ಬೆಳಗಾವಿಗೆ ನುಗ್ಗುವ ಮಹಾನಾಯಕರ ಪ್ರಯತ್ನ ವಿಫಲ

| Published : Nov 02 2025, 03:00 AM IST

ಸಾರಾಂಶ

ಗಡಿ ಪ್ರವೇಶಕ್ಕೆ ನಿರ್ಬಂಧವಿದ್ದರೂ ಕೂಡ ಮಹಾರಾಷ್ಟ್ರ ಪರ ಘೋಷಣೆ ಕೂಗುತ್ತ ಕರ್ನಾಟಕದ ಗಡಿಯೊಳಗೆ ನುಸುಳಲು ಯತ್ನಿಸಿದ ಮಹಾರಾಷ್ಟ್ರದ ಶಿವಸೇನೆಯ ಕೆಲವು ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದ ಕೋಗನೋಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಡೆದು, ವಾಪಸ್ ಕಳುಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಗಡಿ ಪ್ರವೇಶಕ್ಕೆ ನಿರ್ಬಂಧವಿದ್ದರೂ ಕೂಡ ಮಹಾರಾಷ್ಟ್ರ ಪರ ಘೋಷಣೆ ಕೂಗುತ್ತ ಕರ್ನಾಟಕದ ಗಡಿಯೊಳಗೆ ನುಸುಳಲು ಯತ್ನಿಸಿದ ಮಹಾರಾಷ್ಟ್ರದ ಶಿವಸೇನೆಯ ಕೆಲವು ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದ ಕೋಗನೋಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಡೆದು, ವಾಪಸ್ ಕಳುಹಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ, ಮಹಾರಾಷ್ಟ್ರದ ಶಿವಸೇನೆಯ ಕೆಲವು ನಾಯಕರು ಶನಿವಾರ ಗಡಿಯೊಳಗೆ ನುಸುಳಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಡಿಭಾಗದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ ನೇತೃತ್ವದಲ್ಲಿ ಕೆಎಸ್‌ಆರ್‌ಪಿ ತುಕಡಿ ಹಾಗೂ 50 ರಿಂದ 60 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೋಗನೊಳ್ಳಿ ಚೆಕ್‌ಪೋಸ್ಟ್‌ಗೆ ಮಹಾಪುಂಡರು ಬರುತ್ತಿದ್ದಂತೆ ಕರ್ನಾಟಕ ಪೊಲೀಸರು ಅವರನ್ನು ತಡೆದು, ವಾಪಸ್‌ ಕಳಿಸಿದರು. ಬಳಿಕ, ಮಹಾರಾಷ್ಟ್ರದ ನೆಲದಲಿಯೇ ನಿಂತು ಅವರು ಮಹಾರಾಷ್ಟ್ರ ಪರ ಹಾಗೂ ಕರ್ನಾಟಕ ವಿರೋಧಿ ಘೋಷಣೆ ಕೂಗಿದರು. ಬಳಿಕ, ಮಹಾರಾಷ್ಟ್ರ ಪೊಲೀಸರು ಅವರನ್ನು ವಾಪಸ್ ಕರೆದುಕೊಂಡು ಹೋದರು.ಎಂಇಎಸ್‌ ಕರಾಳ ದಿನಾಚರಣೆ: ಮಹಾ ಬಸ್ ತಡೆದು ಆಕ್ರೋಶ

ಅಥಣಿ: ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿದರೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರು ಕರ್ನಾಟಕ ರಾಜ್ಯೋತ್ಸವ ದಿನದಂದು ಮತ್ತೆ ಕರಾಳ ದಿನ ಆಚರಿಸುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕರವೇ (ಎಚ್‌.ಶಿವರಾಮೇಗೌಡ ಬಣ) ಕಾರ್ಯಕರ್ತರು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸುವ ಮೂಲಕ ಎಂಇಎಸ್ ಪುಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು. ಕರವೇ ಜಿಲ್ಲಾ ಮುಖಂಡ ಜಗನ್ನಾಥ ಬಾಮನಿ ಮಾತನಾಡಿ, ಬೆಳಗಾವಿ ಗಡಿ ಭಾಗದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸೌಹಾರ್ದತೆಯಿಂದ ಇದ್ದಾರೆ. ಆದರೆ ಕೆಲವು ಎಂಇಎಸ್‌ ಪುಂಡರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕರಾಳ ದಿನವನ್ನು, ಸುವರ್ಣಸೌಧದ ಅಧಿವೇಶನದ ಸಂದರ್ಭದಲ್ಲಿ ಮಹಾಮೇಳ ನಡೆಸುತ್ತಿದ್ದಾರೆ ಎಂದು ದೂರಿದರು.ಎಂಇಎಸ್‌ ಮುಖಂಡ ಜೊತೆ ಇನ್‌ಸ್ಪೆಕ್ಟರ್‌ ಸೆಲ್ಫಿ:ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ದಿನದಂದೇ ಬೆಳಗಾವಿಯ ಮಾಳಮಾರುತಿ ಪೊಲೀಸ್‌ ಠಾಣೆಯ ಸಿಪಿಐ ಜೆ.ಎಂ.ಕಾಲಿಮಿರ್ಚಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯ ಮುಖಂಡನ ಜೊತೆಗೆ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದು, ಇದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಪೊಲೀಸ್‌ ಇಲಾಖೆ ಅನುಮತಿ ನೀಡದಿದ್ದರೂ ಎಂಇಎಸ್‌ ಮುಖಂಡರು ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆ ಮಾಡುತ್ತಿದ್ದರು. ಈ ವೇಳೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಪಿಐ ಜೆ.ಎನ್‌.ಕಾಲಿಮಿರ್ಚಿ ಅವರು, ಶುಭಂ ಶೆ‍ಳ್ಕೆ ಜೊತೆಗೆ ಆತ್ಮೀಯವಾಗಿ ಮಾತನಾಡಿದ್ದಾರೆ. ಕಾಲಿಮಿರ್ಚಿ ಅವರು ಶೆಳ್ಕೆ ಜೊತೆಗೆ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.