ಸಾರಾಂಶ
ಭದ್ರಾವತಿ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಬಂಧನ ಖಂಡಿಸಿ ಕರವೇ ಜಿಲ್ಲಾ ಮಹಿಳಾ ಘಟಕ ವತಿಯಿಂದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ನಾಡು ನುಡಿ, ನೆಲ, ಜಲ ಭಾಷೆಗೆ ಧಕ್ಕೆ ಬಂದಾಗ ದಿಟ್ಟತನದಿಂದ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ನಾರಾಯಣಗೌಡ ಅವರನ್ನು ಡಿ.27ರಂದು ಬೆಂಗಳೂರಿನಲ್ಲಿ ಅನ್ಯಭಾಷೆ ನಾಮಫಲಕಗಳ ವಿರುದ್ಧ ಹೋರಾಟ ರೂಪಿಸಿದ್ದ ಸಂದರ್ಭ ಹೋರಾಟ ನಡೆಸಲು ಅವಕಾಶ ಕೊಡದೇ ಬಂಧಿಸಿ, ಜೈಲಿಗಟ್ಟಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಕನ್ನಡಕ್ಕೆ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯಂತೆ ಇಂದು ಕನ್ನಡಕ್ಕೆ ಕೈ ಎತ್ತಿದರೆ ಕರೆದುಕೊಂಡು ಹೋಗಿ ಜೈಲಿಗಟ್ಟುವ ಸ್ಥಿತಿ ರಾಜ್ಯ ಸರ್ಕಾರ ಮಾಡುತ್ತಿದೆ. ಇದು ಅತ್ಯಂತ ದುರದೃಷ್ಟಕರ ವಿಷಯ. ಬಂಧಿಸಿರುವ ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆಗೆ ಆಗ್ರಹಿಸಲಾಯಿತು.ನಾರಾಯಣಗೌಡ ಬಂಧನ ಖಂಡಿಸಿ ಕಪ್ಪು ಪಟ್ಟಿ ಧರಿಸಿ, ಈ ವರ್ಷ ಹೊಸ ವರ್ಷವನ್ನು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಉದ್ದಿಮೆದಾರರಿಗೆ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ಶೇ.60 ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು. ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಕರವೇ ಹೋರಾಟಗಾರರ ಮೇಲಿರುವ ಕೇಸುಗಳನ್ನು ಹಿಂಪಡೆಯಬೇಕೆಂದು ಉಪ ತಹಸೀಲ್ದಾರ್ ರಾಧಾಕೃಷ್ಣ ಭಟ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷರಾದ ಮಹೇಶ್ವರಿ, ಶಾರದಾ ಕುಮಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಾಗರತ್ನ, ಸುಶ್ಮಿತಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.- - - -ಡಿ1-ಬಿಡಿವಿಟಿ1:
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಬಂಧನ ಖಂಡಿಸಿ ಕರವೇ ಜಿಲ್ಲಾ ಮಹಿಳಾ ಘಟಕದಿಂದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ಸೋಮವಾರ ಭದ್ರಾವತಿಯಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.