ಆಗಳಿ ಉದ್ಭವ ಶ್ರೀ ಗವಿಸಿದ್ದೇಶ್ವರ ಸ್ವಾಮಿ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ

| Published : Mar 04 2025, 12:30 AM IST

ಸಾರಾಂಶ

ಆಗಳಿ ಗ್ರಾಮದ ಪುರಾಣ ಮತ್ತು ಇತಿಹಾಸ ಪ್ರಸಿದ್ಧ ಉದ್ಭವ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ 37ನೇ ವರ್ಷದ ಪೂಜಾ ಮಹೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಕೊಡಗು- ಹಾಸನ ಜಿಲ್ಲಾ ಗಡಿ ಭಾಗದಲ್ಲಿನ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ.ಗೆ ಸೇರಿದ ಆಗಳಿ ಗ್ರಾಮದ ಪುರಾಣ ಮತ್ತು ಇತಿಹಾಸ ಪ್ರಸಿದ್ದ ಉದ್ಬವ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ 37ನೇ ವರ್ಷದ ಪೂಜಾ ಮಹೋತ್ಸವ ಗುರುವಾರ ನಡೆಯಿತು.

ಪುರಾಣ ಮತ್ತು ಇತಿಹಾಸ ಹಿನ್ನಲೆಯುಳ್ಳ ಆಗಳಿ ಗ್ರಾಮದ ಅರಣ್ಯದಲ್ಲಿ ಏಕಶಿಲೆಯ ಗುಹೆಯೊಳಗೆ ಉದ್ಭವಗೊಂಡಿರುವ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ವಾರ್ಷಿಕ ಪೂಜೆಯನ್ನು ಕಳೆದ 37 ವರ್ಷಗಳಿಂದ ಮಹಾ ಶಿವರಾತ್ರಿ ಹಬ್ಬದ ಮರು ದಿನದಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ

ಗುರುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಶ್ರೀ ಗವಿಸಿದ್ದೇಶ್ವರ ಸ್ವಾಮಿಗೆ ಪೂಜಾ ಕಾರ್ಯವನ್ನು ನಡೆಸಲಾಯಿತು. ಬೆಳಗ್ಗೆಯಿಂದಲೆ ದೇವಸ್ಥಾನದ ಅರ್ಚಕ ಹಿರಣ್ಣಯ್ಯ ನೇತೃತ್ವದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಅರ್ಚಕರು ಶ್ರೀ ಸ್ವಾಮಿಗೆ ವಿಶೇಷ ಪೂಜೆ ಹಣ್ಣುಕಾಯಿ ಅಭಿಷೇಕ, ಷೋಡಶೋಪಚಾರ, ಪುಷ್ಪಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಸ್ಥಳೀಯ ಗ್ರಾಮ ಸೇರಿದಂತೆ ಅಕ್ಕದ ಪಕ್ಕದ ಗ್ರಾಮಗಳಿಂದ ಬಂದ ಸಾವಿರಾರು ಭಕ್ತರು ಗವಿ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದರು.

ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಬೆಸೂರು ಡಾ.ಮೋಹನ್ ಪಾಲೇಗಾರ್ ಮಾತನಾಡಿ, ಪೂಜೆ ಮತ್ತು ಜಾತ್ರಾ ಮಹೋತ್ಸವಗಳು ಧಾರ್ಮಿಕ, ಆದ್ಯಾತ್ಮಿಕ, ಸಂಸ್ಕೃತಿ ಮತ್ತು ಸನಾತನ ಪರಂಪರೆಯನ್ನು ಒಂದುಗೂಡಿಸುವ ವೇದಿಕೆಯಾಗುತ್ತದೆ ಎಂದರು. ಹಿರಿಯರು ನಾಂದಿ ಹಾಡಿದ ಪೂಜಾ ಮಹೋತ್ಸವ, ಜಾತ್ರಾ ಮಹೋತ್ಸವಗಳಲ್ಲಿ ಈಗಿನ ತಲೆಮಾರಿನವರು ಭಾಗವಹಿಸಬೇಕು. ಇದರಿಂದ ಧಾರ್ಮಿಕ ಆಚರಣೆಗಳು ಮುಂದಿನ ಪೀಳಿಗೆಗಳ ತನಕವೂ ಮುಂದುವರೆಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಡಿಆರ್‍ಎಫ್‍ಒ ಭವ್ಯ, ಬೆಂಗಳೂರಿನ ಕಾವೇರಿ ವಿದ್ಯಾಸಂಸ್ಥೆ ಸಂಸ್ಥಾಪಕ ದೇವರಾಜಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಕೆ.ಪಿ.ತಿಮ್ಮಯ್ಯ, ಮಾಜಿ ಕಾರ್ಯದರ್ಶಿ ಎ.ಎಸ್.ಸುಬ್ಬಯ್ಯ, ದೇವಸ್ಥಾನ ಸಮಿತಿ ಸದಸ್ಯರು, ಗ್ರಾಮದ ಪ್ರಮುಖರು ಹಾಜರಿದ್ದರು. ಪೂಜಾ ಮಹೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪೂಜಾ ಮಹೋತ್ಸವ ಅಂಗವಾಗಿ ದೇವಸ್ಥಾನ ಆವರಣದಲ್ಲಿ ವೀರಗಾಸೆ ಕಲಾವಿದರಿಂದ ವೀರಗಾಸೆ ಕುಣಿತ ನಡೆಯಿತು. ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಪೂಜಾ ಮಹೋತ್ಸವದ ಅಂಗವಾಗಿ ಬೆಟ್ಟದ ಕೆಳ ಭಾಗದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಪುಟ್ಟ ಜಾತ್ರೆಯನ್ನು ನಡೆಸಲಾಯಿತು.