ಬೈರಾಗಿ ಸಮುದಾಯ ಬುಡ್ಗಜಂಗಮ ಜಾತಿ ಅಲ್ಲ

| Published : May 18 2025, 01:46 AM IST

ಸಾರಾಂಶ

ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅಂಬ್ಲಿಕಲ್, ಉತ್ತನೂರು ಗ್ರಾಪಂ ವ್ಯಾಪ್ತಿಯ ಬನಹಳ್ಳಿ, ಹನುಮಂತ ನಗರ, ಅನಂತಪುರ ಮುಂತಾದ ೧೦-೧೫ ಹಳ್ಳಿಗಳಲ್ಲಿ ಹಿಂದುಳಿದ ವರ್ಗದ ಬೈರಾಗಿ ಜನಾಂಗದವರು ತಮ್ಮ ಜಾತಿಯನ್ನು ಮರೆಮಾಚಿ, ಬುಡ್ಗಜಂಗಮ ಜಾತಿಯೆಂದು ಪರಿಶಿಷ್ಠ ಜಾತಿಗೆ ಸೇರ್ಪಡೆ ಮಾಡಿಸುತ್ತಿದ್ದಾರೆ ಎಂಬ ಆರೋಪ.

ಕನ್ನಡಪ್ರಭ ವಾರ್ತೆ ಕೋಲಾರಪರಿಶಿಷ್ಟ ಜಾತಿಗಳ ಸಮೀಕ್ಷೆ ವೇಳೆ ಬೈರಾಗಿ ಸಮುದಾಯದವರು ಬುಡ್ಗಜಂಗಮ ಜಾತಿ ಎಂದು ನಮೂದಿಸುತ್ತಿರುವುದನ್ನು ತಿರಸ್ಕರಿಸಿ ಪರಿಶಿಷ್ಟ ಜಾತಿಗಳ ಪ್ರಮಾಣಿಕ ಸಮೀಕ್ಷೆ ನಡೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಸಂಯೋಜಕ) ರಾಜಾಧ್ಯಕ್ಷ ಡಾ.ಆರ್.ಅಶ್ವತ್ಥ್ ಅಂತ್ಯಜ ಆಗ್ರಹಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅಂಬ್ಲಿಕಲ್, ಉತ್ತನೂರು ಗ್ರಾಪಂ ವ್ಯಾಪ್ತಿಯ ಬನಹಳ್ಳಿ, ಹನುಮಂತ ನಗರ, ಅನಂತಪುರ ಮುಂತಾದ ೧೦-೧೫ ಹಳ್ಳಿಗಳಲ್ಲಿ ಹಿಂದುಳಿದ ವರ್ಗದ ಬೈರಾಗಿ ಜನಾಂಗದವರು ತಮ್ಮ ಜಾತಿಯನ್ನು ಮರೆಮಾಚಿ, ಬುಡ್ಗಜಂಗಮ ಜಾತಿಯೆಂದು ಪರಿಶಿಷ್ಠ ಜಾತಿಗೆ ಸೇರ್ಪಡೆ ಮಾಡಿಸುವ ಮೂಲಕ ಮೀಸಲಾತಿ ಕಬಳಿಸುವ ಹುನ್ನಾರ ನಡೆದಿದೆ ಎಂದರು.

ಪರಿಶಿಷ್ಟ ಜಾತಿಗಳಿಗೆ ಅನ್ಯಾಯಇದರಿಂದಾಗಿ ಪರಿಶಿಷ್ಟ ಜಾತಿಯಲ್ಲಿನ ೧೦೧ ಉಪಜಾತಿಗಳಿಗೆ ಅನ್ಯಾಯವಾಗಲಿದೆ, ಈಗಾಗಲೇ ಬೈರಾಗಿ ಸಮುದಾಯ ಬುಡ್ಗಜಂಗಮವೆಂದು ನಕಲಿ ಜಾತಿ ಪ್ರಮಾಣ ಪಡೆದು ಮೀಸಲಾತಿ ಸೌಲಭ್ಯ ಪಡೆದಿರುವ ವಿವಾದವು ಸುಪ್ರೀಂ ಕೋರ್ಟಿನ ಅಂಗಳದಲ್ಲಿದೆ. ಈಗಾಗಲೇ ಈ ಸಂಬಂಧವಾಗಿ ಕೋಲಾರ ಜಿಲ್ಲೆಯಲ್ಲಿ ಬುಡ್ಗಜಂಗಮ ಜಾತಿಯವರು ಇಲ್ಲವೆಂದು ನ್ಯಾಯಾಲಯವೇ ಹೇಳಿದೆ ಎಂದರು.

ಸಮೀಕ್ಷೆದಾರರು ಕೆಲವರು ದಿಕ್ಕು ತಪ್ಪಿಸಿ ಬುಡ್ಗಜಂಗಮ ಎಂದು ಬೈರಾಗಿಗಳು ನೋಂದಾಯಿಸಿರುವ ವಿರುದ್ದ ಕ್ರಮ ಜರುಗಿಸಬೇಕೆಂದು ಈಗಾಗಲೇ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು,

ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಇಂತಹ ಅಕ್ರಮಗಳಿಗೆ ಅವಕಾಶವಿಲ್ಲ. ನಿಯಮನುಸಾರ ಸಮೀಕ್ಷೆ ನಡೆಸಲಾಗುವುದು ಒಂದು ವೇಳೆ ಏನಾದರೂ ಅಕ್ರಮಗಳು ನಡೆದಿರುವುದು ಖಚಿತವಾದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಸಂಯೋಜಕ ಅಮರೇಶ ಇದ್ದರು.