೆ ಹಾಗೂ ಉದ್ಯೋಗಾವಕಾಶ ದೊರೆಯಲಿದ್ದು, ಸ್ಥಳೀಯವಾಗಿ ತಯಾರಿಸುವ ಆಹಾರ ಪದಾರ್ಥಗಳು, ಉಪಹಾರ ಹಾಗೂ ಪಾನೀಯಗಳ ಮಾರಾಟದ ಮೂಲಕ ಆದಾಯ ಗಳಿಸಲು ಅವಕಾಶ ಸಿಗಲಿದೆ. ಮಹಿಳೆಯರ ಕೌಶಲ್ಯವನ್ನು ಉದ್ಯಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು.

ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಅಗತ್ಯವಾದ ಅವಕಾಶಗಳನ್ನು ಕಲ್ಪಿಸುವ ಇಂತಹ ಯೋಜನೆಗಳಿಗೆ ಎಲ್ಲರೂ ಸಹಕಾರ ನೀಡಬೇಕು. ‘ಅಕ್ಕ ಕೆಫೆ’ ಯಶಸ್ವಿಯಾಗಿ ಮುನ್ನಡೆಯಲು ಸಾರ್ವಜನಿಕರು ಇಲ್ಲಿನ ಸೇವೆಯನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳ ತಾಲೂಕ ಅಧ್ಯಕ್ಷರಾದ ಬಿಕೆ ಅಮರೇಶಪ್ಪ ಮಾನ್ವಿ ನಗರ ಪ್ರಾಧಿಕಾರ ಅಧ್ಯಕ್ಷ ಅಬ್ದುಲ್ ಗಬ್ಬುರ್ ಸಾಬ್, ಮುಖಂಡರು, ಅಧಿಕಾರಿಗಳು, ಸ್ವ-ಸಹಾಯ ಗುಂಪಿನ ಸದಸ್ಯರು ಸೇರಿ ಅನೇಕರು ಇದ್ದರು.