ಪುರಿ ಜಗನ್ನಾಥನ ಅವತಾರ ಹೊತ್ತು ಬಂದ ಗಣಪತಿ

| Published : Sep 07 2024, 01:35 AM IST

ಸಾರಾಂಶ

ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗ 40ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಪುರಿ ಜಗನ್ನಾಥನ ಪ್ರತಿರೂಪದಂತಿರುವ ಗಣಪತಿ ಮೂರ್ತಿಯನ್ನು ರಾಮನಗರದಲ್ಲಿ ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಂಡಿದೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಪುರಿ ಜಗನ್ನಾಥ ಗಣಪತಿ ಪ್ರತಿಷ್ಠಾಪನೆ । 40ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ವಿಭಿನ್ನ ಮೂರ್ತಿ ತಯಾರಿ

ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಮತ್ತು ಅರಳೀಕಟ್ಟೆ ಗೆಳೆಯರ ಬಳಗದ ಸಹಯೋಗಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗ 40ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಪುರಿ ಜಗನ್ನಾಥನ ಪ್ರತಿರೂಪದಂತಿರುವ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಂಡಿದೆ.

ನಗರದ ಛತ್ರದ ಬೀದಿಯಲ್ಲಿ ಸೇವಾ ಸಂಘ ಮತ್ತು ಬಳಗದ ವತಿಯಿಂದ ಪ್ರತಿವರ್ಷ ಆಯಾ ಸನ್ನಿವೇಶಕ್ಕೆ ತಕ್ಕಂತೆ ವೈವಿಧ್ಯಮಯವಾದ ಬೃಹತ್ ಗಾತ್ರದ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡಿ, ಹಲವು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ.

ಈ ಬಾರಿ 40ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗ ವತಿಯಿಂದ ಒರಿಸ್ಸಾದಲ್ಲಿರುವ ಹಿಂದೂಗಳ ಆರಾಧ್ಯ ದೈವ ಪುರಿ ಜಗನ್ನಾಥನ ಪ್ರತಿರೂಪದಂತೆ ಇರುವ ಸುಮಾರು 7 ಅಡಿ ಎತ್ತರದ ಬೃಹತ್ ಮಣ್ಣಿನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದೆ.

ಛತ್ರದ ಬೀದಿಯಲ್ಲಿ ಕಳೆದ 39 ವರ್ಷಗಳಿಂದ ಸತತವಾಗಿ ಸಾರ್ವಜನಿಕರ ಸಹಕಾರದೊಂದಿಗೆ ಗಣೇಶ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷವೂ ಹೊಸ ಪ್ರಯೋಗದೊಂದಿಗೆ ಮೋದಕ ಪ್ರಿಯನ ಅನೇಕ ರೂಪಗಳ ದರ್ಶನ ಭಾಗ್ಯ ದೊರಕಿಸಿ ಭಕ್ತಾದಿಗಳಲ್ಲಿ ಹೊಸ ಸಂಚಲನ ಮೂಡಿಸುವಲ್ಲಿ ಸೇವಾ ಸಂಘವು ಶ್ರಮಿಸುತ್ತಿದೆ.

ಸೇವಾ ಸಂಘ 25ನೇ ವರ್ಷದ ಪ್ರಯುಕ್ತ ವೆಂಕಟರಮಣಸ್ವಾಮಿ ರೂಪ ತಾಳಿದ ಗಣಪತಿ ಜೊತೆಗೆ 24 ವರ್ಷಗಳಲ್ಲಿ ಪ್ರತಿಷ್ಠಾಪಿಸಿದ್ದ ವಿಭಿನ್ನ ಮಾದರಿಯ ಗಣಪತಿ ಮೂರ್ತಿಗಳನ್ನು ಕೂರಿಸಿ ಗಮನ ಸೆಳೆದಿದ್ದರು.

ಆನಂತರ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವಿಷ್ಣು ಗಣಪತಿ ಪ್ರಧಾನ ಮೂರ್ತಿಯ ಜೊತೆಗೆ ಮುದ್ಗಲ ಪುರಾಣದಲ್ಲಿ ಬರುವ 32 ಬಗೆಯ ಬಾಲಗಣಪತಿ ಮೂರ್ತಿಗಳ ಸಮೇತ ಶ್ರೀ ಲಕ್ಷ್ಮೀ, ಸರಸ್ವತಿ, ವೆಂಕಟೇಶ್ವರ, ಶ್ರೀರಾಮ, ಶ್ರೀ ಕೃಷ್ಣ, ಹನುಮಂತ, ಮಂಜುನಾಥ, ಶಿವ ಪಾರ್ವತಿ, ಅಯ್ಯಪ್ಪ, ಸುಬ್ರಹ್ಮಣ್ಯ, ಸಾಯಿಬಾಬಾ, ಅನಂತ ಪದ್ಮನಾಭ, ಬ್ರಹ್ಮ, ರಾಘವೇಂದ್ರ, ಪಾಂಡುರಂಗ, ಅನ್ನಪೂರ್ಣೇಶ್ವರಿ, ಕಾವೇರಿಮಾತೆ ಸೇರಿ ಸುಮಾರು 29 ವಿವಿಧ ದೇವರುಗಳನ್ನು ಪ್ರತಿಷ್ಠಾಪಿಸಲಾಗಿತ್ತು.

ಕೋವಿಡ್‌ನಲ್ಲಿ ವಿಜೃಂಭಣೆಗೆ ಅಡ್ಡಿ:

ಸೇವಾ ಸಂಘದ ವತಿಯಿಂದ ನಡೆಯುವ ಅದ್ಧೂರಿ ಗಣೇಶೋತ್ಸವಕ್ಕೆ ಕೋವಿಡ್-19 ಸಂದರ್ಭದಲ್ಲಿ ಅಡ್ಡಿ ಉಂಟಾಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಅಂದು ಸಣ್ಣ ಗಾತ್ರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಆ ಸಂದರ್ಭದಲ್ಲೂ ಬೃಹತ್ ಗಾತ್ರದ ಗಣಪತಿಯನ್ನು ಪ್ರತಿಷ್ಠಾಪಿಸಲು ಸೇವಾ ಸಂಘ ತೀರ್ಮಾನಿಸಿತ್ತು. ಆದರೆ, ಸರ್ಕಾರದ ಯಾವುದೇ ವಿಜೃಂಭಣೆ ಇಲ್ಲದೇ ಗಣೇಶೋತ್ಸವವನ್ನು ಆಚರಿಸಲು ನಿರ್ದೇಶಿಸಿತ್ತು.

ಈಗ 40ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ರಾಜ್ಯದಲ್ಲಿಯೇ ಮೊದಲ ಬಾರಿ ಎನ್ನಲಾದ ಪುರಿ ಜಗನ್ನಾಥನ ಅವತಾರದಲ್ಲಿರುವ ಗಣಪತಿಯನ್ನು ಸೇವಾ ಸಂಘ ಕೂರಿಸುತ್ತಿದೆ. ತಲೆ ಮೇಲೆ ಕಿರೀಟ ಧರಿಸಿದ್ದು, ವೃತ್ತಾಕಾರದ ಕಣ್ಣುಗಳನ್ನು ಹೊಂದಿರುವ ಪುರಿ ಜಗನ್ನಾಥ ಗಣಪತಿ ಮೂರ್ತಿ ಸಿಂಹಾಸನದಲ್ಲಿ ಆಸೀನನಾಗಿದ್ದಾನೆ. ಮಾಗಡಿಯ ಕಲಾವಿದ ಉಮಾಶಂಕರ್ ರವರ ಕೈಚಳಕದಲ್ಲಿ ಪುರಿ ಜಗನ್ನಾಥ ಗಣಪತಿ ಮೂರ್ತಿ ತಯಾರಾಗಿದೆ.

ಪ್ರತಿ ವರ್ಷ ಹೊರ ಜಿಲ್ಲೆಗಳ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಗಣಪತಿ ಮೂರ್ತಿಗಳ ದರ್ಶನ ಪಡೆಯುತ್ತಾರೆ. ಜಿಲ್ಲೆಯಲ್ಲಿಯೇ ವಿಭಿನ್ನವಾಗಿ ಗಣೇಶೋತ್ಸವವನ್ನು ಆಚರಿಸಿರುವುದು ನಮ್ಮ ಸೇವಾ ಸಂಘದ ಪ್ರಯತ್ನವಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ವಿ.ರವೀಂದ್ರ ಹೇರ್ಳೆ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಪೂಜಾ ಕಾರ್ಯಕ್ರಮ:

ಸೆ.7ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮವನ್ನು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದು, ಶಾಸಕ ಎಚ್.ಎ.ಇಕ್ಬಾಲ್‌ ಹುಸೇನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಾ.ಸಿ.ಎನ್. ಮಂಜುನಾಥ್, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಕೆ.ರಾಜು, ಎ.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಗೌತಮ್‌ಗೌಡ, ನಗರಸಭಾ ಸದಸ್ಯರಾದ ಕೆ.ಶೇಷಾದ್ರಿ (ಶಶಿ), ಮುತ್ತುರಾಜು, ಸೋಮಶೇಖರ್, ಮಹಾಲಕ್ಷ್ಮೀ, ಮಂಜುಳಾ ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಜಿಲಾಧ್ಯಕ್ಷ ಸತೀಶ್, ಮಾಜಿ ಅಧ್ಯಕ್ಷ ಆರ್.ಕೆ.ಬೈರ ಲಿಂಗಯ್ಯ, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ತಹಸೀಲ್ದಾರ್ ತೇಜಸ್ವಿನಿ, ನಗರಸಭೆ ಆಯುಕ್ತ ಡಾ.ಜಯಣ್ಣ, ಸಮಾಜ ಸೇವಕರಾದ ಪ್ರಶಾಂತ್, ನಾಗೇಶ್, ಪ್ರದೀಪ್, ಲಕ್ಷ್ಮಣ್ , ಶಿವಾನಂದ, ಗಿರೀಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಸೇವಾ ಸಂಘ - ಬಳಗದ ಇತಿಹಾಸ

ಪ್ರತಿವರ್ಷ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗಕ್ಕೆ 40 ವರ್ಷಗಳ ಇತಿಹಾಸವಿದೆ.

1984 ರಿಂದಲೂ ನಗರದ ಛತ್ರದ ಬೀದಿಯಲ್ಲಿ ಗಣಪತಿಯನ್ನು ಪ್ರತಿ ವರ್ಷ ಪ್ರತಿಷ್ಠಾಪಿಸಿ, ಅದ್ಧೂರಿಯಾಗಿ ಗಣೇಶೋತ್ಸವವನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಅಂತೆಯೇ ಆಕರ್ಷಕ ಜನಪದ ಕಲಾತಂಡಗಳೊಂದಿಗೆ ವಿಜೃಂಭಣೆಯ ಮೆರವಣಿಗೆಯ ಮೂಲಕ ನಗರದ ರಂಗರಾಯರ ದೊಡ್ಡಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಸೇವಾ ಸಂಘ ಮತ್ತು ಬಳಗದ ಕಾರ್ಯಕಾರಿ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಕೆ.ಆರ್ .ನಾಗೇಶ್ , ಅಧ್ಯಕ್ಷರಾಗಿ ಪಿ.ವಿ.ರವೀಂದ್ರ ಹೇರ್ಳೆ, ಪ್ರಧಾನ ಕಾರ್ಯದರ್ಶಿಯಾಗಿ ಉಮಾ ಮಹದೇವಪ್ಪ, ಖಜಾಂಚಿಯಾಗಿ ಎಂ.ಗಿರೀಶ್ ರಾವ್ , ಸಂಚಾಲಕರಾಗಿ ರಾಜು, ಆರ್ .ಲೋಹಿತ್ , ಆರ್ .ಪಿ.ಪ್ರಶಾಂತ್ , ಗುರುಪ್ರಸಾದ್ , ವಿ.ಶಾಂತಕುಮಾರ್ , ಎಂ.ಮಹದೇವ್ , ಶಿವಪ್ರಕಾಶ್ , ಆರ್ .ಪ್ರಶಾಂತ್ , ಶಿವರುದ್ರ, ಮಾದೇಶ, ಶಿವಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಘ್ನ ನಿವಾರಕನ ವಿವಿಧ ರೂಪಗಳು

ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗ ಇದುವರೆಗೆ ಶ್ರೀ ಚಕ್ರ ಗಣಪತಿ, ಚಂದ್ರಾಶನ, ಸೂರ್ಯ, ಗಜವಧನ, ನಾಟ್ಯ ಗಣಪತಿ, ನೀಲವರ್ಣ, ಷಟ್ಪುಜ, ತ್ರಿಮುಖ, ಆಚಾರ್ಯ, ಭೂವರಾಹ, ಹರಿಹರ, ಗರುಡ, ಅಶ್ವಥಾಮ ಸೇರಿದಂತೆ ನಾನಾ ಅವತಾರ ತಾಳಿರುವ ವಿಶೇಷ ಗಣಪತಿಗಳನ್ನು ಪ್ರತಿವರ್ಷ ಪ್ರತಿಷ್ಠಾಪಿಸುವ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ವರ್ಷ ಪುರಿ ಜಗನ್ನಾಥ ಗಣಪತಿ ಪ್ರತಿಷ್ಠಾಪಿಸಿ ಪೂಜಿಸುತ್ತಿರುವುದು ಭಕ್ತರನ್ನು ತನ್ನೆಡೆಗೆ ಆಕರ್ಷಿಸಲಿದೆ.