ಸಾರಾಂಶ
ಮಹೇಂದ್ರ ದೇವನೂರು
ಮೈಸೂರು : ದಕ್ಷಿಣ ಭಾರತದ ಐತಿಹಾಸಿಕ ಕುಂಭಮೇಳಕ್ಕೆ ಸೋಮವಾರ ತಿರುಮಕೂಡಲ ನರಸೀಪುರದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರಕಿತು.ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿ ಸ್ಪಟಿಕ ಸರೋವರದ ಸಂಗಮ ಸ್ಥಳವಾದ ಅಗಸ್ತೇಶ್ವರಸ್ವಾಮಿ ದೇವಾಲಯದ ಬಳಿ ಮೂರು ದಿನಗಳ ಕಾಲ ದಕ್ಷಿಣ ಭಾರತದ ಐತಿಹಾಸಿಕ ಕುಂಭಮೇಳ ನಡೆಯಲಿದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ಅಗಸ್ತೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಲಾಯಿತು. ಬಳಿಕ ನದಿಯ ಮಧ್ಯದಲ್ಲಿರುವ ನಡು ಹೊಳೆ ಬಸಪ್ಪನ (ಬಸವೇಶ್ವರ) ಸನ್ನಿಧಿಯ ದ್ವೀಪದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಲಾಯಿತು.ಪ್ರತಿ ಮೂರು ವರ್ಷಗಳಗೊಮ್ಮೆ ನಡೆಯುವ ದಕ್ಷಿಣ ಭಾರತದ ಕುಂಭಮೇಳಕ್ಕೆ ಹಿಂದಿಗಿಂತ ಈ ಬಾರಿಯ ಕುಂಭಮೇಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬಂತು.
ಮೊದಲ ದಿನವೇ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಅಗಸ್ತೇಶ್ವರ ದರ್ಶನ ಪಡೆದರು.1989 ರಲ್ಲಿ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,, ತಿರುಚ್ಚಿ ಸ್ವಾಮಿಗಳಿಂದ ಕುಂಭ ಮೇಳಕ್ಕೆ ಚಾಲನೆ ದೊರಕಿತ್ತು. ಅಂದಿನಿಂದ ಇಂದಿನವರೆಗೆ 12 ಕುಂಭಮೇಳ ನಡೆದಿದ್ದು, ಈಗ ಆರಂಭವಾಗಿರುವುದು 13ನೇ ಕುಂಭಮೇಳ.ಸೋಮವಾರ ಅಗಸ್ತೇಸ್ವರ ದೇವಸ್ಥಾನದಲ್ಲಿ ಪ್ರಾತಃಕಾಲ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿತು. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಕೈಲಾಸನಂದ ಮಠದ ಜಯೇಂದ್ರಪುರಿ ಸ್ವಾಮೀಜಿ ವಿವಿಧ ಪೂಜಾ ಕೈಂಕರ್ಯ ಕೈಗೊಂಡ ಬಳಿಕ ಬಳಿಕ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಎಸ್ಪಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ರಕ್ಷಿತ್ ಮೊದಲಾದವರು ಇದ್ದರು.ಶ್ರೀ ಅಗಸ್ತೇಶ್ವರ, ಶ್ರೀ ಗುಂಜಾ ನರಸಿಂಹಸ್ವಾಮಿ ಮತ್ತು ಶ್ರೀ ಭಿಕ್ಷೇಶ್ವರ ದೇವಸ್ಥಾನದ ಬಳಿ ಪುಣ್ಯ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯೇ ಹೆಚ್ಚು ಮಂದಿ ಭೇಟಿಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ಪ್ರೇರಿತರಾದ್ದರಿಂದ ಮೈಸೂರಿನ ಟಿ. ನರಸೀಪುರದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಕುಂಭಮೇಳಕ್ಕೆ ಮೊದಲ ದಿನವೇ ಹೆಚ್ಚು ಮಂದಿ ಭೇಟಿ ನೀಡಿದ್ದರು.ಮೂರು ದಿನ ನಡೆಯುವ ಈ ಕುಂಭ ಮೇಳದಲ್ಲಿ ಬುಧವಾರ ಕುಂಭಸ್ನಾನಕ್ಕೆ ನಕ್ಷತ್ರ ಹಾಗೂ ಸಮಯ ನಿಗದಿಪಡಿಸಲಾಗಿದೆ. ಆದರೂ ಮೊದಲ ದಿನವಾದ ಸೋಮವಾರವೇ ಹೆಚ್ಚು ಮಂದಿ ಭೇಟಿ ನೀಡಿದ್ದರು.ಕುಂಭಮೇಳದ ಕೊನೆಯ ದಿನ ಫೆ. 12ರಂದು ಮಾಘ ಪೂರ್ಣಿಮೆಯಂದು ಬೆಳಗ್ಗೆ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಮೊದಲಾದ ಕಾರ್ಯಕ್ರಮ ನಡೆಯಲಿವೆ.
ಮಹೋದಯಕಾಲದ ಮಹಾಮಾಘ ಪುಣ್ಯಸ್ನಾನಕ್ಕೆ ಅಂದು ಬೆಳಗ್ಗೆ 9 ರಿಂದ 9.30 ರವರೆಗಿನ ಮೀನಲಗ್ನ ಮತ್ತು ಮಧ್ಯಾಹ್ನ 12 ರಿಂದ 1 ರವರೆಗಿನ ವೃಷಭ ಲಗ್ನದಲ್ಲಿ ಸಮಯ ನಿಗದಿ ಪಡಿಸಲಾಗಿದೆ.ಮಧ್ಯಾಹ್ನವಾದರೂ ಸಚಿವರು ಬರಲಿಲ್ಲ
ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರ ಟಿ. ನರಸೀಪುರದಲ್ಲಿ ಕುಂಭಮೇಳ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಮಧ್ಯಾಹ್ನವಾದರೂ ಸ್ಥಳಕ್ಕೆ ಬರಲಿಲ್ಲ. ಬದಲಿಗೆ ವಿವಿಧ ಮಠಾಧೀಶರು ಮತ್ತು ಅಧಿಕಾರಿಗಳು ಕುಂಭಮೇಳದ ನೇತೃತ್ವವಹಿಸಿ ಚಾಲನೆ ದೊರಕಿಸಿಕೊಟ್ಟರು.
ಮಧ್ಯಾಹ್ನ 1.30 ಆದರೂ ಊಟವಿಲ್ಲ
ಬಿಜಿಎಸ್ ಕಲ್ಯಾಣ ಮಂಟಪದ ಆವರಣದಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿ, ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ ಮಧ್ಯಾಹ್ನದ ಊಟಕ್ಕಾಗಿ ಆಗಮಿಸಿದ ಜನರು ನಿರಾಸೆಯಿಂದ ಹಿಂದಿರುಗಿದರು.ಇನ್ನು ವಿವಿಧ ಇಲಾಖೆ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಊಟದ ಹಾಲ್ ನಲ್ಲಿ ಪೊಲೀಸರು, ಕಂದಾಯ ಇಲಾಖೆ, ಪುರಸಭೆ, ತಾಪಂ ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ವಿವಿಧ ಇಲಾಖೆಯ ಸುಮಾರು 300ಕ್ಕೂ ಹೆಚ್ಚು ಮಂದಿ ಜಮಾಯಿಸಿದರು.
ಆದರೆ 1.30 ಆದರೂ ಇನ್ನೂ ಆಡುಗೆ ಸಿದ್ಧವಾಗಿರಲಿಲ್ಲ. ಒಂದೂವರೆ ಗಂಟೆ ಬೇಕಾಗುತ್ತದೆ ಅಡುಗೆ ಸಿದ್ಧವಾಗಲು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದರಿಂದ ಅನೇಕರು ಹಿಂದಿರುಗಿದರು.
ಬಿಗಿ ಭದ್ರತೆ--4 ಎಎಸ್ಪಿ, 9 ಡಿವೈಎಸ್ಪಿ, 27 ಸರ್ಕಲ್ ಇನ್‌ಸ್ಪೆಕ್ಟರ್, 85 ಮಂದಿ ಎಸ್‌ಐ ಸೇರಿದಂತೆ ಒಟ್ಟು 1200 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.ಆಯ್ದ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಪುಣ್ಯ ಸ್ನಾನಕ್ಕೆ ಹೋಗುವ ಮತ್ತು ಬರುವ ಮಾರ್ಗಕ್ಕೆ ಪ್ರತ್ಯೇಕ ಮಾರ್ಗ ಮಾಡಿದ್ದು ಬ್ಯಾರಿಕೇಡ್ ಅಳವಡಿಸಲಾಗಿದೆ. ಬಿಜಿಎಸ್ ಕಲ್ಯಾಣ ಮಂಟಪದಿಂದ ಅಗಸ್ತೇಶ್ವರಸ್ವಾಮಿ ದೇವಸ್ಥಾನದ ಬಳಿಯವರೆಗೆ ತೆರಳಲು ವೃದ್ಧರು ಮತ್ತು ಅಂಗವಿಕಲರಿಗೆ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡಲಾಗಿದೆ. ಪುಣ್ಯಸ್ನಾನದ ವೇಳೆ ಎಚ್ಚರಿಕೆ ವಹಿಸುವಂತೆ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಲಾಯಿತು.
ನಾಳೆ ಏನೇನು ಪೂಜೆ
ಫೆ. 11 ರಂದು ಚತುರ್ದಶಿ, ಆಶ್ಲೇಷ, ಪ್ರಾತಃ ಪುಣ್ಯಾಹ - ನವಗ್ರಹ ಹೋಮ, ಸುದರ್ಶನ ಹೋಮ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಧರ್ಮಸಭೆ, ಸಂಜೆ 4ಕ್ಕೆ ಮಹಾತ್ಮರ, ಸಂತರ, ಮಹಾ ಮಂಡಲೇಶ್ವರರ ತ್ರಿವೇಣಿ ಸಂಗಮ ಕ್ಷೇತ್ರ ಪ್ರವೇಶ. ಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ಟಿ. ನರಸೀಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.ಸಂಜೆ 6 ಗಂಟೆಗೆ ಶ್ರೀ ರುದ್ರಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ನಡೆಯುವ ಗಂಗಾ ಪೂಜೆಯ ವೇಳೆ ವಾರಾಣಸಿಯ ಗಂಗಾರತಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ ನಡೆಯಲಿದೆ.