ಶ್ರೀ ಪನ್ನಂಗಾಲ ತಮ್ಮೆ ದೇವಿಯ ವಾರ್ಷಿಕ ಉತ್ಸವ ಸಂಪನ್ನ

| Published : Apr 14 2025, 01:17 AM IST

ಸಾರಾಂಶ

ಯವಕಪಾಡಿ ಗ್ರಾಮದ ಆದಿ ಶ್ರೀ ಪನ್ನಂಗಾಲ ತಮ್ಮೆ ದೇವಿಯ ವಾರ್ಷಿಕ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಯವಕಪಾಡಿ ಗ್ರಾಮದ ಆದಿ ಶ್ರೀ ಪನ್ನಂಗಾಲ ತಮ್ಮೆ ದೇವಿಯ ವಾರ್ಷಿಕ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಶನಿವಾರ ನಡೆಯಿತು.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಸಮೀಪವಿರುವ ಅಮ್ಮಂಗೇರಿಯಲ್ಲಿ ಶ್ರೀ ದೇವಿಯ ದೇವತಾ ಕೆಲಸಕ್ಕೆ ನಿಯೋಜಿಸಲ್ಪಟ್ಟ ಕಣಿಯ ಜನಾಂಗದವರು ಶ್ರದ್ಧಾಭಕ್ತಿಯಿಂದ ಓಲೆ (ತಾಳೆ ಜಾತಿ ಸೇರಿದ ಮರದ ಗರಿ) ಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ದೈವ ದರ್ಶನ ಹಾಗೂ ಎತ್ತೇರಾಟ, ತಕ್ಕ ಮುಖ್ಯಸ್ಥರು, ಭಕ್ತಾದಿಗಳೊಂದಿಗೆ ಪನ್ನಂಗಾಲ ತಮ್ಮೆ ದೇವಸ್ಥಾನಕ್ಕೆ ಮಧ್ಯಾಹ್ನ ತರಲಾಯಿತು.

ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ನೆಲೆಸಿರುವಳೆಂದೂ, ಅಣ್ಣನ ಮನೆಯಿಂದ ಅವಳನ್ನು ತನ್ನ ಮನೆಗೆ ಕರೆತರಲಾಗುವ ಪದ್ಧತಿ ಇದೆಂಬ ನಂಬಿಕೆ ಗ್ರಾಮಸ್ಥರಲ್ಲಿ ಮತ್ತು ಭಕ್ತರಲ್ಲಿದೆ. ಅಣ್ಣನನ್ನು ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿಯು ಮಾರ್ಗ ಮಧ್ಯೆ ಸಿಗುವ ಬತ್ತದ ಗದ್ದೆಯಿಂದ ಹಿಂತಿರುಗಿ ಹೋಗಲು ಯತ್ನಿಸುವ ದೃಶ್ಯ ಭಕ್ತಿಭಾವದಿಂದ ಕೂಡಿರುವುದೊಂದಿಗೆ ಭಕ್ತರನ್ನು ರೋಮಾಂಚನಗೊಳಿಸುತ್ತದೆ. ಹಿಂತಿರುಗಲು ಪ್ರಯತ್ನಿಸುವ ಕೊಡೆಯನ್ನು ತಡೆ ಹಿಡಿಯಲು ಎರಡು ಮಂದಿ ಕೊಡೆಗೆ ಜೋಡಿಸಿದ ಬಿದಿರನ್ನು ನೆಲಕ್ಕೆ ಒತ್ತಿ ಹಿಡಿದಿದ್ದರೂ ಆ ಕೊಡೆಯು ಗಿರ್ರನೆ ಸುತ್ತುವುದು ಮತ್ತು ಮೇಲಕ್ಕೆ ಎಳೆಯಲು ಪ್ರಯತ್ನಿಸುವುದು ಶ್ರೀ ಪನ್ನಂಗಾಲತಮ್ಮೆ ದೇವಿಯ ಮಹಿಮೆ ಎನ್ನಲಾಗಿದ್ದು ಈ ಅಪೂರ್ವ ಕ್ಷಣವನ್ನು ವೀಕ್ಷಿಸಲು ಗ್ರಾಮದ ಸಹಸ್ರಾರು ಮಂದಿ ಗದ್ದೆಯ ಬಯಲಿನಲ್ಲಿ ನೆರೆದಿದ್ದರು.

ಈ ಹಬ್ಬದ ಆರಂಭದಿಂದಲೂ ದೇವಿಯ ಅಣ್ಣನದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಿಂದ ತೀರ್ಥ ಪ್ರಸಾದ ತರುವ ಸಂಪ್ರದಾಯವಿದ್ದು ಹಬ್ಬ ನಡೆಯುವ ದಿನ ಅಣ್ಣ ದುಃಖ ತಪ್ತನಾಗಿರುವ ಸನ್ನಿವೇಶ ಎಂಬಂತೆ ಪಾಡಿ ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮ ಬೆಟ್ಟ ಮೋಡಗಳಿಂದ ಕೂಡಿರುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಇಲ್ಲಿ ಎರಡು ವರ್ಷಕ್ಕೊಮ್ಮೆ ದೊಡ್ಡ ಹಬ್ಬ ಜರುಗಲಿದ್ದು ಪ್ರಸಕ್ತ ವರ್ಷ ದೊಡ್ಡಹಬ್ಬ ವಿಜೃಂಭಣೆಯಿಂದ ಜರುಗಿತು. ಉತ್ಸವವನ್ನುವೀಕ್ಷಿಸಲು ಅಧಿಕ ಮಂದಿ ನೆರೆದಿದ್ದರು.

ಇಂದು ಭಾನುವಾರ ಉತ್ಸವಕ್ಕೆ ಸಂಬಂಧಿಸಿದಂತೆ ದೇವರ ಕುರುಂದ ಹಬ್ಬ ಇನ್ನಿತರಣೆಯೊಂದಿಗೆ ಹಬ್ಬವು ಸಂಪನ್ನ ಗೊಳ್ಳಲಿದೆ.