ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಬೆಟ್ಟವೇ ಬಿಳಿ ಬಣ್ಣದ ಚಾದರ ಹೊದ್ದಂತೆ ಕಾಣುತ್ತಿದ್ದು, ಎತ್ತ ನೋಡಿದರೂ ಕಾಫಿ ಹೂವುಗಳ ಸುಗಂಧ ಮೈಮನ ತಣಿಸುತ್ತಿದೆ. ಇತ್ತೀಚೆಗೆ ಸುರಿದ ಹದವಾದ ಮಳೆಯ ಸಿಂಚನಕ್ಕೆ ಕಾಫಿ ಗಿಡಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.

ಮೊಗ್ಗಿನ ಜಡೆ ಹೆಣೆದಂತೆ ಕಣ್ಣಿಗೆ ಹಬ್ಬ ನೀಡುವ ಗಿಡಗಳು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಬೆಟ್ಟವೇ ಬಿಳಿ ಬಣ್ಣದ ಚಾದರ ಹೊದ್ದಂತೆ ಕಾಣುತ್ತಿದ್ದು, ಎತ್ತ ನೋಡಿದರೂ ಕಾಫಿ ಹೂವುಗಳ ಸುಗಂಧ ಮೈಮನ ತಣಿಸುತ್ತಿದೆ. ಇತ್ತೀಚೆಗೆ ಸುರಿದ ಹದವಾದ ಮಳೆಯ ಸಿಂಚನಕ್ಕೆ ಕಾಫಿ ಗಿಡಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.

ಹಾಲಿನ ನೊರೆಯಂತೆ ಕಂಗೊಳಿಸುತ್ತಿರುವ ತೋಟಗಳು:

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ಬಾಳೆಹೊನ್ನೂರು, ಮೂಡಿಗೆರೆ ಹಾಗೂ ಮಲೆನಾಡಿನ ಅರೇಬಿಕಾ ಮತ್ತು ರೊಬೊಸ್ಟಾ ತೋಟಗಳಲ್ಲಿ ಕಾಫಿ ಗಿಡಗಳು ಹಾಲಿನ ನೊರೆಯಂತೆ ಬಿಳಿ ಹೂವುಗಳನ್ನು ಹೊತ್ತು ನಿಂತಿವೆ. ಸಾಮಾನ್ಯವಾಗಿ ಬೇಸಿಗೆಯ ಆರಂಭದಲ್ಲಿ ಸುರಿಯುವ ''''''''ಕಾಫಿ ಹೂವಿನ ಮಳೆ'''''''' ಈ ಅದ್ಭುತಕ್ಕೆ ಕಾರಣವಾಗಿದೆ. ಮಳೆಯ ಹನಿಗಳು ಕಾಫಿ ಗಿಡದ ಮೊಗ್ಗು ಗಳನ್ನು ಸ್ಪರ್ಶಿಸುತ್ತಿದ್ದಂತೆ, ಕೆಲವೇ ದಿನಗಳಲ್ಲಿ ತೋಟಗಳೆಲ್ಲಾ ಬಿಳಿಯಾಗಿ ಮಾರ್ಪಟ್ಟಿವೆ. ಈ ದೃಶ್ಯ ರಸ್ತೆಯ ಇಕ್ಕೆಲಗಳಲ್ಲಿ ಸಾಗುವ ದಾರಿಹೋಕರು ಮತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಸುಗಂಧದ ಕಳೆ: ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಕಾಫಿ ತೋಟಗಳಲ್ಲಿ ಅರಳಿರುವ ಈ ಹೂವುಗಳು ಕೇವಲ ದೃಶ್ಯ ವೈಭವವನ್ನಷ್ಟೇ ಅಲ್ಲದೆ, ವಿಶಿಷ್ಟವಾದ ಸುಗಂಧವನ್ನೂ ಬೀರಲಾರಂಭಿಸಿವೆ. ಈ ಹೂವುಗಳ ಮಕರಂದ ಹೀರುತ್ತಿರುವ ಜೇನುನೊಣಗಳು ಮತ್ತು ದುಂಬಿಗಳ ಸಾಲು ಪರಿಸರಕ್ಕೆ ಹೊಸ ಜೀವಕಳೆ ತುಂಬಿವೆ. ಕಾಫಿ ಹೂವಿನ ಪರಿಮಳ ಮಲ್ಲಿಗೆಯ ಸುಗಂಧದಷ್ಟೇ ತೀವ್ರವಾಗಿದ್ದು, ಇಡೀ ಪ್ರದೇಶವನ್ನೇ ಒಂದು ನೈಸರ್ಗಿಕ ಪರ್ಫ್ಯೂಮ್ ಶಾಪ್‌ನಂತೆ ಮಾಡಿದೆ.

ಮೊಗ್ಗಿನ ಜಡೆಯಂತೆ ಕಾಣುವ ಕಾಫಿ ಗಿಡಗಳು:

ಕಳೆದ ವರ್ಷದ ಹವಾಮಾನ ಬದಲಾವಣೆ ಮತ್ತು ಅಕಾಲಿಕ ಮಳೆ ಪ್ರಭಾವದಿಂದ ಈ ಬಾರಿ ಕಾಫಿ ಹೂವುಗಳು ನಿರೀಕ್ಷೆಗಿಂತ ಸ್ವಲ್ಪ ಬೇಗನೇ ಅರಳಿತ್ತು. ಗಿಡಗಳ ಮೇಲೆ ಮೊಗ್ಗಿನ ಜಡೆಯಂತೆ ಸಾಲು ಸಾಲಾಗಿ ಕಾಣಿಸುತ್ತಿವೆ. ಮಂಜಿನ ಹನಿಗಳ ನಡುವೆ ಮಿನುಗುವ ಈ ಹೂವಿನ ದಳಗಳು ಬೆಳಗಿನ ಸೂರ್ಯನ ಕಿರಣಗಳಿಗೆ ಮತ್ತಷ್ಟು ಹೊಳಪು ಪಡೆದುಕೊಳ್ಳುತ್ತವೆ. ಪ್ರವಾಸಿಗರಿಗೆ ಕಾಫಿನಾಡಿನ ಈ ಸೌಂದರ್ಯ ಒಂದು ಮರೆಯಲಾಗದ ಸುಂದರ ಅನುಭವ ನೀಡುತ್ತಿದೆ.

...ಬಾಕ್ಸ್....

ಪ್ರವಾಸಿಗರ ಪಾಲಿಗೆ ಸ್ವರ್ಗ:

ಸದ್ಯ ಚಿಕ್ಕಮಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ದಾರಿಯುದ್ದಕ್ಕೂ ಸಿಗುವ ಕಾಫಿ ತೋಟಗಳ ಮುಂದೆ ನಿಂತು ಫೋಟೋ ಗಳನ್ನು ತೆಗೆದುಕೊಳ್ಳುತ್ತಾ ಸಂಭ್ರಮಿಸುತ್ತಿದ್ದಾರೆ. ತಣ್ಣನೆ ಗಾಳಿಯೊಂದಿಗೆ ಬೆರೆತಿರುವ ಈ ಹೂವುಗಳ ಪರಿಮಳ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಕೃಷಿಕರ ಪಾಲಿಗೆ ಈ ಹೂವುಗಳು ಸಮೃದ್ಧ ಫಸಲಿನ ಸಂಕೇತವಾದರೆ, ಪ್ರಕೃತಿ ಪ್ರೇಮಿಗಳಿಗೆ ಇದು ಕಾಣದ ಲೋಕದ ಸೌಂದರ್ಯದಂತೆ ಭಾಸವಾಗುತ್ತಿದೆ.

ನೀವು ಕೂಡ ಪ್ರಕೃತಿಯ ಈ ಅಪೂರ್ವ ಅನಾವರಣವನ್ನು ಕಣ್ಣುತುಂಬಿಕೊಳ್ಳಬೇಕೆಂದರೆ ಈಗಲೇ ಕಾಫಿನಾಡಿನತ್ತ ಪಯಣ ಬೆಳೆಸಬಹುದು. ಆದರೆ ನೆನಪಿರಲಿ, ಕಾಫಿ ಹೂವುಗಳ ಆಯಸ್ಸು ಕೇವಲ ಕೆಲವು ದಿನಗಳು ಮಾತ್ರ! ಆ ಸುಂದರ ಘಮಲು ಮಾಸುವ ಮುನ್ನವೇ ಮಲೆನಾಡಿನ ಸೊಬಗನ್ನು ಸವಿಯಿರಿ.