ರೈತರನ್ನು ಕಳ್ಳರ ರೀತಿ ಬಿಂಬಿಸಿದ್ದೆ ಕಾಂಗ್ರೆಸ್‌ನ ದೊಡ್ಡ ಸಾಧನೆ

| Published : Aug 05 2024, 12:30 AM IST

ಸಾರಾಂಶ

ರೈತರನ್ನು ಕಳ್ಳರು ಅಂತ ಕರೆದಿರುವುದು, ಜೈಲಿಗೆ ಹಾಕುವುದು ಖಂಡನೀಯ. ನಮ್ಮ ನೀರು ನಮ್ಮ ಹಕ್ಕು. ನಮ್ಮ ಭೂಮಿಯಲ್ಲೇ ಕಾಲುವೆ ತೆಗೆದುಕೊಂಡು ಹೋಗಿ ನಮ್ಮನ್ನೇ ಕಳ್ಳರು ಎಂದು ಈ ಸರ್ಕಾರ ಕರೆಯುತ್ತಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೀರಾವರಿ ತಿದ್ದುಪಡಿ 2024 ವಿಧೇಯಕ ಮಂಡನೆ ಮಾಡಿ, ರೈತರನ್ನು ಕಳ್ಳರ ರೀತಿ ಬಿಂಬಿಸಿದ್ದೆ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆ ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಎಂ.ಸಿದ್ದಲಿಂಗಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧೇಯಕದಲ್ಲಿ ಅನ್ನದಾತರನ್ನು ಕಳ್ಳರ ರೀತಿ ಬಿಂಬಿಸಲಾಗಿದೆ. ಇದು ರಾಜ್ಯದ ರೈತರಿಗೆ ಮಾಡಿರುವ ಅಪಮಾನ. ನಾಲೆಗೆ ಬಿಡುವ ನೀರನ್ನು ಅನಧಿಕೃತವಾಗಿ ಬಳಕೆ ಮಾಡಿದರೆ ಅಂತಹ ರೈತರಿಗೆ ಎರಡು ಲಕ್ಷ ರು. ದಂಡ ವಿಧಿಸಲಾಗುವುದು. ಎರಡು ತಿಂಗಳಿಂದ ಎರಡು ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿ ಮಾಡಲಾಗುವುದು ಎಂದು ವಿಧೇಯಕ ಮಂಡನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರನ್ನು ಕಳ್ಳರು ಅಂತ ಕರೆದಿರುವುದು, ಜೈಲಿಗೆ ಹಾಕುವುದು ಖಂಡನೀಯ. ನಮ್ಮ ನೀರು ನಮ್ಮ ಹಕ್ಕು. ನಮ್ಮ ಭೂಮಿಯಲ್ಲೇ ಕಾಲುವೆ ತೆಗೆದುಕೊಂಡು ಹೋಗಿ ನಮ್ಮನ್ನೇ ಕಳ್ಳರು ಎಂದು ಈ ಸರ್ಕಾರ ಕರೆಯುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಕೂಡಲೇ ಈ ವಿಧೇಯಕ ವಾಪಾಸ್ಸು ಪಡೆಯದಿದ್ದರೆ ಬಿಜೆಪಿ ರೈತ ಮೋರ್ಚಾದಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ನಾವು ಭೂಮಿ ಕಳೆದುಕೊಂಡು ಜಾಗ ಕೊಟ್ಟಿರುವುದರಿಂದ ಕಡೆ ಅಂಚಿಗೆ ನೀರು ಹರಿದಿದೆ. ಬರಗಾಲ ಅಥವಾ ಅನಿವಾರ್ಯ ಸಂದರ್ಭದಲ್ಲಿ ರೈತರು ನಾಲೆ ನೀರು ಬಳಕೆ ಮಾಡುತ್ತಾರೆ. ಇದು ಅಕ್ಷಮ್ಯ ಅಪರಾಧ ಎನ್ನುವುದು ಸರಿಯಲ್ಲ. ವಿಧೇಯಕದ ಬಗ್ಗೆ ರೈತರ ಜೊತೆಗೆ ಚರ್ಚೆ ಮಾಡಿಲ್ಲ. ಇದು ರೈತರಿಗೆ ಮಾಡಿರುವ ದ್ರೋಹ. ಅನಿವಾರ್ಯ ಸಂದರ್ಭಗಳಲ್ಲಿ ನೀರು ಬಳಕೆ ಮಾಡುವುದು ವಾಡಿಕೆಯಾಗಿದೆ ಎಂದರು.

ವಿಧೇಯಕದಲ್ಲಿನ ಕಳ್ಳರ ರೀತಿ ಕದ್ದರೆ ಪದ ವಾಪಸ್ ಪಡೆಯಬೇಕು. ಇದು ಅವರ ಸಂಸ್ಕಾರ ತೋರಿಸುತ್ತದೆ. ಈಗಾಗಲೇ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ಯೋಜನೆ ಸ್ಥಗಿತ ಮಾಡಿದ್ದಾರೆ. ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡಲು ಹೊರಟಿದ್ದಾರೆ. ಏನಿದರ ಉದ್ದೇಶ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕೃಷಿ ಸಮ್ಮಾನ್ ಯೋಜನೆ ಜಾರಿ ಮಾಡಿದ್ದರು. ಅದನ್ನೂ ಈ ಸರ್ಕಾರ ಸ್ಥಗಿತ ಮಾಡಿದೆ. ಬಿತ್ತನೆ ಬೀಜ ದರ ದುಪ್ಪಟ್ಟು ಮಾಡಿದ್ದಾರೆ. ನೀರಾವರಿ ತಿದ್ದುಪಡಿ-2024 ವಿಧೇಯಕ ಸಮಗ್ರ ಚರ್ಚೆಗೆ ಒಳಪಡಿಸಿ. ರೈತ ಮುಖಂಡರ ಜೊತೆಗೆ ಮಾತುಕತೆ ನಡೆಸಬೇಕು. ಇಲ್ಲವಾದರೆ ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ಮಾಡುತ್ತೇವೆ. ಅಹೋರಾತ್ರಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಿಳಕಿ, ಮಲ್ಲಿಕಾರ್ಜುನ, ಆನಂದ, ಚಂದ್ರಶೇಖರ್ ಇದ್ದರು.