ಭೂಮಿಗೀತಾದಲ್ಲಿ ಪಯಣ ರಂಗತಂಡದವರು ಎನ್‌. ಮಂಗಳ ನಿರ್ದೇಶನದ ಅನುಭವ ಕಥನಗಳನ್ನು ಒಳಗೊಂಡ ಕಳೆದು ಹೋದ ಹಾಡು ನಾಟಕವನ್ನು ಪ್ರಸ್ತುತಪಡಿಸಿ

ಕನ್ನಡಪ್ರಭ ವಾರ್ತೆ ಮೈಸೂರುಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ನಡೆಯುತ್ತಿರುವ ನಾಟಕಗಳ ಸರಣಿಯು ಶನಿವಾರ ಅಂತಿಮ ಹಂತಕ್ಕೆ ತಲುಪಿತು.ಜ. 18 ರಂದು ಬುಹುರೂಪಿಗೆ ತೆರೆ ಬೀಳಲಿರುವ ಹಿನ್ನೆಲೆಯಲ್ಲಿ ಶನಿವಾರ ಬಾಬಾ ಸಾಹೇಬರ ವಿಚಾರಧಾರೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ನೆರವೇರಿತು.ಸಂಜೆ ಕಿಂದರಿಜೋಗಿ ಆವರಣದಲ್ಲಿ ಆವರಣದಲ್ಲಿ ವಿಜಯವಾಡದ ಅದ್ದೂರಿ ಗೋಪಿ ಮತ್ತು ತಂಡದ ಬುಟ್ಟಬೊಮ್ಮುಲು ಪುಲಿವೇಷಾಲು ಕುಣಿತ ಕಣ್ಮನ ಸೆಳೆಯಿತು.ಬಳಿಕ ಮಾಲೂರಿನ ದಲಿತ ಕಲಾಮಂಡಲಿಯ ಪಿಚ್ಚಳ್ಳಿ ಶ್ರೀನಿವಾಸ್‌ ಮತ್ತು ತಂಡದವರು ನಡೆಸಿಕೊಟ್ಟ ಗೀತಗಾಯನವು ಅಂಬೇಡ್ಕರ್‌, ಅಸ್ಪೃಶ್ಯತೆ, ದಲಿತ ಚಳವಳಿಯ ಮೇಲೆ ಬೆಳಕು ಚೆಲ್ಲಿತು.ಕಲಾಮಂದಿರದಲ್ಲಿ ಕೊಯಮತ್ತೂರಿನ ಆಲಂ ಥಿಯೇಟರ್‌ಗ್ರೂಪ್‌ ಕಲಾವಿದರು ಕಿಷ್ಕಿಂಧ ತಮಿಳು ನಾಟಕವನ್ನು ಪ್ರದರ್ಶಿಸಿದರೆ, ಭೂಮಿಗೀತಾದಲ್ಲಿ ಪಯಣ ರಂಗತಂಡದವರು ಎನ್‌. ಮಂಗಳ ನಿರ್ದೇಶನದ ಅನುಭವ ಕಥನಗಳನ್ನು ಒಳಗೊಂಡ ಕಳೆದು ಹೋದ ಹಾಡು ನಾಟಕವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.ವನರಂಗದಲ್ಲಿ ಚಿತ್ರದುರ್ಗದ ಶ್ರೀ ಕುಮಾರೇಶ್ವರ ನಾಟಕ ಸಂಘದ ಕಲಾವಿದರು ಕೆ.ಎನ್‌. ಸಾಳುಂಕಿ ರಚನೆ ಮತ್ತು ಬಿ. ಕುಮಾರಸ್ವಾಮಿ ನಿರ್ದೇಶನದ ಕಿವುಡ ಮಾಡಿದ ಕಿತಾಪತಿ ನಾಟಕವನ್ನು ಪ್ರಸ್ತುತಪಡಿಸಿದರು. ನಾಳೆ ಬಹುರೂಪಿ ಸಮಾರೋಪಗೊಳ್ಳಲಿದ್ದು, ಎರಡು ನಾಟಕಗಳು ನಡೆಯಲಿವೆ.