ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅವರ ದ್ವಿತೀಯ ಪರ್ಯಾಯೋತ್ಸವಕ್ಕೆ ಮೊದಲ ಹೆಜ್ಜೆಯಾಗಿ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತ ಭಾನುವಾರ ಬೆಳಗ್ಗೆ 7.45ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಸಂಪನ್ನಗೊಂಡಿತು.

ಉಡುಪಿ: ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅವರ ದ್ವಿತೀಯ ಪರ್ಯಾಯೋತ್ಸವಕ್ಕೆ ಮೊದಲ ಹೆಜ್ಜೆಯಾಗಿ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತ ಭಾನುವಾರ ಬೆಳಗ್ಗೆ 7.45ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಸಂಪನ್ನಗೊಂಡಿತು.

ಸೋದೆ ಮಠದ ಆವರಣದ ತೋಟದಲ್ಲಿ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅವರು ಬಾಳೆ ಗಿಡವೊಂದನ್ನು ನೆಟ್ಟು, ಮುಂದಿನ 2 ವರ್ಷಗಳ ಪರ್ಯಾಯಕ್ಕೆ ಬೇಕಾಗುವ ಬಾಳೆಕಾಯಿ ಹಣ್ಣಿಗಾಗಿ ಬಾಳೆ ಗಿಡಗಳನ್ನು ಬೆಳೆಸುವ ಮುಹೂರ್ತ ನೆರವೇರಿಸಿದರು. ಈ ಸಂದರ್ಭ ಕೇಂದ್ರ ಸರ್ಕಾರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು. ಇದಕ್ಕೆ ಮೊದಲು ಮುಂಜಾನೆ 6.30ಕ್ಕೆ ಸೋದೆ ಮಠದ ಪಟ್ಟದ ದೇವರಾದ ಭೂವರಹ ದೇವರು, ಹಯಗ್ರೀವ ದೇವರು ಮತ್ತು ಭೂತರಾಜನ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿ, ನಂತರ ಶ್ರೀಚಂದ್ರಮೌಳೀಶ್ವರ, ಶ್ರೀಅನಂತೇಶ್ವರ ದೇವರು ಹಾಗೂ ಶ್ರೀ ಕೃಷ್ಣಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಫಲನ್ಯಾಸಪೂರ್ವಕ ಪ್ರಾರ್ಥಿಸಲಾಯಿತು. ನಂತರ ಕೃಷ್ಣಮಠದ ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನ ಸಮುಚ್ಛಯ, ಗೋಶಾಲೆಗಳಲ್ಲಿಯೂ ಪಾರ್ಥನೆ ಸಲ್ಲಿಸಲಾಯಿತು. ಬಳಿಕ ಸೋದೆ ಮಠದಿಂದ ಬಾಳೆ ಗಿಡ, ಕಬ್ಬಿನ ಸಸಿ ಮತ್ತು ತುಳಸಿ ಗಿಡಗಳನ್ನು ರಥಬೀದಿಯಲ್ಲಿ ಮೆರವಣಿಗೆ ನಡೆಸಿ, ಸೋದೆ ಮಠದ ಆವರಣದಲ್ಲಿರುವ ತೋಟಕ್ಕೆ ತಂದು ಮುಹೂರ್ತವನ್ನು ನೆರವೇರಿಸಲಾಯಿತು. ಅಲ್ಲಿ ಶ್ರೀಚಂದ್ರಮೌಳೀಶ್ವರ, ಶ್ರೀಅನಂತೇಶ್ವರ, ಪರ್ಯಾಯ ಶ್ರೀಕೃಷ್ಣಮಠವೂ ಸೇರಿದಂತೆ ಉಡುಪಿಯ ಅಷ್ಟಮಠಗಳು, ಶಾಖಾ ಮಠಗಳಿಗೆ ನವಗ್ರಹ ದಾನ ಮಾಡಲಾಯಿತು.ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ರಘುಪತಿ ಭಟ್, ಪ್ರಮುಖರಾದ ಪ್ರೊ. ಎಂ.ಬಿ. ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ಕೆ.ಉದಯ ಕುಮಾರ್ ಶೆಟ್ಟ, ಸುಪ್ರಸಾದ್ ಶೆಟ್ಟಿ, ರಂಜನ್ ಕಲ್ಕೂರ, ವಿನಯಕುಮಾರ್ ಸೊರಕೆ, ಶ್ರೀಶ ಕಡೆಕಾರ್, ಮಧುಕರ ಮುದ್ರಾಡಿ, ಶ್ರೀಮಠದ ದಿವಾನರಾದ ವೇಮೂ ಶ್ರೀನಿವಾಸ ತಂತ್ರಿ ಮತ್ತಿತರರಿದ್ದರು.