ಭುಗಿಲೇಳಲು ಸಿದ್ಧವಾಗಿರುವ ವಿಧಾನಸಭಾ ಚುನಾವಣೆ ಒಳ ಬೇಗುದಿ..!!

| Published : Apr 08 2024, 01:01 AM IST

ಭುಗಿಲೇಳಲು ಸಿದ್ಧವಾಗಿರುವ ವಿಧಾನಸಭಾ ಚುನಾವಣೆ ಒಳ ಬೇಗುದಿ..!!
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎಂ.ಡಿ. ಉಮೇಶ ಅವರ ಮನೆಯ ಆವರಣದಲ್ಲಿ ನಡೆದ ನೂರಾರು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರ ಸಭೆ.

ಎಚ್.ಕೆ.ಬಿ. ಸ್ವಾಮಿ

ಕನ್ನಡಪ್ರಭ ವಾರ್ತೆ ಸೊರಬ

ಕಳೆದ ವಿಧಾನಸಭಾ ಚುನಾವಣೆ ಬಳಿಕ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿಯಲ್ಲಿನ ಒಳ ಬೇಗುದಿ ಲೋಕಸಭಾ ಚುನಾವಣೆಯ ಈಗಿನ ಸಂದರ್ಭದಲ್ಲಿ ಸ್ಫೋಟಗೊಳ್ಳಲು ಸಜ್ಜಾದಂತಿದೆ.

ಆ ಚುನಾವಣೆಯಲ್ಲಿನ ಕುಮಾರ್‌ ಬಂಗಾರಪ್ಪ ವರ್ಸಸ್‌ ನಮೋ ವೇದಿಕೆಯ ಮುಖಂಡರ ಜಿದ್ದಾಜಿದ್ದಿ ಕಾಳಗ ಪುನಃ ಬೀದಿಗೆ ಬರುವ ಸಾಧ್ಯತೆ ಕಂಡು ಬರುತ್ತಿದ್ದು, ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಸಂಕಟ ತರುವ ಸಂದರ್ಭ ಎದುರಾಗಿದೆ.

ಹೇಗೋ ಮಾಡಿ ಮುನಿಸಿಕೊಂಡಿದ್ದ ಕುಮಾರ್‌ ಬಂಗಾರಪ್ಪ ಅವರನ್ನು ಚುನಾವಣಾ ರಂಗಕ್ಕೆ ಕರೆ ತಂದು ಪ್ರಚಾರ ಆರಂಭಿಸಿದ್ದ ರಾಘವೇಂದ್ರ ಅವರಿಗೆ ಇದೀಗ ನಮೋ ವೇದಿಕೆ ಮತ್ತೆ ಮಗ್ಗುಲು ಮುಳ್ಳಾಗುವಂತಾಗಿದೆ.

ಶುಕ್ರವಾರ ರಾಘವೇಂದ್ರ ಮತ್ತು ಕುಮಾರ್‌ ಬಂಗಾರಪ್ಪ ಅವರುಗಳು ಜೊತೆಯಾಗಿ ಹಲವು ಸಭೆ ಸಮಾರಂಭಗಳಲ್ಲಿ ಭಾಗಿಯಾಗಿದ್ದರು. ಭಾನುವಾರ ಚಿತ್ರಣ ಸ್ವಲ್ಪ ಬದಲಾಗಿದೆ. ಪಟ್ಟಣದಲ್ಲಿ ಮಾಜಿ ಪುರಸಭಾ ಅಧ್ಯಕ್ಷ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎಂ.ಡಿ. ಉಮೇಶ್‌ ಅವರ ಮನೆಯ ಆವರಣದಲ್ಲಿ ಸೇರಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಹಲವು ಮುಖಂಡರುಗಳು ಬಿಜೆಪಿ ಜಿಲ್ಲಾ ವರಿಷ್ಠರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಕುಮಾರ್‌ ಬಂಗಾರಪ್ಪ ಅವರನ್ನು ಸೋಲಿಸಲೆಂದೇ ಹುಟ್ಟುಕೊಂಡಿದ್ದ ನಮೋ ವೇದಿಕೆಯನ್ನು ಮುಂದಿಟ್ಟುಕೊಂಡು ಕೆಲವು ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮಧು ಬಂಗಾರಪ್ಪ ಅವರ ಗೆಲುವಿಗೆ ಕಾರಣರಾಗಿದ್ದಾರೆ. ಪಕ್ಷಕ್ಕೆ ಮತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ಕುಮಾರ ಬಂಗಾರಪ್ಪ ಅವರಿಗೆ ದ್ರೋಹ ಬಗೆದಿದ್ದಾರೆ. ಆದರೆ ಅವರ ವಿರುದ್ಧ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಅಭಿಪ್ರಾಯ ಈ ಸಭೆಯಲ್ಲಿ ವ್ಯಕ್ತವಾಯಿತು.

ಅಷ್ಟು ಮಾತ್ರವಲ್ಲ, ಈಗ ಲೋಕಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಈ ಸಂದರ್ಭದಲ್ಲಿ ನಮೋ ವೇದಿಕೆಯಲ್ಲಿದ್ದ ಸುಮಾರು 22 ಜನರಿಗೆ ಚುನಾವಣೆ ಪ್ರಚಾರ ಸಮಿತಿ ಸೇರಿದಂತೆ ವಿವಿಧ ಹುದ್ಧೆಗಳನ್ನು ನೀಡಿ ಪುರಸ್ಕರಿಸಲಾಗಿದೆ. ಆದರೆ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನಿಷ್ಠೆ ತೋರಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದವರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟನೆ ಬೇಕಿದೆ. ಅಲ್ಲಿಯವರೆಗೂ ಕುಮಾರ ಬಂಗಾರಪ್ಪ ಅವರು ಯಾವುದೇ ಕಾರಣಕ್ಕೂ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರವಾಗಿ ಪ್ರಚಾರ ನಡೆಸದಂತೆ ತಾಕೀತು ಮಾಡಿ ಸಹಿ ಸಂಗ್ರಹಿಸಿದ್ದಾರೆ.

ಸೋಲಿನ ಪ್ರತೀಕಾರಕ್ಕೆ ಲೋಕಸಭಾ ಚುನಾವಣೆ ಅಸ್ತ್ರ:

ಸ್ವಪಕ್ಷೀಯರಿಂದಲೇ ಸೋಲು ಅನುಭವಿಸುವಂತಾಗಿದೆ ಎಂದು ಒಂದು ವರ್ಷದಿಂದಲೂ ಬಿಜೆಪಿ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಗೊಳ್ಳದೆ ಅಂತರ ಕಾಯ್ದುಕೊಂಡು ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಕುಮಾರ ಬಂಗಾರಪ್ಪ ಬಿಜೆಪಿಯಲ್ಲಿ ಸಕ್ರಿಯ ವಾಗಿರುವ ನಮೋ ವೇದಿಕೆ ಮುಖಂಡರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬಂತೆ ಕಾಣುತ್ತಿದೆ. ತಮ್ಮ ಬೆಂಬಲಿಗರ ಮೂಲಕ ಜಿಲ್ಲಾ ವರಿಷ್ಠರ ಮುಂದೆ ದಾಳ ಉರುಳಿಸಿದ್ದಾರೆ.

ನಮೋ ವೇದಿಕೆ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಚುನವಾಣೆಯನ್ನು ಸರಿದಾರಿಗೆ ತರುವಂತೆ ವಿಧಾನಸಭಾ ಚುನವಾಣೆ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಗೆ ಮನವರಿಕೆ ಕುಮಾರ್‌ ಬಂಗಾರಪ್ಪ ಮನವರಿಕೆ ಮಾಡಿಕೊಟ್ಟು ನೆರವಿಗೆ ಮನವಿ ಮಾಡಿದ್ದರೂ ಯಾರೂ ಸಹಾಯಕ್ಕೆ ಬದಿರಲಿಲ್ಲ. ಈಗ ತಮ್ಮ ವಿರುದ್ಧ ಕೆಲಸ ಮಾಡಿದವರಿಗೇ ಮಣೆ ಹಾಕಿದ್ದು ಕುಮಾರ್‌ ಬಂಗಾರಪ್ಪ ಅವರನ್ನು ಕೆಣಕಿದೆ ಎಂಬಂತೆ ಕಾಣುತ್ತಿದೆ.

ನಮೋ ವೇದಕೆಯಲ್ಲಿ ಗುರುತಿಸಿಕೊಂಡವರಿಗೆ ಈ ಸಂದರ್ಭದಲ್ಲಿ ನೀಡಿರುವ ವಿವಿಧ ಹುದ್ಧೆಗಳಿಂದ ಅವರನ್ನು ಬಿಡುಗಡೆಗೊಳಿಸಬೇಕು ಮತ್ತು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಇದನ್ನು ತಮ್ಮ ಬೆಂಬಲಿಗರಿಂದ ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ.

ಪಕ್ಷದ ಗೆಲುವು ಮುಖ್ಯವಾಗಿದ್ದು, ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಮತ ಯಾಚಿಸುತ್ತೇವೆ. ಆದರೆ ನಮೋ ವೇದಿಕೆ ಕಾರ್ಯಕರ್ತರನ್ನು ದೂರ ಇಡಬೇಕು.

ಎಂ.ಡಿ. ಉಮೇಶ, ಮಾಜಿ ಪುರಸಭಾ ಅಧ್ಯಕ್ಷ ಹಾಲಿ ಸದಸ್ಯ, ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಮೋ ವೇದಿಕೆ ಮುಖಂಡರಿಗೆ ನೀಡಿದ ಹುದ್ದೆಯನ್ನು ವಾಪಸ್ಸು ಪಡೆಯುವವರೆಗೆ ಕುಮಾರ ಬಂಗಾರಪ್ಪನವರು ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಬಾರದು.

ಮಲ್ಲಿಕಾರ್ಜುನ ವೃತ್ತಿಕೊಪ್ಪ, ಮಾಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಗುರುಕುಮಾರ ಪಾಟೀಲ್, ಜಿ.ಪಂ. ಮಾಜಿ ಸದಸ್ಯ