ಸಾರಾಂಶ
ಬೆಳಗ್ಗಿನಿಂದಲೇ ವರ್ತಕರು, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದ್ದರು.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಮಲೆನಾಡಿನ ರೈತರು ಹಾಗೂ ನಾಗರೀಕರ ಸಮಸ್ಯೆಗಳಿಗೆ ಧ್ವನಿಯಾಗಲು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶನಿವಾರ ಕರೆ ನೀಡಿದ್ದ ಶೃಂಗೇರಿ ಕ್ಷೇತ್ರ ಬಂದ್‌ಗೆ ಪಟ್ಟಣದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಬಂದ್ ಯಶಸ್ವಿಯಾಯಿತು. ಬಂದ್ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗಿನಿಂದಲೇ ವರ್ತಕರು, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಬೆಳಿಗ್ಗೆ ಎಂಟು ಗಂಟೆ ಬಳಿಕ ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರು, ರೈತರು, ಸಾರ್ವಜನಿಕರು ಒಗ್ಗೂಡಿ ವಾಹನಗಳಲ್ಲಿ ಪ್ರತಿಭಟನಾ ಸಭೆ ನಡೆಯುವ ಕೊಪ್ಪಕ್ಕೆ ತೆರಳಿದರು. ಸಮೀಪದ ಖಾಂಡ್ಯ ಹೋಬಳಿಯಲ್ಲೂ ಬಂದ್ ಕರೆಗೆ ಬೆಳೆಗಾರರು, ಸಾರ್ವಜನಿಕರು, ವ್ಯಾಪಾರಸ್ಥರು ಬೆಂಬಲ ಸೂಚಿಸಿದ್ದು, ಖಾಂಡ್ಯ ಹೋಬಳಿಯ ಎಲ್ಲಾ ಅಂಗಡಿ ಮುಂಗಟ್ಟು ಸಂಪೂರ್ಣವಾಗಿ ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಸಾರ್ವಜನಿಕರು ಸಹ ಖಾಂಡ್ಯ ನಾಗರಿಕ ಹಿತರಕ್ಷಣಾ ವೇದಿಕೆ ಸಹಯೋಗದಲ್ಲಿ ಕೊಪ್ಪಕ್ಕೆ ತೆರಳಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಹಲವು ಶಾಲಾ ಕಾಲೇಜುಗಳಿಗೆ ಶಾಲಾ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದ್ದು, ಕೆಲವು ಶಾಲಾ ಕಾಲೇಜು ತೆರೆದಿದ್ದರೂ ಸಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಖಾಸಗಿ ಬಸ್ ಹಾಗೂ ಆಟೋಗಳ ಸಂಚಾರ ಸಂಪೂರ್ಣವಾಗಿ ನಿಲುಗಡೆ ಯಾಗಿದ್ದು, ಹೊರ ಊರುಗಳಿಗೆ ತೆರಳಲು ಹಲವರಿಗೆ ಸಾಧ್ಯವಾಗಿಲ್ಲ. ಸರ್ಕಾರಿ ಬಸ್ ಸೇವೆ ಎಂದಿನಂತೆ ಇದ್ದರೂ ಸಹ ಪ್ರಯಾಣಿಕರು ಇರಲಿಲ್ಲ. ಗ್ರಾಮೀಣ ಭಾಗವಾದ ರಂಭಾಪುರಿ ಪೀಠ, ಮಸೀದಿಕೆರೆ, ರೇಣುಕನಗರ, ಕಡ್ಲೇಮಕ್ಕಿ, ಮಾಗುಂಡಿ, ಬನ್ನೂರು, ಮೇಲ್ಪಾಲ್, ಸೀಗೋಡು ಮುಂತಾದ ಕಡೆಗಳಲ್ಲಿಯೂ ಸಹ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಪಟ್ಟಣದಲ್ಲಿ ಮೆಡಿಕಲ್, ಪೆಟ್ರೋಲ್ ಪಂಪ್ ತೆರೆದಿದ್ದರೂ ಸಹ ಗ್ರಾಹಕರ ಸಂಖ್ಯೆ ಕ್ಷೀಣವಾಗಿತ್ತು. ಕೆಲವು ಬ್ಯಾಂಕುಗಳು ಮಾತ್ರ ಕಾರ್ಯನಿರ್ವಹಿಸಿದ್ದು ಇಲ್ಲಿಯೂ ಸಹ ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು.೧೭ಬಿಹೆಚ್‌ಆರ್ ೧:
ಬಾಳೆಹೊನ್ನೂರಿನಲ್ಲಿ ನಡೆದ ಶೃಂಗೇರಿ ಕ್ಷೇತ್ರ ಬಂದ್ ಹಿನ್ನೆಲೆಯಲ್ಲಿ ಜನ, ವಾಹನ ಸಂಚಾರವಿಲ್ಲದೆ ಭಣಗುಡುತ್ತಿರುವ ಮುಖ್ಯರಸ್ತೆ.೧೭ಬಿಹೆಚ್‌ಆರ್ ೨: ಕ್ಷೇತ್ರ ಬಂದ್ ಹಿನ್ನೆಲೆಯಲ್ಲಿ ಬಸ್, ಪ್ರಯಾಣಿಕರಿಲ್ಲ ಖಾಲಿಯಾಗಿರುವ ಬಾಳೆಹೊನ್ನೂರಿನ ಬಸ್ ನಿಲ್ದಾಣ.೧೭ಬಿಹೆಚ್‌ಆರ್ ೩: ಮಲೆನಾಡು ರೈತ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದ ಶೃಂಗೇರಿ ಕ್ಷೇತ್ರ ಬಂದ್‌ಗೆ ತೆರಳಿದ ಬಾಳೆಹೊನ್ನೂರು ಸಮೀಪದ ಖಾಂಡ್ಯ ನಾಗರೀಕ ರಕ್ಷಣಾ ವೇದಿಕೆ ಸದಸ್ಯರು, ರೈತರು.