ಚುನಾವಣಾಧಿಕಾರಿಯೇ ಚುನಾವಣೆ ದಿನದಂದು ಗೈರು!

| Published : May 14 2025, 01:57 AM IST

ಸಾರಾಂಶ

ಪಟ್ಟಣದ ಮಹಾಬೋಧಿ ಡಾ.ಬಿ.ಆರ್. ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ,

ಕನ್ನಡಪ್ರಭ ವಾರ್ತೆ ಹುಣಸೂರು

ಸಹಕಾರ ಸಂಘದ ವರಿಷ್ಠರ ಆಯ್ಕೆಗಾಗಿ ದಿನಾಂಕ ನಿಗದಿಪಡಿಸಿದ ಚುನಾವಣಾಧಿಕಾರಿಯೇ ಚುನಾವಣೆ ದಿನದಂದು ಗೈರಾಗುವ ಮೂಲಕ ಕರ್ತವ್ಯಲೋಪವೆಸಿರುವ ಅಧಿಕಾರಿಯನ್ನು ಅಮಾನತುಗೊಳಿಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಸಂಘದ ನಿರ್ದೇಶಕರು ಕಚೇರಿ ಮುಂಭಾಗ ಪ್ರತಿಭಟಿಸಿದರು.

ಪಟ್ಟಣದ ಮಹಾಬೋಧಿ ಡಾ.ಬಿ.ಆರ್. ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಿಂದ ಪ್ರತಿಭಟನೆ ನಡೆಸಿದ್ದು, ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷಾಕಾಂಕ್ಷಿ ಪುಟ್ಟರಾಜು, ಮಹಾಬೋಧಿ ಡಾ.ಬಿ.ಆರ್. ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ 2025-30ನೇ ಸಾಲಿಗಾಗಿ 13 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದೇವೆ. ಅದರಂತೆ ಸಂಘದ ವರಿಷ್ಠರ ಆಯ್ಕೆಗಾಗಿ ತಾಲೂಕಿನ ಸಹಕಾರ ಇಲಾಖೆಯ ಸಹಾಯಕ ನಿಬಂಧಕರು ಇಲಾಖೆಯಲ್ಲಿ ಸಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ರಾಜಣ್ಣ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಿದ್ದು, ಮೇ 13ರ ಮಂಗಳವಾರ ಚುನಾವಣೆ ಎಂದು ನಿಗದಿಪಡಿಸಲಾಗಿತ್ತು. ಮಂಗಳವಾರ ಬೆಳಗ್ಗೆ 10ಕ್ಕೆ ನಾಮಪತ್ರ ಸಲ್ಲಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ನಾನು ಮತ್ತು ಉಪಾಧ್ಯಕ್ಷಸ್ಥಾನಕ್ಕಾಗಿ ಶಿವಯ್ಯ ನಾಮಪತ್ರ ಸಲ್ಲಿಸಿದ್ದು, ಎರಡೂ ಸ್ಥಾನಗಳಿಗೆ ನಾವಿಬ್ಬರೇ ನಾಮಪತ್ರ ಸಲ್ಲಿಸಿದ್ದೇವೆ. ನಾಮಪತ್ರ ಹಿಂತೆಗೆಯುವ ಅವಧಿಯೂ ಮುಗಿದ ನಂತರವೂ ಚುನಾವಣಾಧಿಕಾರಿ ಕಚೇರಿಗೆ ಬಾರದ ಕಾರಣ ತಾಲೂಕು ಸಹಕಾರ ನಿಬಂಧಕರಿಗೆ, ನಂತರ ಜಿಲ್ಲಾ ನಿಬಂಧಕರು, ಹುಣಸೂರು ಉಪವಿಭಾಗದ ಉಪವಿಭಾಗಾಧಿಕಾರಿ ಮುಂತಾದವರಿಗೆ ಮಾಹಿತಿ ನೀಡಲಾಯಿತು. ಇವರೆಲ್ಲರೂ ಕೈಚೆಲ್ಲಿದರು.

ನಂತರ ಜಂಟಿ ಸಹಕಾರ ಇಲಾಖೆಗಳ ನಿಬಂಧಕ (ಜೆಆರ್‌ಸಿಒ)ರಿಗೆ ದೂರವಾಣಿ ಕರೆ ಮಾಡಿದಾಗ ಸಂಘದ ಕಾರ್ಯದರ್ಶಿ ಬಳಿ ನಿಮ್ಮ ನಾಮಪತ್ರ ಸಲ್ಲಿಸಿರಿ. ನಾನು ಇಲಾಖೆಯಿಂದ ಬೇರೊಬ್ಬ ಅಧಿಕಾರಿಯನ್ನು ಕಳಹಿಸುವ ವ್ಯವಸ್ಥೆ ಮಾಡುತ್ತೇನೆಂದರು. ಆದರೆ ಅದೂ ಅಗಿಲ್ಲವೆಂದು ಬೇಸರಿಸಿದ ಅವರು, ಸಹಕಾರ ಕ್ಷೇತ್ರದಲ್ಲಿ ಅಧಿಕಾರಿಗಳೇ ರಾಜಕಾರಣ ಮಾಡುವ ಮೂಲಕ ಶೋಷಿತ ಸಮಾಜಗಳನ್ನು ತುಳಿಯಲು ಯತ್ನಿಸಿದ್ದಾರೆ. ಇದರಲ್ಲಿ ಕಾಣದ ಕೈಗಳ ಕರಾಮತ್ತು ಇರಬಹುದು ಎಂದು ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ನಾವು ನಿಯಮಬದ್ದವಾಗಿ ನಾಮಪತ್ರ ಸಲ್ಲಿಸಿದ್ದು, ನಮ್ಮ ಆಯ್ಕೆಯನ್ನು ಇಲಾಖೆ ಪ್ರಕಟಿಸಬೇಕು ಮತ್ತು ಕರ್ತವ್ಯಲೋಪವೆಸಗಿರುವ ಅಧಿಕಾರಿಯನ್ನು ವಜಾಗೊಳಿಸಿ ಇಲಾಖಾ ತನಿಖೆ ನಡೆಸಬೇಕು. ಮುಂದಿನ 24 ಗಂಟೆಯೊಳಗೆ ಕ್ರಮವಹಿಸದಿದ್ದರೆ ಕಚೇರಿ ಮುಂಭಾಗ ನ್ಯಾಯ ಸಿಗುವವರೆಗೂ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡಸಲಾಗುವುದು ಎಂದು ಎಚ್ಚರಿಸಿದರು.

ನಿರ್ದೇಶಕರಾದ ರಾಧಾಶಿವಣ್ಣ, ಸಿ.ಕೆ. ದಯಾನಂದ್, ಪುಟ್ಟಮಾದಯ್ಯ, ಎಚ್.ಪಿ. ನಾಗರಾಜ್, ಮಹದೇವಸ್ವಾಮಿ, ಶಿವಯ್ಯ, ನಾಗರಾಜ್ ಇದ್ದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕು

ಈ ಕುರಿತು ಸಹಾಯಕ ನಿಬಂಧಕರಾದ ಅನುಸೂಯ ಅವರನ್ನು ದೂರವಾಣಿ ಮೂಲಕ ಪ್ರಶ್ನಿಸಿದಾಗ ಅಧಿಕಾರಿ ವಿರುದ್ಧ ಕ್ರಮವಹಿಸುವ ಅಧಿಕಾರ ನನಗಿಲ್ಲ, ಇದು ನನ್ನ ವ್ಯಾಪ್ತಿಯಲ್ಲಿಲ್ಲವೆಂದು ಕೈಚೆಲ್ಲಿದರು. ಚುನಾವಣೆ ವಿಷಯಕ್ಕೆ ಅಧಿಕಾರಿಯ ಮೇಲೆ ಕ್ರಮ ಜರುಗಿಸಲು ನನಗೆ ಅಧಿಕಾರಿವಿಲ್ಲ, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕುರಿತು ಕ್ರಮವಹಿಸಬಹುದು ಎಂದು ತಿಳಿಸಿದರು.