ಭಗವದ್ಗೀತೆ ಉಳಿದಿರುವುದು ಶಂಕರ ಭಗವತ್ಪಾದರಿಂದ: ಶ್ರೀದತ್ತ ವಿಜಯಾನಂದ ಸ್ವಾಮೀಜಿ

| Published : May 14 2024, 01:01 AM IST

ಭಗವದ್ಗೀತೆ ಉಳಿದಿರುವುದು ಶಂಕರ ಭಗವತ್ಪಾದರಿಂದ: ಶ್ರೀದತ್ತ ವಿಜಯಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ಹಿಂದೂ ಧರ್ಮ ಪುನರುತ್ಥಾನಗೊಳಿಸಿದರು. ಇಂದು ರಾಮಾನುಜರು ಅವತರಿಸಿದ ದಿನ ಕೂಡ, ಇಂತಹ ಪುಣ್ಯ ದಿನದಂದು ರಾಮಕೃಷ್ಣ - ಶಾರದಾದೇವಿನಗರ ಭಾಗದಲ್ಲಿ ವಿಪ್ರರು ಒಂದಾಗಿ ಸಮಸ್ತ ಹಿಂದೂಗಳನ್ನು ಒಗ್ಗೂಡಿಸಿ ಧರ್ಮದ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಭಗವದ್ಗೀತೆ ಬಗ್ಗೆ ದೇಶದಾದ್ಯಂತ ಅಪವ್ಯಾಖ್ಯಾನ ನಡೆಯುತ್ತಿದ್ದ ಸಂದರ್ಭದಲ್ಲಿ ಅವತರಿಸಿ ಭಗವದ್ಗೀತೆಯ ಸರಿಯಾದ ವಿವರವನ್ನು ನೀಡಿ, ಇಂದಿನ ಪೀಳಿಗೆವರೆಗೂ ಭಗವದ್ಗೀತೆಯನ್ನು ಉಳಿಸಿದ್ದು ಶಂಕರಾಚಾರ್ಯರು ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿ ತಿಳಿಸಿದರು.

ಶಂಕರ ಜಯಂತಿ ಅಂಗವಾಗಿ ರಾಮಕೃಷ್ಣ- ಶಾರದಾದೇವಿ ವಿಪ್ರ ವೃಂದವು ಆಯೋಜಿಸಿದ್ದ ಶಂಕರ ಮೂರ್ತಿಯ ಮೆರವಣಿಗೆಗೆ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ಹಿಂದೂ ಧರ್ಮ ಪುನರುತ್ಥಾನಗೊಳಿಸಿದರು. ಇಂದು ರಾಮಾನುಜರು ಅವತರಿಸಿದ ದಿನ ಕೂಡ, ಇಂತಹ ಪುಣ್ಯ ದಿನದಂದು ರಾಮಕೃಷ್ಣ - ಶಾರದಾದೇವಿನಗರ ಭಾಗದಲ್ಲಿ ವಿಪ್ರರು ಒಂದಾಗಿ ಸಮಸ್ತ ಹಿಂದೂಗಳನ್ನು ಒಗ್ಗೂಡಿಸಿ ಧರ್ಮದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಶಂಕರಾಚಾರ್ಯರ ಮೂರ್ತಿಯೊಂದಿಗೆ ಹರ ಹರ ಶಂಕರ ಜಯ ಜಯ ಶಂಕರ ಘೋಷಣೆಯೊಂದಿಗೆ ಮೆರವಣಿಗೆಯು ರಾಮಕೃಷ್ಣನಗರದ ಐ ಬ್ಲಾಕ್ ಮುಖ್ಯ ರಸ್ತೆಗಳಲ್ಲಿ ಸಾಗಿ, ಶಾರದಾದೇವಿನಗರದ ನಮೋ ಉದ್ಯಾನವನದಲ್ಲಿ ಅಂತ್ಯವಾಯಿತು.

ನಂತರ ವೇದವ್ಯಾಸ ಭಜನಾ ಮಂಡಳಿ, ಶಾರದಾದೇವಿ ಮಹಿಳಾ ಸಮಾಜ, ಶ್ರೀದೇವಿ ಮಹಿಳಾ ಸಮಾಜ ಸೇರಿದಂತೆ ಮಹಿಳಾ ಭಕ್ತರು ಶಂಕರರ ಸ್ತೋತ್ರಗಳ ಪಾರಾಯಣ, ಭಜನೆಗಳನ್ನು ಹಾಡಿದರು. ತದನಂತರ ಪ್ರಸಾದ ವಿನಿಯೋಗಿಸಲಾಯಿತು.

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಎಂಐಟಿ ಕಾಲೇಜಿನ ಮುಖ್ಯಸ್ಥ ಮುರಳಿ, ಸಮಾಜ ಸೇವಕ ಕೆ. ರಘುರಾಂ, ಸೂಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ರಾಮಕೃಷ್ಣ-ಶಾರದಾದೇವಿ ವಿಪ್ರ ವೃಂದದ ಅಧ್ಯಕ್ಷ ರಾಕೇಶ್ ಭಟ್, ಮುಖಂಡರಾದ ಗೋಪಾಲ್ ರಾವ್, ಬಿ.ಎಂ. ರಘು, ಶ್ರೀನಿವಾಸನ್, ಜಿ.ಆರ್. ಮೋಹನ್, ಶ್ರೀನಿವಾಸ್ ಪ್ರಸಾದ್, ಎನ್.ವಿ. ನಾಗೇಂದ್ರಬಾಬು, ವಿಜಯಾ ಮಂಜುನಾಥ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಎಚ್.ಜಿ. ರಾಜಮಣಿ, ರಮಾಬಾಯಿ, ರಾಧಾ ಮುತಾಲಿಕ್, ಪದ್ಮಾ, ಲಲಿತಾ, ತುಳಸಿ, ಕಲಾವತಿ, ಸುಮಾ ಮೊದಲಾದವರು ಇದ್ದರು.16 ರಿಂದ ಅಖಂಡ ಭಾಗವತ ಸಪ್ತಾಹ

ಮೈಸೂರು: ಶ್ರೀರಾಂಪುರದಲ್ಲಿರುವ ಉತ್ತರಾದಿ ಮಠದ ಶ್ರೀವೆಂಕಟೇಶ್ವರ ಧ್ಯಾನ ಕೇಂದ್ರದ ವಾರ್ಷಿಕೋತ್ಸವದ ಪ್ರಯುಕ್ತ ಮೇ16 ರಿಂದ 22 ರವರೆಗೆ ವಿದ್ವಾಂಸರಾದ ಪಂಡಿತ್ ಶ್ರೀಬಾದರಾಯಣಾಚಾರ್ಯರಿಂದ ಅಖಂಡ ಭಾಗವತ ಸಪ್ತಾಹವನ್ನು ಏರ್ಪಡಿಸಲಾಗಿದೆ.

ಮೇ 16ರ ಬೆಳಗ್ಗೆ 7.30ಕ್ಕೆ ಶಾಸ್ತ್ರೋಕ್ತವಾದ ಸಪ್ತಾಹ ಕ್ರಮದಲ್ಲಿ ಕಲಶಸ್ಥಾಪನೆ ನಂತರ ಬೆಳಗ್ಗೆ 8.30 ರಿಂದ 11.30 ರವರೆಗೆ ಹಾಗೂ ಮಧ್ಯಾಹ್ನ 3.30 ರಿಂದ 6 ರವರೆಗೆ ಭಾಗವತ ಉಪನ್ಯಾಸ ಆಯೋಜಿಸಲಾಗಿದೆ. ಮೇ 23 ರಂದು ವಾರ್ಷಿಕೋತ್ಸವದ ಪ್ರಯುಕ್ತ ಬೆಳಗ್ಗೆ 7.30ಕ್ಕೆ ಶ್ರೀವೆಂಕಟೇಶ್ವರ ದೇವರಿಗೆ ನಿರ್ಮಾಲ್ಯ ವಿಸರ್ಜನೆ ನಂತರ ಕಲಶಾಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ, ನಾರಾಯಣ ಮಂತ್ರ ಮತ್ತು ಅಷ್ಟಾಕ್ಷರ ಮಹಾಮಂತ್ರದ ಹೋಮ ಶ್ರೀಮದ್ಭಾಗವತ ಮಂಗಳ ಮಹೋತ್ಸವ ನಡೆಯಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮಠದ ವ್ಯವಸ್ಥಾಪಕ ಹೇಮಂತಾಚಾರ್ ಗುಡಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 81472 05326 ಸಂಪರ್ಕಿಸಬಹುದು.