ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಡಾ.ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ, ಹಿಂದುಳಿದ ಅಲ್ಪಸಂಖ್ಯಾತ ಕಾರ್ಮಿಕ ಪ್ರಗತಿಪರ ರೈತ-ಮಹಿಳಾ ಸಂಘಟನೆಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಕರೆ ನೀಡಿದ್ದ ಬಾಗಲಕೋಟೆ ಬಂದ್ ಸೋಮವಾರ ಯಶಸ್ವಿಯಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆದು ಆಕ್ರೋಶ ವ್ಯಕ್ತಪಡಿಸಲಾಯಿತು.ಇಲ್ಲಿನ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬಂದ್‌ಗೆ ಚಾಲನೆ ನೀಡಲಾಯಿತು. ಬೆಳಗ್ಗೆ ನವನಗರದ, ವಿದ್ಯಾಗಿರಿ ಹಳೇ ಬಾಗಲಕೋಟೆ ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಯಿತು. ಪ್ರಮುಖ ರಸ್ತೆ, ಬೀದಿ, ವೃತ್ತಗಳು ಬಿಕೋ ಎನ್ನುತ್ತಿದ್ದವು. ಆಸ್ಪತ್ರೆ, ಸರ್ಕಾರಿ ಕಚೇರಿಗಳು ಬಿಟ್ಟರೇ ಬಹುತೇಕ ಕಚೇರಿಗಳು ಸೇವೆ ಸ್ಥಗಿತಗೊಳಿಸಿದ್ದವು. ಬಸ್, ಆಟೋ, ಟಂಟಂ ಸಂಚಾರ ಬಂದ್ ಆಗಿತ್ತು. ಇದರಿಂದ ಸಾರ್ವಜನಿಕರು ಪರದಾಡಿದರು. ಸಂಜೆ 5 ಗಂಟೆ ಬಳಿಕ ಬಾಗಲಕೋಟೆ ನಗರ ಯಥಾಸ್ಥಿತಿಗೆ ಮರಳಿತು.
ಬೃಹತ್ ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಯಾರಾದರೂ ತಮ್ಮ ವಿರುದ್ಧ ಬಾಯಿ ಬಿಟ್ಟರೆ ಸಿಬಿಐ, ಇಡಿ ಮೂಲಕ ಹತ್ತಿಕ್ಕುವ ತಂತ್ರ ಮಾಡುತ್ತಾರೆ. ಸಂವಿಧಾನದ ಅಡಿಯಲ್ಲಿ ರಚಿಸಲಾದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಅಜೀತ್ ಪವಾರ್ ಸಾವಿರಾರು ಕೋಟಿ ರು. ಹಗರಣ ಮಾಡಿ ಜೈಲಿಗೆ ಹೋಗುವ ಸಂದರ್ಭ ಬಂದಿತು. ಬಿಜೆಪಿ ಪಕ್ಷಕ್ಕೆ ಸೇರಿದ ಮೇಲೆ ಎಲ್ಲವು ಕ್ಲೀನ್ ಚಿಟ್ ಆಯಿತು ಎಂದರು.ಈ ದೇಶವನ್ನು ಅಧಾನಿ, ಅಂಬಾನಿ ಕಂಪನಿಗಳಿಗೆ ಕೊಟ್ಟು ಬಡವರಿಗೆ ದಿಕ್ಕಾಪಾಲು ಮಾಡಿದ್ದಾರೆ. ಕೇಂದ್ರದ ಗೃಹ ಸಚಿವ ಅಮಿತ್ ಶಾ ಇತಿಹಾಸ ನಿಮಗೆ ಗೊತ್ತಿರಬೇಕು. ಗಡಿಪಾರಾದಂತವರು ಜೈಲಿಗೆ ಹೋಗಿ ಬಂದಂತವರು. ಆದರೇ ಇಂದು ಅಂಬೇಡ್ಕರ್ ಬಗ್ಗೆ ಅಪಮಾನ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಯಾರು ಯಾವುದಕ್ಕೆ ಭಗದ್ಗೀತೆ ಎನ್ನುತ್ತಾರೆ ನನಗೆ ಗೊತ್ತಿಲ್ಲ. ಅಂಬೇಡ್ಕರ್ ಅವರ ತತ್ವ ಆದರ್ಶಗಳೇ ನಮಗೆ ಭಗವದ್ಗೀತೆ ಎಂದು ಹೇಳಿದರು.
ದಲಿತ ಸಂಘಟನೆ ಅವರು ಇಂಥ ಎಲ್ಲಾ ಹೋರಾಟ ಮಾಡುತ್ತೀರಿ ಆದರೆ ಚುನಾವಣೆ ಬಂದಾಗ ಯಾಮಾರುತ್ತೀರಿ. ಡಾ.ಅಂಬೇಡ್ಕರ್ ಕೇಲವ ಎಸ್ಸಿ, ಎಸ್ಟಿ ನಾಯಕರಲ್ಲ. ವಿಶ್ವ ಕಂಡ ಶ್ರೇಷ್ಠ ನಾಯಕ. ಮಹಾನ್ ಮಾನವತಾವಾದಿ. ವ್ಯವಸ್ಥೆಯಲ್ಲಿನ ಲೂಫೋಲ್ಸ್ ಉಪಯೋಗಿಸಿಕೊಳ್ಳುವುದರ ಮುಖಾಂತರ ಬಿಜೆಪಿಯವರು ಅಧಿಕಾರಕ್ಕೆ ಬರುತ್ತಾರೆ. ಅವರಿಗೆ ಅಂಬೇಡ್ಕರ್ ಬಗ್ಗೆ ಗೌರವ ಇಲ್ಲ. ಹೀಗಾಗಿ ಬಿಜೆಪಿ ಬಗ್ಗೆ ಎಚ್ಚರವಿರಲಿ ಎಂದು ಗುಡುಗಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ವಾಲ್ಮೀಕಿ ಮಹಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ, ನಗರಸಭೆ ಸದಸ್ಯ ಹಾಜಿಸಾಬ ದಂಡಿನ, ಮುಖಂಡರಾದ ಕುತುಬುದ್ಧೀನ್ ಖಾಜಿ, ಎಂ.ಬಿ.ಸೌದಾಗರ, ವೈ.ಸಿ.ಕಾಂಬಳೆ, ಪ್ರೇಮನಾಥ ಗರಸಂಗಿ, ಹೇಮಂತ ಚೂರಿ, ಡಿ.ಬಿ.ಸಿದ್ದಾಪುರ, ಯುವರಾಜ ಬಂಡಿ, ಚಂದ್ರಶೇಖರ ರಾಠೋಡ, ಸಂತೋಷ ಹೊಕ್ರಾಣಿ, ನಿಂಗಪ್ಪ ಗಸ್ತಿ, ಸೈಪುದ್ದೀನ್ ಕಲಾದಗಿ(ನಕಾಶ), ಸಿಕಂದರ ಅಥಣಿ ಇತರರು ಇದ್ದರು.
ಈ ದೇಶದಲ್ಲಿ ಒಂದು ಡಾಲರ್ ಬೆಲೆ 86.64 ರು. ಆಗಿದೆ. ದೇಶದ ಮಾನ ಮರ್ಯಾದೆ ವಿಶ್ವದಲ್ಲಿ ಹರಾಜು ಹಾಕಲಾಗುತ್ತಿದೆ. ಇಂತಹ ಅಯೋಗ್ಯರು ಇಂದು ಈ ದೇಶ ಆಳ್ತಾ ಇದ್ದಾರೆ. ಇದೆಲ್ಲ ಮರೆಮಾಚಲಿಕ್ಕೆ ಸಣ್ಣಪುಟ್ಟ ಗಲಾಟೆ ಎಬ್ಬಿಸುತ್ತಾರೆ. ಸೂಕ್ಷ್ಮವಾಗಿ ಗಮನಿಸಿ ತಕ್ಕ ಪಾಠ ಕಲಿಸಬೇಕು.ಆರ್.ಬಿ.ತಿಮ್ಮಾಪೂರ, ಅಬಕಾರಿ ಸಚಿವ
ಡಾ.ಅಂಬೇಡ್ಕರ್ ರವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಒಂದು ದಿನವು ಸಂವಿಧಾನ ಬಗ್ಗೆ ಅರಿತುಕೊಂಡಿಲ್ಲ. ಈ ದೇಶದ ಪ್ರಜಾಪ್ರಭುತ್ವದ ದೇಗುಲ ಸಂಸತ್‌ನಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅಂಬೇಡ್ಕರ್ ಅವಮಾನ ಮಾಡಿದ್ದು, ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ.ಪರಶುರಾಮ ಮಹಾರಾಜನವರ, ರಾಜ್ಯಾಧ್ಯಕ್ಷ ಸತ್ಯ ಶೋಧ ಸಂಘಟನೆ
ಡಾ.ಅಂಬೇಡ್ಕರ್ ರವರು ಪ್ರತಿಯೊಬ್ಬ ಭಾರತೀಯನ ಉಸಿರು. ಜಾತಿ, ಮತ, ಪಂಥ, ಧರ್ಮ ಮೀರಿ ಏಕತೆ ಸಾಧಿಸಲು ಕಾರಣೀಕರ್ತರು. ಮಹತ್ತರ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯ ಉಸಿರಾಗಿಸಿಕೊಂಡು ಬದುಕುತ್ತಿದ್ದಾರೆ. ಹೀಗಾಗಿ ನಮಗೆ ಅಂಬೇಡ್ಕರ್ ಉಸಿರು ನಮ್ಮ ಬದುಕು. ಇಂತಹ ಮಹಾನ್ ಚೇತನವನ್ನು ವ್ಯಸನ ಅಂತ ಕರೆತರಲ್ಲ ಅಮಿತ್ ಶಾ ಅವರೇ ನಾಚಿಕೆ ಬರಬೇಕು. ಇವರನ್ನು ಸಂಪುಟದಿಂದ ವಜಾಗೊಳಿಸಬೇಕು.ರಕ್ಷಿತಾ ಭರತಕುಮಾರ ಈಟಿ, ಜಿಲ್ಲಾಧ್ಯಕ್ಷೆ ಕಾಂಗ್ರೆಸ್ ಮಹಿಳಾ ಘಟಕದ
ಡಾ.ಅಂಬೇಡ್ಕರ್ ಈ ದೇಶದ ಆತ್ಮ ಇದ್ದಂತೆ. ಅವರ ಬಗ್ಗೆ ಮೌಲ್ಯದಿಂದ ನಡೆದುಕೊಳ್ಳುವ ಬದಲು ಅಪಹಾಸ್ಯ ಮಾಡುತ್ತೀದ್ದೀರಿ. ಇದು ಸರಿಯಾದ ನಿಲುವು ಅಲ್ಲ. ಸಂವಿಧಾನವನ್ನು ಅಗೌರವದಿಂದ ಕಾಣುವ ಬಿಜೆಪಿ ನಾಯಕರೇ ತಕ್ಕ ಪಾಠ ಕಲಿಸುವ ಸಮಯ ಬಂದಿದೆ.ಪೀರಪ್ಪ ಮ್ಯಾಗೇರಿ ಸಂಘಟನೆ ಮುಖಂಡ