ಹಾನಗಲ್ಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದ ಕಟ್ಟಡವನ್ನು ಶಾಸಕ ಶ್ರೀನಿವಾಸ್ ಮಾನೆ ಉದ್ಘಾಟಿಸಿದರು.
ಹಾನಗಲ್ಲ: ಹಿಂದಿನ 80 ವರ್ಷಗಳ ಆಸುಪಾಸಿನಲ್ಲಿ ಶ್ರೀಮಂತರಿಗೆ ಸೀಮಿತವಾದ ಶಿಕ್ಷಣ ಇಂದು ಬಡ ಕುಟುಂಬದ ಮಕ್ಕಳಿಗೂ ಅತ್ಯಂತ ಸಮರ್ಪಕವಾಗಿ ಸಿಗುತ್ತಿದ್ದು, ಎಲ್ಲರಿಗೂ ಸಮಾನ ಹಕ್ಕು ಒದಗಿಸುವುದೇ ನಮ್ಮ ಸಂವಿಧಾನದ ಆಶಯ ಸಂದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ತಿಳಿಸಿದರು.
ಪಟ್ಟಣದ ನವನಗರದಲ್ಲಿ ನಿರ್ಮಾಣವಾದ ೬.೫ ಕೋಟಿ ರು. ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಿಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಈ ದೇಶದ ಜನರ ತೆರಿಗೆ ಹಣ ಬಡವರ ಶಿಕ್ಷಣಕ್ಕೂ ಸಮರ್ಥವಾಗಿ ವಿನಿಯೋಗವಾಗುತ್ತಿದೆ. ಬಡ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಹಾಗೂ ವಸತಿ ಶಾಲೆಗಳನ್ನು ತೆರೆಯಲಾಗುತ್ತಿದೆ. ವಂಶಪಾರಂಪರ‍್ಯವಾದ ಜೀತದಾಳು ಪದ್ಧತಿ ಈಗ ದೂರವಾಗಿದೆ. ಎಲ್ಲರೂ ಸಮಾನವಾಗಿ ಶಿಕ್ಷಣ ಪಡೆದು ಒಬ್ಬರಿಗೊಬ್ಬರು ಸಹಾಯ ಸಹಕಾರದಿಂದ ಬಾಳಬೇಕಾದ ಕಾಲದಲ್ಲಿ ನಾವಿದ್ದೇವೆ. ಇದರಲ್ಲಿ ವಿದ್ಯಾರ್ಥಿಗಳ ಭವಿಷ್ಯವಿದೆ. ಸರ್ಕಾರದ ಆಸ್ತಿ ನಮ್ಮ ಆಸ್ತಿಯಾಗಿ ಉಳಿಸಿಕೊಳ್ಳಬೇಕು. ಹೊಸ ಹೊಸ ಆಭಿವೃದ್ಧಿಗೆ ನಮ್ಮ ಸರ್ಕಾರದ ಹಣ ವಿನಿಯೋಗಿಸಲು ಇರುವ ಸೌಲಭ್ಯಗಳನ್ನು ಕೆಡದಂತೆ ಬಳಸಿಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾದುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಬಿ. ಹಿರೇಮಠ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಅಭಿವೃದ್ಧಿಗೆ ಶಾಸಕ ಶ್ರೀನಿವಾಸ್ ಮಾನೆ ಅವರ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಹಿತಕ್ಕಾಗಿ ಯಾವುದೇ ಅನುದಾನದ ಕೊರತೆ ಆಗಿಲ್ಲ. ಇದರಿಂದಾಗಿ ಹಾನಗಲ್ಲ ತಾಲೂಕಿನ ಹಿಂದುಳಿದ ವರ್ಗಗಳ ಹಾಗೂ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಅನುಕೂಲವಾಗಿದೆ. ತಾಲೂಕಿನಲ್ಲಿ ಇನ್ನೆರಡು ವಸತಿ ನಿಲಯಗಳ ಕಟ್ಟಡ ಹೊಸದಾಗಿ ನಿರ್ಮಾಣವಾಗಬೇಕಾಗಿದ್ದು ಅವಕ್ಕೆ ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದರು.ತಹಸೀಲ್ದಾರ ವಿಠ್ಠಲ್ ಚೌಗುಲಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೀರೇಶ ಬೈಲವಾಳ, ಪುಟ್ಟಪ್ಪ ನರೇಗಲ್ಲ, ಚಂದ್ರಪ್ಪ ಜಾಲಗಾರ, ಟಾಕನಗೌಡ ಪಾಟೀಲ, ಹನುಮಂತಪ್ಪ ಯಳ್ಳೂರ, ಜೀವನ್ ಕಮ್ಮಾರ, ಶಿವಣ್ಣ ಗೊಲ್ಲರ, ಮಂಜು ಗೋರನವರ, ಬಸನಗೌಡ ಪಾಟೀಲ, ಭರಮಣ್ಣ ಶಿವೂರ, ಗುರುನಾಥ ಗವಾಣಿಕರ, ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಮು ಬಯಲಸೀಮೆ ವೇದಿಕೆಯಲ್ಲಿದ್ದರು. ಪಲ್ಲವಿ ಕಟ್ನಳ್ಳಿ ಪ್ರಾರ್ಥನೆ ಹಾಡಿದರು.