ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಚಿವ ಕೆ.ಎನ್.ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ವಿಚಾರವನ್ನು ಗೃಹ ಸಚಿವರು, ಪೊಲೀಸರು ನೋಡಿಕೊಳ್ಳುತ್ತಾರೆ. ಅವರು ಪ್ರಕರಣವನ್ನು ಬಯಲಿಗೆಳೆದೇ ಎಳೆಯುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರಾಪ್ ವಿಚಾರದಲ್ಲಿ ದೂರನ್ನು ಯಾಕೆ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಯಾವುದೆ ಒತ್ತಡ ಇಲ್ಲ. ದೂರು ಕೊಡೋದು ಅವರಿಗೆ ಬಿಟ್ಟ ವಿಚಾರ. ಯಾಕೆ ಏನು ಅನ್ನೋದನ್ನು ರಾಜಣ್ಣರಿಗೆ ಕೇಳಬೇಕು ಎಂದರು.
ಸಂಪುಟ ಪುನರ್ ರಚನೆಗೆ ಸಿಎಂ ನಿರಾಸಕ್ತಿ ವಿಚಾರದ ಕುರಿತು ಮಾತನಾಡಿ, ಅದನ್ನು ಡಿಸಿಎಂ, ಸಿಎಂಗೆ ಕೇಳಬೇಕು. ಯಾರು ಆಸಕ್ತಿ ಹೊಂದಿದ್ದಾರೋ, ಯಾರು ಹೊಂದಿಲ್ಲವೊ ಅವರನ್ನೆ ಕೇಳಬೇಕು ಎಂದು ಹೇಳಿದರು.ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರದ ಕುರಿತು ಮಾತನಾಡಿದ ಅವರು, ಇದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ನಾವು ಮಾತನಾಡೋದರಲ್ಲಿ ಅರ್ಥವಿಲ್ಲ. ಎಲ್ಲರೂ ದೆಹಲಿಗೆ ಹೋಗ್ತಾರೆ, ಪಕ್ಷದ ವರಿಷ್ಠರನ್ನ ಭೇಟಿ ಮಾಡಲು ಹೋಗ್ತಾರೆ. ಹೈಕಮಾಂಡ್ ಭೇಟಿ ಮಾಡಿ ಮಾತನೋಡೋದು, ಹೇಳೋದು ಕೇಳೋದು, ಸಲಹೆ ಪಡೆಯೋದು ಇರುತ್ತೆ ಎಂದು ತಿಳಿಸಿದರು.
ರಂಜಾನ್ ಹಬ್ಬದ ಹಿನ್ನೆಲೆ ಮುಸ್ಲಿಂರಿಗೆ ಪ್ರಧಾನಿ ಮೋದಿ ಕಿಟ್ ವಿತರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿಯವರು ಕಿಟ್ ಕೊಟ್ಟಿರೋದು ಒಳ್ಳೆಯದು ಎದುಂ ಸ್ವಾಗತಿಸಿ ಠಕ್ಕರ್ ನೀಡಿದರು. ಮೋದಿಯವರು ಕಿಟ್ ಕೊಟ್ಟಿದ್ದಾರೆ. ಅದೇ ರೀತಿ ನಮ್ಮ ದೇಶದ ಪರಂಪರೆ, ಇತಿಹಾಸ, ಸಹೋದರತ್ವ ತತ್ವದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ್, ಬುದ್ಧರು ನಾವೆಲ್ಲ ಒಟ್ಟಿಗೆ ಇದ್ದೇವೆ. ಅದು ಈಗ ಮೋದಿಯವರಿಗೆ ಅರ್ಥ ಆಗಿದ್ದು ಸಂತೋಷ. ಇದೇ ರೀತಿ ಮೋದಿಯವರು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಲಿ ಅಂತ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು.ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂರು ಕಪ್ಪು ಪಟ್ಟಿ ಧರಣಿ ಹಬ್ಬ ಆಚರಣೆ ವಿಚಾರದ ಬಗ್ಗೆ ಮಾತನಾಡಿ, ಅದಕ್ಕೆಲ್ಲ ಕಾನೂನಿದೆ, ಪಾರ್ಲಿಮೆಂಟ್ ಇದೆ. ಕಾನೂನು ಬಾಹಿರ, ಸಂವಿಧಾನ ಬಾಹಿರವಾಗಿ ಏನಾದರೂ ಕ್ರಮ ಕೈಗೊಂಡರೆ ಬೇರೆ ರೀತಿ ಪರಿಣಾಮ ಎದುರಿಸಬೇಕಾಗುತ್ತದೆ. ಜನ ಶಕ್ತಿ ಬಹಳ ದೊಡ್ಡದು. ಒಂದುಕಡೆ ರಂಜಾನ್ ಹಬ್ಬದಲ್ಲಿ ಮುಸ್ಲಿಂರಿಗೆ ಕಿಟ್ ಕೊಡ್ತೀರಿ. ಇನ್ನೊಂದು ಕಡೆ ವಕ್ಫ್ ಕಾಯ್ದೆ ತಿದ್ದುಪಡಿ ಜಾರಿಗೆ ತಂದರೆ ಎರಡು ಸರಿದೂಗುವುದಿಲ್ಲ. ಅದಕ್ಕೆ ಕಾನೂನು ಪ್ರಕಾರವಾಗಿ, ಸಂವಿಧಾನ ಪ್ರಕಾರವಾಗಿ ನಡೆದುಕೊಳ್ಳುವುದು ಜವಾಬ್ದಾರಿ ಎಲ್ಲರದ್ದೂ ಇದೆ. ಹಿಂದೂ ಮುಸ್ಲಿಂರಿಬ್ಬರ ಜವಾಬ್ದಾರಿ ಇದೆ. ಸಂವಿಧಾನ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ನಡೆದುಕೊಳ್ಳಲಿ ಎಂದು ಎಂ.ಬಿ.ಪಾಟೀಲ ಒತ್ತಾಯಿಸಿದರು.-----------
ಬಾಕ್ಸ್ಪೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಕೇಂದ್ರ ಸ್ಪಂದನೆ
ವಿಜಯಪುರ: ನೆರೆಯ ಜಿಲ್ಲೆ, ರಾಜ್ಯಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ದಟ್ಟಣೆ ತಪ್ಪಿಸಲು ಪೆರಿಪೆರಲ್ ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಜಯಪುರ ನೆರೆಯ ಬೆಳಗಾವಿ, ಕಲಬುರಗಿ, ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ, ಗೋವಾ ಮತ್ತು ಇತರ ಪ್ರಮುಖ ನಗರಗಳ ಸಂಪರ್ಕ ಸೇತುವೆಯಾಗಿದೆ. ಭಾರೀ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವಾಹನಗಳಿಂದ ಸಂಚಾರ ಸಮಸ್ಯೆ ಹಾಗೂ ಸಮಯ ವ್ಯರ್ಥವಾಗುತ್ತಿದೆ.ಇದನ್ನು ನಿವಾರಿಸಲು ಮತ್ತು ನಗರಾಭಿವೃದ್ಧಿಗೆ ಬಲ ನೀಡಲು ಪೆರಿಫೆರಲ್ ರಿಂಗ್ ರಸ್ತೆ ಅನಿವಾರ್ಯವಾಗಿದೆ. ಈ ಅಗತ್ಯವನ್ನು ಮನಗಂಡು, ಜನವರಿ 2025ರಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಗಣಿಸಲಾಗುವುದು ಎಂದು ಉತ್ತರಿಸಿದ್ದಾರೆ ಎಂದಿದ್ದಾರೆ.
ಅಲ್ಲದೆ, ಮಂಡ್ಯ, ಹಾಸನ ಸೇರಿದಂತೆ ಹಲವು ನಗರಗಳು ರಿಂಗ್ ರಸ್ತೆ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರದ ಮುಂದಿಟ್ಟಿವೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜಿಲ್ಲೆಯ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಯೋಜಿತ ಪೆರಿಫೆರಲ್ ರಿಂಗ್ ರಸ್ತೆ ರಾಷ್ಟ್ರೀಯ ಹೆದ್ದಾರಿಗಳಾದ ಎನ್‌ಹೆಚ್-50, ಎನ್‌ಹೆಚ್-548ಬಿ, ಎನ್‌ಹೆಚ್-561ಎ, ಎನ್‌ಹೆಚ್-218 ಮತ್ತು ರಾಜ್ಯ ಹೆದ್ದಾರಿ ಎಸ್‌ಹೆಚ್-34 ಅನ್ನು ಪರಸ್ಪರ ಸಂಪರ್ಕಿಸಲಿವೆ. ಜಿಲ್ಲೆಯ ಅಭಿವೃದ್ಧಿಗೆ, ಆರ್ಥಿಕ ಬದಲಾವಣೆಗೆ ಪೆರಿಪೆರಲ್ ರಿಂಗ್ ರಸ್ತೆ ಯೋಜನೆಯು ಹೊಸ ಹೆಜ್ಜೆಯಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.