ಸಾರಾಂಶ
ಯುಗಾದಿಯ ದಿನ ಮಂಗಳವಾರ ಐತಿಹಾಸಿಕ ದೊಡ್ಡಬಸವೇಶ್ವರ ಸ್ವಾಮಿ ಮತ್ತು ಶಿವಲಿಂಗಕ್ಕೆ ಸೂರ್ಯನ ರಶ್ಮಿಗಳು ಸ್ಪರ್ಶಿಸುವ ಸುಂದರ ಕ್ಷಣಗಳನ್ನು ಭಕ್ತರು ಕಣ್ತುಂಬಿಕೊಂಡರು.
ಕುರುಗೋಡು: ಯುಗಾದಿಯ ದಿನ ಮಂಗಳವಾರ ಐತಿಹಾಸಿಕ ದೊಡ್ಡಬಸವೇಶ್ವರ ಸ್ವಾಮಿ ಮತ್ತು ಶಿವಲಿಂಗಕ್ಕೆ ಸೂರ್ಯನ ರಶ್ಮಿಗಳು ಸ್ಪರ್ಶಿಸುವ ಸುಂದರ ಕ್ಷಣಗಳನ್ನು ಭಕ್ತರು ಕಣ್ತುಂಬಿಕೊಂಡರು.
ಪೂರ್ವಾಭಿಮುಖವಾಗಿರುವ ಹಂಪಿ ಶ್ರೀವಿರೂಪಾಕ್ಷನಿಗೆ ಯುಗಾದಿಯ ದಿನ ಬೆಳಿಗ್ಗೆ ಸೂರ್ಯನ ಕಿರಣಗಳು ಸ್ಪರ್ಶಿಸುತ್ತವೆ. ಪಶ್ಚಿಮಾಭಿಮುಖವಾಗಿರುವ ಕುರುಗೋಡಿನ ಐತಿಹಾಸಿಕ ಶ್ರೀದೊಡ್ಡಬಸವೇಶ್ವರನಿಗೆ ಅದೇ ದಿನ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಕಿರಣಗಳು ಸ್ಪರ್ಶಿಸಿ ವಿಸ್ಮಯ ಮೂಡಿಸಿತು.ಸಂಜೆ ೫.೩೫ರಿಂದ ದೇವಸ್ಥಾನದ ಗರ್ಭಗುಡಿ ಪ್ರದೇಶಿಸಿದ ಸೂರ್ಯನ ಕಿರಣಗಳು ಹಂತಹಂತವಾಗಿ ಶಿವಲಿಂಗ ಮತ್ತು ದೊಡ್ಡಬಸವೇಶ್ವರ ಸ್ವಾಮಿಯ ಹಣೆಯ ಭಾಗದವರೆಗೆ ಪ್ರವೇಶಿಸಿ ೬.೧೦ಕ್ಕೆ ಕಿರಣ ಸ್ಪರ್ಶ ಪ್ರಕ್ರಿಯೆ ಪೂರ್ಣಗೊಂಡಿತು.
ಸೃಷ್ಟಿಯ ಈ ಅಪೂರ್ಣ ಕ್ಷಣದ ಸೊಬಗನ್ನು ಕಣ್ತುಂಬಿಕೊಳ್ಳಲು ದೇವಸ್ಥಾನದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಅಪೂರ್ವದೃಶ್ಯದ ಸೊಬಗನ್ನು ಕಂಡು ಪುಳಕಿತರಾದ ಭಕ್ತರು ಸ್ವಾಮಿಗೆ ಜಯಕಾರ ಕೂಗಿ ಭಕ್ತಿ ಸಮರ್ಪಿಸಿದರು.ಈ ಸುಂದರ ದೃಶ್ಯವನ್ನು ಕೆಲವು ಭಕ್ತರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಮತ್ತು ವೀಡಿಯೋ ಚಿತ್ರೀಕರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂತು.
ಪಂಚಾಗ ಪಠಣ:ಇದೇ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ವಾರ್ಷಿಕ ಪಂಚಾಂಗ ಪಠಣ ಕಾರ್ಯಕ್ರಮ ಜರುಗಿತು. ವೆಂಕಟೇಶ ಜೋಷಿ ನೂತನ ಪಂಚಾಗ ಪಠಣದ ಜತೆಗೆ ವಾರ್ಷಿಕ ರಾಶಿ ಭವಿಷ್ಯ ತಿಳಿಸಿದರು.