ಜನಪದದ ಸೊಗಡು ಅಸಾಧಾರಣ: ಸಾಹಿತಿ ಸುಬ್ರಾಯ ಮತ್ತಿಹಳ್ಳಿ

| Published : Mar 18 2025, 12:32 AM IST

ಸಾರಾಂಶ

ಜನಪದದ ಸೊಗಡು ಅಸಾಧಾರಣವಾದದ್ದು, ಜ್ಞಾನವನ್ನು ನೀಡುವ ವಿಶಿಷ್ಟ ಪ್ರಕಾರ

ಸಿದ್ದಾಪುರ: ಜನಪದದ ಸೊಗಡು ಅಸಾಧಾರಣವಾದದ್ದು, ಜ್ಞಾನವನ್ನು ನೀಡುವ ವಿಶಿಷ್ಟ ಪ್ರಕಾರ ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಹೇಳಿದರು.

ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಕರ್ನಾಟಕ ಜಾನಪದ ಪರಿಷತ್‌ನ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾನಪದ ಸದಾ ಪ್ರವಹಿಸುವಂಥದ್ದು. ಜಲತತ್ವ ಮತ್ತು ಭೂತತ್ವ ಇದರ ಹಿಂದೆ ಇದೆ ಎಂದು ಹೇಳಿದರು.ಜಾನಪದ ಕಲಾವಿದೆ ಲೀಲಾವತಿ ಶೇಷಗಿರಿ ಕೊಂಡ್ಲಿ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಜಾನಪದ ಹಾಡುಗಳನ್ನು ಹಾಡಿದರು.

ಅಧ್ಯಕ್ಷತೆವಹಿಸಿ, ಪದಗ್ರಹಣ ನೆರವೇರಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ವೆಂಕಟೇಶ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತಿನಷ್ಟೇ ಶ್ರೇಷ್ಠತೆಯನ್ನು ಹೊಂದಿರುವ ಕರ್ನಾಟಕ ಜಾನಪದ ಪರಿಷತ್ತಿಗೆ ಸಂಘಟಕರ ಕೊರತೆ ಇದೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಂಘಟನೆ ಮಾಡಲಾಗುತ್ತಿದೆ. ಮುಖ್ಯವಾಗಿ ಸಿದ್ದಾಪುರ ತಾಲೂಕು ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಲೆಯ ಹಾಗೂ ಕಲಾವಿದರ ತವರೂರು. ಇದನ್ನು ಉಳಿಸಿಕೊಳ್ಳಬೇಕಾಗಿದೆ. ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸುವ ಜತೆಗೆ ಮುಂದಿನ ಜನಾಂಗಕ್ಕೆ ನಮ್ಮ ಜಾನಪದದ ಮಹತ್ವನ್ನು ತಿಳಿಸಿ, ಹಸ್ತಾಂತರಿಸುವ ಕಾರ್ಯ ಆಗಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಜಾನಪದದ ಕುರಿತು ಮಾಹಿತಿ ಸಿಗುವಂತಾಗಬೇಕು ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ, ತಾಲೂಕು ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ ಕೋಲಸಿರ್ಸಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಮಾತನಾಡಿದರು. ಜಾನಪದ ಗಾಯಕ ಗೋಪಾಲ ಕಾನಳ್ಳಿ ಸಂಗಡಿಗರು ಜಾನಪದ ಹಾಡುಗಳನ್ನು ಹಾಡಿದರು. ರಂಜಿಸಿದರು.

ತಾಲೂಕು ಕರ್ನಾಟಕ ಜಾನಪದ ಪರಿಷತ್‌ ಘಟಕದ ಸದಸ್ಯೆ ಪ್ರಜ್ಞಾ ಹೆಗಡೆ ಹಿತ್ಲಕೈ ಪ್ರಾರ್ಥಿಸಿದರು. ಸದಸ್ಯ ಜಯರಾಮ ಭಟ್ಟ ಗುಂಜಗೋಡ ಸ್ವಾಗತಿಸಿದರು. ಅಧ್ಯಕ್ಷ ಎಂ.ಕೆ. ನಾಯ್ಕ ಹೊಸಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಸ್ಲಾಂ ಶೇಖ್ ವಂದಿಸಿದರು. ಚಂದ್ರಶೇಖರ ಕುಂಬ್ರಿಗದ್ದೆ ಕಾರ್ಯಕ್ರಮ ನಿರ್ವಹಿಸಿದರು.