ಲಂಚದ ಬೇಡಿಕೆ ಇಟ್ಟು ಲಂಚ ಪಡೆಯುವಾಗಲೇ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರ ಕೈಗೆ ಸಿಕ್ಕಿ ಬಿದ್ದ ಪ್ರಕರಣದಲ್ಲಿ ಆರೋಪಿ ಅರಣ್ಯ ರಕ್ಷಕ ಸುಧೀರ್ ಎಂಬಾತ ತನ್ನನ್ನು ಪ್ರಕರಣದಿಂದ ಕೈ ಬಿಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಮಂಗಳೂರು: ಮರ ಕಡಿಯುವ ಸಂಬಂಧ ಲಂಚದ ಬೇಡಿಕೆ ಇಟ್ಟು ಲಂಚ ಪಡೆಯುವಾಗಲೇ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರ ಕೈಗೆ ಸಿಕ್ಕಿ ಬಿದ್ದ ಪ್ರಕರಣದಲ್ಲಿ ಆರೋಪಿ ಅರಣ್ಯ ರಕ್ಷಕ ಸುಧೀರ್ ಎಂಬಾತ ತನ್ನನ್ನು ಪ್ರಕರಣದಿಂದ ಕೈ ಬಿಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.2020ರಲ್ಲಿ ಬೆಳ್ತಂಗಡಿ ತಾಲೂಕು ಕಲ್ಲೇರಿ ಉರುವಾಲು ಗ್ರಾಮದ ಮರದ ವ್ಯಾಪಾರಿಯೊಬ್ಬರು, ಇನ್ನೊಬ್ಬರ ಜಮೀನಿನಲ್ಲಿದ್ದ ಮರಗಳನ್ನು ತನ್ನ ಸ್ವಂತ ಉಪಯೋಗಕ್ಕೆಂದು ಖರೀದಿಸಿದ್ದರು. ಈ ಮರಗಳನ್ನು ಕಡಿಯುವ ನಿಟ್ಟಿನಲ್ಲಿ ಅರಣ್ಯ ರಕ್ಷಕ ಸುಧೀರ್ ಬಳಿ ವಿಚಾರಿಸಿದಾಗ, ಅದಕ್ಕೆ ಪರವಾನಗಿ ಪಡೆಯಲು 2-3 ತಿಂಗಳು ಬೇಕು. ನಾನೇ ಖುದ್ದು ನಿಂತು ಮಿಲ್‌ಗೆ ಸಾಗಿಸಲು ಅನುವು ಮಾಡಿಕೊಡುತ್ತೇನೆ. ಅದಕ್ಕೆ 15 ಸಾವಿರ ರು. ಲಂಚದ ರೂಪದಲ್ಲಿ ಕೊಡಬೇಕು. ಇಲಾಖೆಯಿಂದ ಪರವಾನಿಗೆ ಪಡೆಯಲು ಹೋದರೆ ಜಾಸ್ತಿ ದುಡ್ಡು ಖರ್ಚು ಆಗುತ್ತದೆ ಎಂದು ತಿಳಿಸಿದ್ದ. ಅದರಂತೆ 10 ಸಾವಿರ ರು. ಲಂಚ ಪಡೆದು, ಉಳಿದ 5 ಸಾವಿರ ರು. ಬೇಡಿಕೆ ಇರಿಸಿದ್ದ. 2020ರ ಜ.8ರಂದು ತನ್ನ ಮನೆಗೆ ದೂರುದಾರರನ್ನು ಕರೆಸಿ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕೈಗೆ ಸಿಕ್ಕಿ ಬಿದ್ದಿದ್ದ.
ಪ್ರಕರಣದ ತನಿಖಾಧಿಕಾರಿ ಶ್ಯಾಮ್ ಸುಂದರ್ ಅವರು ತನಿಖೆ ಪೂರ್ಣಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಲೋಕಾಯುಕ್ತ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪಿ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ವಕೀಲರ ಮೂಲಕ ಸಿಆರ್ ಪಿಸಿ 227ರಡಿ ಅರ್ಜಿ ಸಲ್ಲಿಸಿ ತನ್ನನ್ನು ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯದ ನ್ಯಾಯಾಧೀಶರಾದ ಸುನಿತಾ ಅವರು ಆರೋಪಿಯ ಅರ್ಜಿ ವಜಾಗೊಳಿಸಿದ್ದಾರೆ.ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರವೀಂದ್ರ ಮುನ್ನಿಪಾಡಿ ವಾದ ಮಂಡಿಸಿದರು.