ಸಾರಾಂಶ
ಜಗದೀಶ ವಿರಕ್ತಮಠ
ಕನ್ನಡಪ್ರಭ ವಾರ್ತೆ ಬೆಳಗಾವಿಪ್ರಧಾನಿ ನರೇಂದ್ರ ಮೋದಿ ಅಲೆಯ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಮಣಿಸಿದ್ದಾರೆ. ತಂದೆಯ ವರ್ಚಸ್ಸು, ಪಕ್ಷದ ಪ್ರಭಾವ ಹಾಗೂ ಬಿಜೆಪಿ ಅಭ್ಯರ್ಥಿ ವಿರೋಧಿ ಅಲೆ ಪ್ರಿಯಾಂಕಾಗೆ ವರವಾಗಿರುವುದು ಸ್ಪಷ್ಟವಾಗಿದೆ.ಪ್ರಧಾನಿ ಮೋದಿ ಅಲೆ ಎಲ್ಲರಿಗೂ ವರವಾಗಿದೆ. ಆದರೆ, ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಪಾಳಯದಲ್ಲಿಯೇ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ವಿರುದ್ಧ ಅಲೆ ಹೆಚ್ಚಾಗಿರುವುದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ನಾಯಕರಲ್ಲೇ ಅಸಮಾಧಾನದ ಅಲೆ:ಹಾಗೆ ನೋಡಿದರೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರ ಬಿಜೆಪಿಗೆ ಹೆಚ್ಚು ವರವಾಗಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದರು. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಯಬಾಗ, ಹುಕ್ಕೇರಿ, ನಿಪ್ಪಾಣಿ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಹಿಡಿತ ಸಾಧಿಸಿತು. ಇದೆಲ್ಲಕ್ಕಿಂತ ಮುಖ್ಯವಾಗಿ, ಮಾಜಿ ಸಂಸದ ರಮೇಶ ಕತ್ತಿ ಅವರು ಕೂಡ ತಟಸ್ಥ ನಿಲುವು ತಳೆದರು. ಇದು ಕೂಡ ಸೋಲಿನ ಅಂಶಗಳಲ್ಲಿ ಒಂದಾಗಿದೆ. ಇದರ ಜತೆಗೆ ಅಮಿತ ಶಾ, ಯಡಿಯೂರಪ್ಪ ಹೊರತುಪಡಿಸಿ ಸ್ಥಳೀಯ ನಾಯಕರು ಹೆಚ್ಚಾಗಿ ಸಾಥ್ ನೀಡದಿರುವುದು ಕಾಂಗ್ರೆಸ್‌ಗೆ ಹೆಚ್ಚು ವರವಾಯಿತು.ಸೋಲಿಗೆ ಪ್ರಮುಖ ಕಾರಣ ನಾಯಕರಲ್ಲಿನ ಅಸಹಕಾರ. ಜತೆಗೆ ಸ್ಥಳೀಯ ನಾಯಕರ ಜತೆ ಬಿಜೆಪಿ ಅಭ್ಯರ್ಥಿಯ ನಡುವಿನ ಸಮನ್ವಯತೆ ಕೊರತೆ. ಹಾಗೆಯೇ ಕೆಲವು ಪ್ರಮುಖ ಮುಖಂಡರ ಒಳ ಒಪ್ಪಂದದ ರಾಜಕಾರಣದಿಂದ ಸೋಲುಂಟಾಯಿತೆಂದು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸದೇ ಹೈಕಮಾಂಡ್ ಟಿಕೆಟ್ ಪ್ರಕಟಣೆ ಮಾಡಿದ್ದು, ಮೊದಲನೇ ಎಡವಟ್ಟು ಎಂದು ಅವರು ಅಸಮಾಧಾನಪಟ್ಟರು. 8 ವಿಧಾನಸಭಾ ಕ್ಷೇತ್ರದ ಪ್ರಥಮ ದರ್ಜೆ ನಾಯಕರೇ ಪಕ್ಷ ವಿರೋಧಿ ಚಟುವಟಿಯಲ್ಲಿ ಭಾಗವಹಿಸಿದ್ದು, ಪಕ್ಷದ ಅಭ್ಯರ್ಥಿ ಪರ ಶ್ರದ್ಧೆಯಿಂದ ಪ್ರಚಾರ ಮಾಡದೇ ದೂರ ಉಳಿದಿದ್ದು, ಕೆಲವು ಬಿಜೆಪಿ ಕಾರ್ಯಕರ್ತರು ಮೇಲ್ನೋಟಕ್ಕೆ ಪಕ್ಷದ ಪರ ಪ್ರಚಾರ ಮಾಡಿ ಒಳಗೆ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. ಅಭ್ಯರ್ಥಿ ಸಹ ತನ್ನ ಅಧಿಕಾರ ಅವಧಿಯಲ್ಲಿ ಪ್ರಮುಖ ಮುಖಂಡರ ಜತೆ ಅಂತರ ಕಾಯ್ದುಕೊಂಡಿರುವುದು ಕೂಡ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಯಿತು ಎನ್ನಲಾಗಿದೆ.
ಬಿಜೆಪಿಯಲ್ಲಿ ಅಸಮಾಧಾನವನ್ನೇ ಕಾಂಗ್ರೆಸ್ ಗಾಳವಾಗಿಸಿಕೊಂಡ ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ ಅವರು ಕೆಳ ಹಂತದಿಂದಲೇ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರನ್ನು ಗಟ್ಟಿಗೊಳಿಸಿದರು. ಪರಿಣಾಮ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಮತಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಅದರಲ್ಲೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವುದು ಕಾಂಗ್ರೆಸ್‌ಗೆ ಮತ್ತಷ್ಟು ಬಲ ನೀಡಿತು. ಸಚಿವ ಸತೀಶ ಜಾರಕಿಹೊಳಿಗೆ ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಹೆಗಲು ನೀಡುವುದು ಗೆಲುವಿಗೆ ಸಹಕಾರಿಯಾಗಿದೆ.ಕೈ ಹಿಡಿದ ಗ್ಯಾರಂಟಿ:
ಅಥಣಿ, ರಾಯಬಾಗ, ಕಾಗವಾಡ ಸೇರಿದಂತೆ ಚಿಕ್ಕೋಡಿ ಭಾಗದ ಬಹುತೇಕ ಪ್ರದೇಶಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಒಂದಿಲ್ಲೊಂದು ಸಮಸ್ಯೆಯನ್ನು ಅನುಭವಿಸುತ್ತಿದ್ದ ಜನರಿಗೆ ಈ ಬಾರಿಯ ಬರಗಾಲದ ಸನ್ನಿವೇಶದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೈ ಹಿಡಿದಿವೆ. ಇದರ ಪರಿಣಾಮವಾಗಿ ರಾಯಬಾಗ, ಕುಡಚಿ ಸೇರಿದಂತೆ ಇನ್ನೀತರ ಭಾಗಗಳಲ್ಲಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣದ ಸಮಯದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಗ್ಯಾರಂಟಿ ಯೋಜನೆಗಳು ಕೈ ಹಿಡಿದಿವೆ.ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು. ಅದರಲ್ಲೂ ಡಾ.ಪ್ರಭಾಕರ ಕೋರೆ ಪುತ್ರ ಅಮೀತ ಕೋರೆ, ಮಾಜಿ ಸಂಸದ ರಮೇಶ ಕತ್ತಿ, ಮಹಾಂತೇಶ ಕವಟಗಿಮಠ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅಲ್ಲದೇ ಹೈಕಮಾಂಡ್ ಮಟ್ಟದಲ್ಲಿ ಲಾಭಿಯನ್ನು ನಡೆಸಿದ್ದರು.
ಆದರೆ, ಆಕಾಂಕ್ಷಿಗಳ ಮನವಿಯನ್ನು ಕಡೆಗಣಿಸಿದ ಹೈಕಮಾಂಡ್ ಮೊದಲ ಪಟ್ಟಿಯಲ್ಲೇ ಅಣ್ಣಾಸಾಹೇಬ ಜೊಲ್ಲೆ ಘೋಷಣೆ ಮಾಡಿತ್ತು. ಇದರಿಂದ ಪ್ರಬಲ ಆಕಾಂಕ್ಷಿಗಳಾಗಿದ್ದವರ ಒಲ್ಲದ ಮನಸ್ಸಿನಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇನ್ನೂ ಕೆಲವು ನಾಯಕರು ಪ್ರಚಾರದಿಂದ ದೂರ ಉಳಿದುಕೊಂಡು, ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದರ ಪರಿಣಾಮದಿಂದಲೇ ಬಿಜೆಪಿ ಹೀನಾಯ ಸೋಲಿಗೆ ಕಾರಣವಾಗಿದೆ ಎನ್ನವುದು ಫಲಿತಾಂಶವೇ ಕೈಗನ್ನಡಿ.