ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಶಿಷ್ಟವಾದ ‘ಕುಂದಾಪುರ ಕನ್ನಡ’ದ ಕಲರವ, ನೆಲದ ಕಲೆ, ಸಂಸ್ಕೃತಿಯ ಪ್ರದರ್ಶನ, ಬಾಯಲ್ಲಿ ನೀರೂರಿಸುವ ತಿಂಡಿ ತಿನಿಸುಗಳು, ಎಲ್ಲೆಲ್ಲೂ ಸಡಗರ, ಸಂಭ್ರಮದ ವಾತಾವರಣ ನಗರದ ಅರಮನೆ ಮೈದಾನದಲ್ಲಿ ಶನಿವಾರದಿಂದ ಆರಂಭವಾದ ‘ಕುಂದಾಪ್ರ ಕನ್ನಡ’ ಮೇಳದಲ್ಲಿ ಕಂಡು ಬಂದ ದೃಶ್ಯಾವಳಿಗಳು.ಬದುಕು ಕಟ್ಟಿಕೊಳ್ಳಲು ಹುಟ್ಟಿದೂರು ಬಿಟ್ಟು ಬಂದ ಜನ ಒಂದೆಡೆ ಸೇರಿ ವಿಶಿಷ್ಟ ಭಾಷೆ, ಸಂಸ್ಕೃತಿಯ ಕುಂದಾಪ್ರ ತೇರನ್ನು ಎಳೆಯುತ್ತಿದ್ದಾರೆ. ಅರಮನೆ ಮೈದಾನದ ವೈಟ್ ಪೆಟಲ್‌ನಲ್ಲಿ ಎರಡು ದಿನಗಳ ‘ಕುಂದಾಪ್ರ ಕನ್ನಡ ಹಬ್ಬ’ ಉದ್ಘಾಟನೆಗೊಂಡಿತು.
ಕುಂದಾಪ್ರ ಕನ್ನಡಿಗರು ‘ನಮ್ ಕುಂದಾಪ್ರ ಭಾಷಿ ಚೆಂದ, ಬದ್ಕ್ ಚೆಂದ, ಕುಂದಾಪ್ರ ಭಾಷಿ ಕೆಮಿಗೆ ಬಿದ್ರೆ ಕೆಮಿ ಚುಳ್ ಅನ್ನತ್’ ಎನ್ನುತ್ತ ಲುಘುಬಗೆಯಿಂದ ಓಡಾಡುವ, ಆಹಾರ ಸವಿಯುವ, ವಹಿಸಿಕೊಂಡ ಜವಾಬ್ದಾರಿ ನಿಭಾಯಿಸುವ ಸಂಭ್ರಮದಲ್ಲಿದ್ದರು.ಮಧ್ಯಾಹ್ನ 2ರಿಂದಲೇ ಕಾರ್ಯಕ್ರಮದ ಸೊಬಗು ಕಳೆಗಟ್ಟಿತ್ತು. ರಾತ್ರಿ 11ರವರೆಗೆ ಜನ ಕಿಕ್ಕಿರಿದು ಸೇರಿದ್ದರು. ಪುರುಷರು ಪಂಚೆ, ಶರ್ಟು, ಮಹಿಳೆಯರು ಸೀರೆಯುಟ್ಟ, ಕೈಯಲ್ಲಿ ಕಳಸ ಹಿಡಿದು ಅರಮನೆ ಮೈದಾನದಲ್ಲಿ ನೆರೆದಿದ್ದರು. ಯಕ್ಷಗಾನ, ಹುಲಿವೇಷ ಸೇರಿ ಇತರೆ ಸಂಸ್ಕೃತಿ ಹಾಗೂ ಕಲೆಯನ್ನು ಬಿಂಬಿಸುವ ವೇಷಧಾರಿಗಳ ಮೆರವಣಿಗೆ ಆಕರ್ಷಿಸಿತು.
ಕುಂದಾಪುರ ಕನ್ನಡ ಗೀತೆಕುಂದಾಪುರ ಸಂಸ್ಕೃತಿಯನ್ನು ವಿಶೇಷ ರೀತಿಯಲ್ಲಿ ಬಿತ್ತರಿಸುವ ಕಾರ್ಯಕ್ರಮಗಳು ನಡೆದವು. ನಾಕ್ ಘನಾ ಸುರ್ಲ್ ಜಾನಪದ, ರಂಗ, ಕುಂದಾಪುರ ಕನ್ನಡ ಗೀತೆಗಳನ್ನು ಉಡುಪಿಯ ಜರ್ನಿ ಥೇಟರ್ ಗ್ರೂಪ್ ಪ್ರಸ್ತುತ ಪಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಏಕಕಾಲದಲ್ಲಿ ಎರಡು ರಂಗಸ್ಥಳಗಳಲ್ಲಿ ಮಂದಾರ್ತಿ ಜೋಡಾಟ ಯಕ್ಷಗಾನವನ್ನು ಕರಾವಳಿಯ ಖ್ಯಾತ ಕಲಾವಿದರು ಪ್ರಸ್ತುತ ಪಡಿಸಿದರು.
ಆಹಾರೋತ್ಸವಕುಂದಾಪುರದ ವಿಶೇಷ ಕರಾವಳಿ ಶೈಲಿಯ ಖಾದ್ಯಮೇಳ ಕೈಬೀಸಿ ಕರೆಯುತ್ತಿದೆ. ಹೊಟ್ಟಿ ಕಂಡದ್ದ್ ನಾವೇ ಸೈ ಎನ್ನುವಂತೆ ಕಡಬು, ನೀರ್ ದೋಸೆ, ಹಲಸಿನ ಗಟ್ಟಿ, ಪುಂಡಿ, ಕಾಯಿ ಹೊಳಿಗೆ, ಗೊಳಿಬಜೆ, ವಡೆ, ರಾಗಿ ಬಾಯಾರ, ಎಳ್ಳು ಬಾಯಾರ ಸೇರಿದಂತೆ ಇತರೆ ಖಾದ್ಯಗಳು ಆಹಾರ ಮೇಳದಲ್ಲಿವೆ. ಇನ್ನೂ ಕಡಲೂರಿನ ವಸ್ತು, ಒಡವೆ, ವಸ್ತ್ರಪ್ರದರ್ಶನ ಮತ್ತು ಮಾರಾಟದ ‘ಕುಂದಾಪ್ರ ಸಂತಿ’ ಆಕರ್ಷಿಸುತ್ತಿದೆ.ಇಂದು ರಾಜ್ ಶೆಟ್ಟಿ, ಗಣೇಶ್
ಕುಂದಾಪುರ ಕನ್ನಡ ಹಬ್ಬದ ಭಾನುವಾರದ ಕಾರ್ಯಕ್ರಮಕ್ಕೆ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್, ನಟ-ನಿರ್ಮಾಪಕ ಪ್ರಮೋದ್ ಶೆಟ್ಟಿ ಆಗಮಿಸಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಬರುವ ನಿರೀಕ್ಷೆ ಇದೆ. ಅಲ್ಲದೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಇದೇ ಮೊದಲು ಸಂಗೀತ ಸಂಜೆ ಕಾರ್ಯಕ್ರಮ ನೀಡುತ್ತಿದ್ದಾರೆ.ಇಂದೇನು ಕಾರ್ಯಕ್ರಮ ?ಬೆ.10 ಬಯಲಾಟ- ಗ್ರಾಮೀಣ ಉತ್ಸವ
ಬೆ.10 ತಾರೆಯರ ಜೊತೆ ಮಾತುಕತೆ, ಕವಿತೆ.ಬೆ.11 ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ʼಡಾನ್ಸ್ ಕುಂದಾಪ್ರ ಡಾನ್ಸ್ʼ
ಬೆ.11.15 ಕುಂದಾಪುರ ಭಾಷೆ ಬದುಕು ಬರಹ ಕುರಿತ ನುಡಿಚಾವಡಿ.ಮ.12 ಮನು ಹಂದಾಡಿ ಅವರಿಂದ ʼಹಂದಾಡ್ತಾ ನೆಗ್ಯಾಡಿʼ ಹಾಸ್ಯ ಕಾರ್ಯಕ್ರಮ.
ಮ.1.30 ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ ʼಪೆಟ್ ಒಂದೇ, ಸ್ವರ ಬೇರೆʼಮ.2.30 ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ ʼಮಂದಾರ್ತಿ ಮಾದೇವಿʼ
ಸಂ.4.30 ರಥೋತ್ಸವರಾ.7.30 ʼರವಿ ಬಸ್ರೂರ್ ನೈಟ್ಸ್ʼ ವಿಶೇಷ ಸಂಗೀತ ಸಂಜೆ.