ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ, ಆರ್‌ಡಿಪಿಆರ್ ಇಲಾಖೆಯ ಈ ಆದೇಶ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಜನವಿರೋಧಿ ನಿರ್ಧಾರವಾಗಿದೆ ಎಂದರು.

ಹೊನ್ನಾವರ: ಸರ್ಕಾರಿ ಜಾಗದಲ್ಲಿರುವ ಮನೆಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿ ಮಾಡುವುದನ್ನು ಕೈಬಿಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿದ್ದ ಜನವಿರೋಧಿ ಸುತ್ತೋಲೆಯನ್ನು ಸರ್ಕಾರ ಸಂಪೂರ್ಣವಾಗಿ ಹಿಂಪಡೆಯುವವರೆಗೂ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಮಂಡಲಾಧ್ಯಕ್ಷ ಮಂಜುನಾಥ್ ನಾಯ್ಕ ಸ್ಪಷ್ಟಪಡಿಸಿದ್ದಾರೆ.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಪ್ರತಿಭಟನೆಯ ಹಿನ್ನೆಲೆ ಸರ್ಕಾರ ಆದೇಶಕ್ಕೆ ನೀಡಿರುವ ತಾತ್ಕಾಲಿಕ ತಡೆ ಕೇವಲ ಕಣ್ಣೊರೆಸುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಜನವಿರೋಧಿ ಆದೇಶ ಹೊರಡಿಸಿ ಗ್ರಾಮ ಪಂಚಾಯಿತಿಗಳಿಗೆ ಕಳುಹಿಸಿತ್ತು. ಇದನ್ನು ವಿರೋಧಿಸಿ ಬಿಜೆಪಿ ನೇತೃತ್ವದಲ್ಲಿ ತಾಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳೊಂದಿಗೆ ಧರಣಿ ನಡೆಸಲಾಗಿತ್ತು. ಜಿಲ್ಲೆ ಹಾಗೂ ರಾಜ್ಯಾದ್ಯಂತ ನಡೆದ ಈ ಹೋರಾಟಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾದ ಕಾರಣ ಎಚ್ಚೆತ್ತ ಸರ್ಕಾರ, ಹಿಂದಿನ ಆದೇಶಕ್ಕೆ ಮುಂದಿನ ಸೂಚನೆಯವರೆಗೆ ತಾತ್ಕಾಲಿಕ ತಡೆ ನೀಡಿದೆ. ಈ ನಿರ್ಧಾರ ಸ್ವಾಗತಾರ್ಹವಾದರೂ, ಆದೇಶವನ್ನು ಸರ್ಕಾರ ಸಂಪೂರ್ಣವಾಗಿ ಹಿಂಪಡೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ, ಆರ್‌ಡಿಪಿಆರ್ ಇಲಾಖೆಯ ಈ ಆದೇಶ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಜನವಿರೋಧಿ ನಿರ್ಧಾರವಾಗಿದೆ. ಹೊಸದಾಗಿ ಅತಿಕ್ರಮಣ ಮಾಡಿದ ಮನೆಗಳಿಗೆ ತೆರಿಗೆ ಹಾಕದಿರುವುದು ಸರಿಯೇ, ಆದರೆ ತಲೆತಲಾಂತರಗಳಿಂದ ವಾಸಿಸುತ್ತಿರುವ ಬಡವರ ಮನೆಗಳಿಗೂ ಕರ ವಸೂಲಿ ನಿಲ್ಲಿಸಲು ಹೊರಟಿದ್ದು ಅನ್ಯಾಯ. ಬಿಜೆಪಿಯ ಬೃಹತ್ ಹೋರಾಟಕ್ಕೆ ಮಣಿದು ಸರ್ಕಾರ ಈಗ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿದೆ. ಈ ಹುನ್ನಾರಕ್ಕೆ ಮುಗ್ಧ ಜನರನ್ನು ಬಲಿಯಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.ಇದೇ ವೇಳೆ ಸ್ಥಳೀಯ ಶಾಸಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಅವರು, ನಾಲ್ಕು ವರ್ಷಗಳ ಹಿಂದೆ ನಡೆದ ಆ್ಯಂಬುಲೆನ್ಸ್ ದುರಂತದ ವೇಳೆ ಮನೆಗೆ ತೆರಳಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈಡೇರಿಸಲಿಲ್ಲ. ಕಾಸರಕೋಡು ಟೊಂಕ ಮೀನುಗಾರರಿಗೆ ನ್ಯಾಯ ಕೊಡಿಸುವ ಬದಲು ಅವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಲಾಯಿತು ಎಂದರು. ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ತಾಲೂಕಿನಾದ್ಯಂತ ಬಿಜೆಪಿ ನಡೆಸಿದ ಹೋರಾಟದ ಫಲವಾಗಿ ಸರ್ಕಾರ ಈ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ. ಮುಂಬರುವ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಈ ತಂತ್ರ ರೂಪಿಸಿದೆ ಎಂದರು.

ಮುಖಂಡ ವೆಂಕಟೇಶ್ ನಾಯ್ಕ ಮಾತನಾಡಿ, ನಾವು ಪಕ್ಷಾತೀತವಾಗಿ ಜನರ ಹಿತಕ್ಕಾಗಿ ಹೋರಾಟ ರೂಪಿಸಿದ್ದೇವೆ. ಸ್ಥಳೀಯ ಶಾಸಕರಿಗೆ ದಶಕಗಳ ಬೇಡಿಕೆಯಾದ ಗೊಂಡ ಸಮುದಾಯಕ್ಕೆ ಎಸ್‌ಸಿ ಪ್ರಮಾಣಪತ್ರ ಕೊಡಿಸಲೂ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ರಾಜು ಭಂಡಾರಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸವಿತಾ ನಾಯ್ಕ, ಬಿ.ಟಿ. ನಾಯ್ಕ, ವಿಘ್ನೇಶ್ ಹೆಗಡೆ, ಗಣಪತಿ ಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.