ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ನಾಲ್ಕು ಗೋಡೆಗಳ ನಡುವೆ ಕಲಿಯುವ ಪಾಠ ಮಾತ್ರವೇ ಶಿಕ್ಷಣವಲ್ಲ. ಸುತ್ತಲಿನ ಪರಿಸರಕ್ಕೆ, ಸಮಾಜಕ್ಕೆ ಸ್ಪಂದಿಸುತ್ತಾ, ಸಮಾಜಮುಖಿಯಾಗಿ ಬದುಕುವುದನ್ನು ಕಲಿಸುವುದೇ ಶಿಕ್ಷಣದ ಮೂಲ ಉದ್ದೇಶ ಎಂದು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.ಅವರು ಗುರುವಾರ ಮಲ್ಪೆಯ ಸರ್ಕಾರಿ ಪಪೂ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ), ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಪಪೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.ಎನ್‌ಎಸ್‌ಎಸ್‌ನಂತಹ ಘಟಕಗಳು ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು ರೂಪಿಸಿಕೊಳ್ಳಲು ಪ್ರೇರೇಪಿಸುತ್ತವೆ. ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.ಮುಖ್ಯ ಅತಿಥಿಗಳಾದ ಮಲ್ಪೆ ಸ.ಪ.ಪೂ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಗೋಪಾಲ ಸಿ. ಬಂಗೇರ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲ ವರ್ಗೀಸ್ ಪಿ., ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಸಂಧ್ಯಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ ಸಾಲ್ಯಾನ್, ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನ ಉಪಾಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಸದಸ್ಯೆ ಸುಮಾ ಆನಂದ ನಾಯ್ಕ, ಕಾಲೇಜಿನ ಶಿಕ್ಷಣ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ಕೆ. ಕೋಟ್ಯಾನ್, ಖಜಾಂಚಿ ಶೇಖರ್ ಕೋಟ್ಯಾನ್, ಬಾಲಕಿಯರ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ, ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಮಲ್ಪೆ ಶಾಖೆಯ ಪ್ರಬಂಧಕ ನವೀನ್ ಕೆ., ಮಹಾಪ್ರಬಂಧಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.ಎನ್‌ಎಸ್‌ಎಸ್ ಶಿಬಿರಾಧಿಕಾರಿ ಭವ್ಯಾ ನಾಗರಾಜ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕಿ ಡಾ. ಸುಮಾ ಎಸ್. ನಿರೂಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಗಂಗಾಧರ ವಂದಿಸಿದರು.