ಆಲಮಟ್ಟಿ ಬಗ್ಗೆ ಮಹಾ ವಾದಕ್ಕೆ ಅರ್ಥವಿಲ್ಲ: ಎಂಬಿಪಾ

| Published : Aug 01 2025, 11:45 PM IST

ಸಾರಾಂಶ

ಆಲಮಟ್ಟಿ ಅಣೆಕಟ್ಟು ಎತ್ತರಿಸುವುದರಿಂದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ ಎನ್ನುವುದು ಅರ್ಥವಿಲ್ಲದ ವಾದವಾಗಿದೆ. ಮಹಾರಾಷ್ಟ್ರದ ಈ ತಕರಾರು ನ್ಯಾಯಾಧಿಕರಣ, ಸುಪ್ರೀಂಕೋರ್ಟ್‌ ಮತ್ತು ಲೋಕಸಭೆಯಲ್ಲೂ ತಿರಸ್ಕೃತವಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಆಲಮಟ್ಟಿ ಅಣೆಕಟ್ಟು ಎತ್ತರಿಸುವುದರಿಂದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ ಎನ್ನುವುದು ಅರ್ಥವಿಲ್ಲದ ವಾದವಾಗಿದೆ. ಮಹಾರಾಷ್ಟ್ರದ ಈ ತಕರಾರು ನ್ಯಾಯಾಧಿಕರಣ, ಸುಪ್ರೀಂಕೋರ್ಟ್‌ ಮತ್ತು ಲೋಕಸಭೆಯಲ್ಲೂ ತಿರಸ್ಕೃತವಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವು ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿರುವ 519.60 ಮೀ.ನಿಂದ 524.25 ಮೀ.ಗೆ ಎತ್ತರಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎನ್ನುವ ಮಹಾರಾಷ್ಟ್ರದ ತಕರಾರಿಗೆ ಅರ್ಥವಿಲ್ಲ. ಆ ವಾದವನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಇನ್ನು, ಆಲಮಟ್ಟಿ ಅಣೆಕಟ್ಟು ನಿರ್ಮಿಸುವುದಕ್ಕೆ ಮುನ್ನವೇ ಸಾಂಗ್ಲಿಯಲ್ಲಿ 1694, 1976, 1994 ಮತ್ತು 1997ರಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಇನ್ನು ಸುಪ್ರೀಂಕೋರ್ಟ್‌ 2000ನೇ ಇಸವಿಯಲ್ಲಿ ಅಣೆಕಟ್ಟು ಎತ್ತರಕ್ಕೆ ಆದೇಶಿಸಿದೆ ಎಂದರು.ಸುಪ್ರೀಂಕೋರ್ಟ್‌ ಆದೇಶದ ನಂತರವೂ ಮಹಾರಾಷ್ಟ್ರ 2005ರಲ್ಲಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ಅಲ್ಲೂ ಮಧ್ಯಂತರ ಮನವಿ ತಿರಸ್ಕೃತಗೊಂಡಿದೆ. ಈ ಬಗ್ಗೆ ನ್ಯಾಯಾಧಿಕರಣವು 2010 ಮತ್ತು 2013ರಲ್ಲಿ ವಿಸ್ತೃತ ವರದಿ ನೀಡಿದೆ. ಈ ವಿಚಾರದಲ್ಲಿ ಹಿಪ್ಪರಗಿ ಜಲಾಶಯವನ್ನೂ ಪರಿಗಣಿಸಲಾಗಿದೆ. ಜತೆಗೆ, ಕೃಷ್ಣಾ ನೀರು ಹಂಚಿಕೆ ಸಂಬಂಧ ರಚಿಸಲಾದ ಎರಡನೇ ನ್ಯಾಯಾಧಿಕರಣವು ನೀಡಿರುವ ತೀರ್ಪನ್ನು ಈವರೆಗೂ ಯಾವ ರಾಜ್ಯಗಳೂ ಪ್ರಶ್ನಿಸಿಲ್ಲ. ಹೀಗಿರುವಾಗ, ಈಗ ಇದ್ದಕ್ಕಿದ್ದಂತೆ ತಕರಾರು ತೆಗೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಿದರೆ ತನಗೆ ನೀರು ಬರುವುದಿಲ್ಲ ಎಂದು ಅವಿಭಜಿತ ಆಂಧ್ರಪ್ರದೇಶ ಆಕ್ಷೇಪಣೆ ತೆಗೆದಿತ್ತು. ಆದರೆ, ಅದರ ವಾದ ಕೂಡ ಮಾನ್ಯವಾಗಿಲ್ಲ. ಮಹಾರಾಷ್ಟ್ರವು ಈಗ ನಾವು ಅಣೆಕಟ್ಟೆಯ ಎತ್ತರಕ್ಕೆ ಮುಂದಾಗಿರುವುದನ್ನು ಮರುಪರಿಶೀಲಿಸಲು ಆಗ್ರಹಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಐದು ವರ್ಷಗಳ ಕಾಲ ನೀರಾವರಿ ಸಚಿವನಾಗಿದ್ದ ನನಗೆ ಇದರ ಬಗ್ಗೆ ಸ್ಪಷ್ಟ ತಿಳಿವಳಿಕೆಯಿದೆ ಎಂದು ತಿಳಿಸಿದರು.ಇನ್ನು, ಸಾಂಗ್ಲಿ ಜಿಲ್ಲೆಯಲ್ಲಿನ ಜಲಾನಯನ ಪ್ರದೇಶಗಳು ವಿಪರೀತ ಒತ್ತುವರಿಯಾಗಿವೆ. ಅದಕ್ಕೆ ಸಂಬಂಧಿಸಿದ ವರದಿ ನನ್ನ ಬಳಿಯಿದೆ. ಮಹಾರಾಷ್ಟ್ರ ಸರ್ಕಾರ ಆ ಸಮಸ್ಯೆ ಬಗೆಹರಿಸಲು ಗಮನಕೊಡಬೇಕು. ಅದನ್ನು ಬಿಟ್ಟು ಜಲಾಶಯ ಎತ್ತರಕ್ಕೆ ಅಡ್ಡಗಾಲು ಹಾಕಬಾರದು. ನನ್ನಲ್ಲಿರುವ ದಾಖಲೆಗಳನ್ನು ಜಲಸಂಪನ್ಮೂಲ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಕೊಡುತ್ತೇನೆ ಎಂದರು.