ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಸಮ ಸಮಾಜದ ನಿರ್ಮಾಣಕ್ಕೆ ನಾಂದಿ

| Published : Jan 20 2024, 02:01 AM IST

ಸಾರಾಂಶ

ಪುಣ್ಯ ಸ್ಮರಣೋತ್ಸವದಂತಹ ಕಾರ್ಯಕ್ರಮಗಳು ಧಾರ್ಮಿಕ ಭಾವನೆಯ ಜತೆಗೆ, ಸಾಮಾಜಿಕ, ಮಾನವೀಯ ಹಾಗೂ ಸಾಂಸ್ಕೃತಿಕ ಮೌಲ್ಯ ಬಿತ್ತಿವುದರ ಜತೆಗೆ ಸಮಾಜದ ಎಲ್ಲ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಸಹಾಯಕವಾಗುತ್ತವೆ

ಹಾವೇರಿ: ಬಸವಣ್ಣನನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿರುವುದನ್ನು ಮುಕ್ತವಾಗಿ ಸ್ವಾಗತಿಸುವುದರ ಜತೆಗೆ, ಸರ್ಕಾರವು ಸರ್ವ ಜನಾಂಗ, ಸಮಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದೆ ಎಂದು ಮುಂಡರಗಿ ತೋಂಟದಾರ್ಯಮಠದ ನಿಜಗುಣತೋಂಟದಾರ್ಯ ಸ್ವಾಮೀಜಿ ಹೇಳಿದರು.

ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ ಲಿಂ. ಶಿವಬಸವ ಸ್ವಾಮಿಗಳ ೭೮ನೇ ಮತ್ತು ಲಿಂ. ಶಿವಲಿಂಗ ಸ್ವಾಮೀಜಿಗಳ ೧೫ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನಮ್ಮೂರ ಜಾತ್ರೆಯ ೩ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಗತ್ತಿನಲ್ಲಿನ ಎಲ್ಲ ಧರ್ಮಗಳು ಮತ್ತು ಧರ್ಮಗುರುಗಳು ಸತ್ಯ, ಅಹಿಂಸೆ ಪ್ರತಿಪಾದಿಸಿದರೆ, ಮಾನವೀಯತೆ ಮತ್ತು ಕಾಯಕ ಸಿದ್ಧಾಂತ ಪ್ರತಿಪಾದಿಸಿದ ಏಕೈಕ ಧರ್ಮಗುರು ಎಂದರೆ ಮಹಾನ್ ಮಾನವತಾವಾದಿ ಬಸವಣ್ಣನವರು ಎಂದು ಹೇಳಿದರು.

ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಸಾಕ್ಷಾತ್ಕಾರವಾದರೆ, ಮಹಾವೀರನಿಗೆ ಅಹಿಂಸೆ, ಪೈಗಂಬರರಿಗೆ ಗುಹೆಯಲ್ಲಿ ಸಾಕ್ಷಾತ್ಕಾರ ಕಂಡರೆ, ಬಸವಣ್ಣನಿಗೆ ಹಸಿದವರಲ್ಲಿ, ದಯೆಯಲ್ಲಿ ಹಾಗೂ ಮಾನವೀಯತೆಯಲ್ಲಿ ದೇವರ ಸಾಕ್ಷಾತ್ಕಾರ ಕಂಡುಕೊಂಡು, ಸಮಾಜದ ಎಲ್ಲ ವರ್ಗದವರ ಅಭ್ಯುದಯಕ್ಕೆ ಶ್ರಮಿಸಿದ ವಿಶ್ವಗುರು ಆಗಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪುಣ್ಯ ಸ್ಮರಣೋತ್ಸವದಂತಹ ಕಾರ್ಯಕ್ರಮಗಳು ಧಾರ್ಮಿಕ ಭಾವನೆಯ ಜತೆಗೆ, ಸಾಮಾಜಿಕ, ಮಾನವೀಯ ಹಾಗೂ ಸಾಂಸ್ಕೃತಿಕ ಮೌಲ್ಯ ಬಿತ್ತಿವುದರ ಜತೆಗೆ ಸಮಾಜದ ಎಲ್ಲ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಸಹಾಯಕವಾಗುತ್ತವೆ ಎಂದು ಹೇಳಿದರು.

ಮಾಜಿ ಶಾಸಕ ಶಿವರಾಜ ಸಜ್ಜನ ಮಾತನಾಡಿ, ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಆದರ್ಶವಾಗಿವೆ. ವಿದೇಶಿಯರು ನಮ್ಮ ಸಂಸೃತಿಗೆ ಮಾರು ಹೋಗಿ ಅದನ್ನು ಅನಿಸರಿಸುತ್ತಿದ್ದಾರೆ. ಆದರೆ ನಮ್ಮ ಯುವ ಪೀಳಿಗೆ ಪಾಶ್ವಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವದು ವಿಷಾದನೀಯ. ಮಹಾತ್ಮರ ಪುಣ್ಯ ಸ್ಮರಣೆಯು ಯುವ ಜನತೆಗೆ ದಾರಿದೀಪವಾಗಿವೆ ಎಂದು ಹೇಳಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಸರ್ಕಾರವು ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವದನ್ನು ಶ್ರೀ ಮಠದ ಸ್ವಾಗತಿಸುತ್ತದೆ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲುತ್ತದೆ, ಇದರಿಂದ ಮುಂದಿನ ದಿನಗಳಲ್ಲಿ ವಚನ ಸಾಹಿತ್ಯವು ಇನ್ನೂ ಹೆಚ್ಚು ಪ್ರಚಾರ ಮತ್ತು ಪ್ರಸಾರ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮತ್ತು ಮುಖಂಡ ಗವಿಸಿದ್ಧಪ್ಪ ದ್ಯಾಮಣ್ಣನವರ ಮಾತನಾಡಿದರು. ಇದೇ ಸಂದರ್ಭದಲ್ಲಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿಗಳಿಗೆ ಶ್ರೀಮಠದಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಕೊತಬಾಳದ ಅರಣೋದಯ ಕಲಾತಂಡವು ರಾಜಶೇಖರ ಹಿರೇಮಠ ನೇತೃತ್ವದಲ್ಲಿ ಜಾನಪದ ವೈವಿಧ್ಯತೆ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾ ತಂಡವು ಹಲವಾರು ಅದ್ಭುತ ಕಲಾಪ್ರದರ್ಶನ ನೀಡಿ ನೆರೆದಿದ್ದ ಭಕ್ತರಮನ ಮನಸೂರೆಗೊಳಿಸಿತು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ನಾಗರಾಜ ಕುರುವತ್ತೇರ, ಆನಂದ ಮತ್ತಿಗಟ್ಟಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಚಿತ್ರದುರ್ಗದ ಭೋವಿಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ವೀರಬಸವ ದೇವರು, ಚಂದ್ರಶೇಖರ ದೇವರು, ಶಿವಪ್ರಸಾದ ದೇವರು, ತಮ್ಮಣ್ಣ ಮುದ್ದಿ, ಗಂಗಮ್ಮ ಯರೇಶೀಮಿ, ತಿಪ್ಪೇಸ್ವಾಮಿ ಶಿವಸಾಲಿ, ನೀಲಮ್ಮ ಗುಂಜೆಟ್ಟಿ, ಬಕ್ಕೇಶ ಚಿಕ್ಕಮಠ, ಕಮಲಮ್ಮ ಹಿರೇಮಠ, ಶಿವಬಸಪ್ಪ ತುಪ್ಪದ, ಗಣೇಶ ಮುಷ್ಠಿ, ಮಲ್ಲಿಕಾರ್ಜುನ ಹಂದ್ರಾಳ, ಪ್ರೇಮಾ ಕಬ್ಬೂರ, ಈರಾವತಿ ಅಗಡಿ, ಸುಲೋಚನಾ ವಿರಕ್ತಮಠ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಶಿವಯೋಗಿ ಹೂಲಿಕಂತಿಮಠ ಇತರರು ಉಪಸ್ಥಿತರಿದ್ದರು.

ಸಂಗಮೇಶ ಪಾಟೀಲ ಪ್ರಾರ್ಥಿಸಿದರು. ಶಿವಯೋಗಿ ವಾಲಿಶೆಟ್ಟರ ಸ್ವಾಗತಿಸಿದರು. ಚಂದ್ರಶೇಖರ ದೇವರು ಮತ್ತು ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ವಿಜಯಕುಮಾರ ಕೂಡ್ಲಪ್ಪನವರ ವಂದಿಸಿದರು.