ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಭಕ್ತರು ನೀಡಿದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣನವರ ಸ್ಪಷ್ಟಪಡಿಸಿದರು.
ಹಾವೇರಿ: ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಭಕ್ತರು ನೀಡಿದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ದೇವಸ್ಥಾನಕ್ಕೆ ದಾಸೋಹಕ್ಕಾಗಿ ಭಕ್ತರು ನೀಡಿದ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದ್ದು, ನುಸಿ ಮತ್ತು ಹುಳು ಹಿಡಿದ ಕಾರಣ ಬಳಕೆಗೆ ಯೋಗ್ಯವಾಗಿರಲಿಲ್ಲ. ಹೀಗಾಗಿ ಕಮಿಟಿ ಸಭೆಯಲ್ಲಿ ಚರ್ಚಿಸಿ, ನಿಯಮಾನುಸಾರ ಮಾರಾಟ ಮಾಡಿ ಚೆಕ್ ಮೂಲಕ ಹಣ ಪಡೆಯಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣನವರ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸ್ಥಳೀಯ ಆಡಳಿತ ಮಂಡಳಿ ಎಂಬ ಎರಡು ಸಮಿತಿಗಳಿವೆ. ದಸರಾ ಉತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಭಕ್ತರು ಬೆಲ್ಲ, ಅಕ್ಕಿ, ಬೇಳೆ ಸೇರಿದಂತೆ ವಿವಿಧ ದವಸ-ಧಾನ್ಯಗಳನ್ನು ನೀಡುತ್ತಾರೆ. ಭಕ್ತರಿಂದ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಸಂಗ್ರಹವಾಗಿದ್ದರಿಂದ ಸ್ಥಳೀಯ ಕಮಿಟಿ ಸದಸ್ಯರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಕ್ಕಿಗೆ ನುಸಿ ಮತ್ತು ಹುಳು ಹಿಡಿದಿರುವುದು ಕಂಡುಬಂದಿದೆ. ದಾಸೋಹಕ್ಕೆ ಬಳಸಲು ಸಾಧ್ಯವಾಗದ ಕಾರಣ ಅದನ್ನು ಮಾರಾಟ ಮಾಡಿ, ಹೊಸ ಅಕ್ಕಿ ಖರೀದಿಸಿ ಅನ್ನಸಂತರ್ಪಣೆಗೆ ಬಳಸುವಂತೆ ನಿರ್ಣಯಿಸಿ, ಎಲ್ಲ ಸದಸ್ಯರಿಗೆ ನೋಟಿಸ್ ನೀಡಿ, ನ.11ರಂದು ಸಭೆ ನಡೆಸಿ ಠರಾವು ಅಂಗೀಕರಿಸಲಾಗಿದೆ. ವ್ಯಾಪಾರಸ್ಥರೊಂದಿಗೆ ಪ್ರತಿ ಕೆ.ಜಿ.ಗೆ 16ರಂತೆ ದರ ನಿಗದಿಪಡಿಸಿ, ಅಧ್ಯಕ್ಷರ ಅನುಮತಿ ಪಡೆದು ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.ಬೆಳಗ್ಗೆ 11 ಗಂಟೆ ಸುಮಾರಿಗೆ ಜನಸಮೂಹ ಇದ್ದಾಗಲೇ ಅಕ್ಕಿ ಮಾರಾಟ ಮಾಡಲಾಗಿದೆ. ಆದರೆ, ಪ್ರಕಾಶ ಎಂಬ ವ್ಯಕ್ತಿ ಏಕಾಏಕಿ ಆಗಮಿಸಿ, ದೇವಸ್ಥಾನದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ನಾವು ಅಕ್ರಮವಾಗಿ ಅಕ್ಕಿ ಮಾರಾಟ ಮಾಡಿಲ್ಲ, ಸಭೆಯಲ್ಲಿ ಚರ್ಚಿಸಿಯೇ ಒಟ್ಟು 42 ಕ್ವಿಂಟಲ್ ಅಕ್ಕಿಯನ್ನು ₹67 ಸಾವಿರಕ್ಕೆ ಮಾರಾಟ ಮಾಡಲಾಗಿದ್ದು, ದೇವಸ್ಥಾನದ ಹೆಸರಿನಲ್ಲಿ ಚೆಕ್ ಪಡೆಯಲಾಗಿದೆ. ಈ ಹಿಂದೆ ಮಾರಾಟ ಮಾಡಿದ್ದ 20 ಕ್ವಿಂಟಲ್ ಅಕ್ಕಿಯ ಹಣವನ್ನೂ ದೇವಸ್ಥಾನದ ಕಮಿಟಿ ಹೆಸರಿನಲ್ಲಿ ಜಮೆ ಮಾಡಲಾಗಿದೆ. ಯಾವುದೇ ಹಣ ದುರುಪಯೋಗವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಾಗಿನಿಂದ ಏನಾದರೂ ಕಿರಿಕಿರಿ ಮಾಡಲಾಗುತ್ತಿದೆ. ಆದರೆ, ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ. ಸಿಸಿ ಕ್ಯಾಮೆರಾ, ಪೊಲೀಸರ ಹಾಗೂ ಕೋರ್ಟ್ ಸಿಬ್ಬಂದಿ ಬಂದೋಬಸ್ತನಲ್ಲಿ ಹುಂಡಿ ತೆರೆಯಲಾಗಿದೆ. ಒಂದು ಡಬ್ಬಿಯಲ್ಲಿಯೇ ₹41 ಲಕ್ಷ ಸಂಗ್ರಹವಾಗಿತ್ತು. ಒಟ್ಟು ಸಂಗ್ರಹವಾದ ₹1.26ಕೋಟಿ ಬ್ಯಾಂಕಿಗೆ ಜಮಾ ಮಾಡಲಾಗಿದೆ. ಇನ್ನೂ 24 ಡಬ್ಬಿ ಎಣಿಕೆ ಮಾಡಬೇಕಿದೆ ಎಂದ ಅವರು, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದನ್ನು ಸಹಿಸದೆ ಕೆಲವರು ಹೀಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.ದೇವಸ್ಥಾನದ ಸ್ಥಳೀಯ ಸಮಿತಿ ಅಧ್ಯಕ್ಷ ಭರಮಣ್ಣ ಉರ್ಮಿ, ಸುರೇಶ ತಳಗೇರಿ, ಪ್ರಕಾಶ ಬಳ್ಳಾರಿ, ಬಸವಂತಪ್ಪ ಮೈಲಾರ ಇತರರು ಇದ್ದರು.