ಸಾರಾಂಶ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಶ್ರೀ ಕಾಶಿ ಜ. ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಹುಚ್ಚೇಶ್ವರ ಮಹಾಮಠದಲ್ಲಿ ಹಚ್ಚಿದ ಜ್ಯೋತಿಯನು ೧೯ ವರ್ಷಗಳಿಂದ ನಿರಂತರವಾಗಿ, ಹುಚ್ಚೇಶ್ವರಮಠದ ಸಹೋದರರು ಧರ್ಮ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಕ್ತರ ಹೃದಯದಲಿ ಪ್ರಜ್ವಲಿಸಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬೆಳ್ಳಟ್ಟಿ ದಾಸೋಹಮಠದ ಬಸವರಾಜ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಹುಚ್ಚೇಶ್ವರ ಮಹಾಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಇಷ್ಠಲಿಂಗ ಮಹಾಪೂಜೆ, ರುದ್ರಪಠಣ, ಸಿದ್ಧಾಂತ ಶಿಖಾಮಣಿ ಪಾರಾಯಣ, ಜನ ಜಾಗೃತಿ ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಈಗ ಪ್ರಶಸ್ತಿಗಳು ಬಿಕರಿಗೆ ಸಿಗುತ್ತಿರುವುದು ನೋವಿನ ಸಂಗತಿಯಾಗಿದೆ. ಆದರೆ ಜೀವನದಲ್ಲಿ ಸಮಾಜ ಕೊಟ್ಟ ಪ್ರಶಸ್ತಿಗಳು ಸೂರ್ಯ ಚಂದ್ರಾಧಿಗಳು ಇರುವವರೆಗೆ ಶಾಶ್ವತವಾಗಿರಲಿವೆ ಎಂದರು.
ಅರಳೆಲೆಮಠದ ಶ್ರೀ ರೇವಣಸಿದ್ಧೇಶ್ವರ ಮಹಾ ಸ್ವಾಮಿಗಳು ಮಾತನಾಡಿ, ಮಠ, ಮಂದಿರಗಳನ್ನು ಸುತ್ತಿ ಡಾಂಬಿಕ ಭಕ್ತಿ ತೋರದೇ, ನಿಮ್ಮ ಮನೆಯ ಗುರು, ಹಿರಿಯರನ್ನು ದೇವರಂತೆ ಕಂಡು, ಗೌರವಿಸಿದ್ದೇಯಾದರೆ, ನಿಮ್ಮ ಮನೆಯೇ ಮಂದಿರವಾಗಿ, ಮನಸ್ಸು ದೇವಾಲಯವಾಗಲಿದೆ ಎಂದರಲ್ಲದೇ, ಹುಚ್ಚೇಶ್ವರ ಮಹಾಮಠದಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.ಗುತ್ತಲ ಪ್ರಭುಸ್ವಾಮಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯನ ಹುಟ್ಟು ಆಕಸ್ಮಿಕವಾದರೂ ಸಾವು ಶಾಶ್ವತ, ಮನುಷ್ಯ ಸತ್ತ ನಂತರವೂ ಜೀವಂತವಾಗಿರಬೇಕಾದರೆ, ಜೀವಿತಾ ಅವಧಿಯಲ್ಲಿ ಮೌಲ್ಯಾಧಾರಿತ ಉತ್ತಮ ಕಾರ್ಯಗಳನ್ನು ಮಾಡಬೇಕು. ಮನುಷ್ಯ ತನ್ನ ಸಾವಿನ ಜೊತೆಗೆ ಬರುವ ಪುಣ್ಯವನು ಬಿಟ್ಟು, ಆಸ್ತಿ, ಅಂತಸ್ತು, ಅಧಿಕಾರದ ವ್ಯಾಮೋಹಕ್ಕೆ ಒಳಗಾಗಿ, ದಾನ, ಧರ್ಮ, ಪುಣ್ಯಕಾರ್ಯಗಳನ್ನು ಮಾಡದೇ, ವ್ಯರ್ಥ ಜೀವನವನ್ನು ಕಳೆಯುತ್ತಿರುವುದು ಖೇಧಕರ ಸಂಗತಿಯಾಗಿದೆ. ಮನುಷ್ಯನ, ಮನಸಿನ ಮಲೀನತೆ ತೋಳೆಯಬೇಕಾದರೆ, ಗುರು ಉಪದೇಶಾಮೃತದಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಹಾವೇರಿ ಪಿಎಸ್ಐ ಡಿ.ಎನ್. ಕುಡಲ ಮಾತನಾಡಿದರು.ಪುರಸಭೆ ಸದಸ್ಯ ಸುರೇಶ ಕುರಗೋಡಿ, ಪ್ರಮುಖರಾದ ಶಂಕ್ರಯ್ಯ ಹುಚ್ಚಯ್ಯನಮಠ, ಸಿದ್ದಪ್ಪ ಹರವಿ, ನಿಂಗನಗೌಡ ಪಾಟೀಲ, ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ಜಗದೀಶ ಯಲಿಗಾರ, ಬಾಪುಗೌಡ್ರ ಪಾಟೀಲ, ರಮೇಶ ಶೆಟ್ಟರ, ಗದಿಗೇಪ್ಪ ಬಳ್ಳಾರಿ, ಚನ್ನಕುಮಾರ ದೇಸಾಯಿ, ಅಶೋಕ ನರೇಗಲ್, ಮಲ್ಲಯ್ಯ ಹುಚ್ಚಯ್ಯನಮಠ, ಪಂಚಾಕ್ಷರಿ ಸಜ್ಜನಶೆಟ್ಟರ ಸೇರಿದಂತೆ ಇತರರು ಇದ್ದರು. ಸುಮಂಗಲಾ ಶೆಟ್ಟರ ಪ್ರಾರ್ಥಿಸಿದರು. ಸಾಹಿತಿ ಎ.ಕೆ. ಆದವಾನಿಮಠ ಸ್ವಾಗತಿಸಿದರು. ಶಿಕ್ಷಕ ಎಂ.ಬಿ. ಉಂಕಿ ನಿರೂಪಿಸಿದರು.