ಸಾರಾಂಶ
- ಶೀಘ್ರ ಸಾಮಾನ್ಯ ಸಭೆ ಕರೆದು ಪರಿಷ್ಕರಿಸಿ ಶುಲ್ಕ ಇಳಿಕೆಗೆ ಕ್ರಮ: ಮೇಯರ್ ವಿನಾಯಕ ಪೈಲ್ವಾನ್ ಭರವಸೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಬಳಕೆದಾರರ ಶುಲ್ಕ (ಎಸ್‌ಡಬ್ಲ್ಯುಎಂ) ಹಾಗೂ ಒಳಚರಂಡಿ ಶುಲ್ಕ ಹೆಚ್ಚಲು ಈ ಹಿಂದೆ ರಾಜ್ಯ ಹಾಗೂ ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯೇ ಕಾರಣ ಎಂದು ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಡಬ್ಲ್ಯುಎಂ ಹಾಗೂ ಒಳಚರಂಡಿ ಶುಲ್ಕ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ಪ್ರಕಾರ 9.10.2019ರ ಕರ್ನಾಟಕ ಸರ್ಕಾರದ ಆದೇಶದಂತೆ 2021ರ ಫೆ.1ರಂದು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಬಳಕೆದಾರರ ಶುಲ್ಕ, ಒಳಚರಂಡಿ ಶುಲ್ಕ ಪರಿಷ್ಕರಿಸಿ, ಪಾಲಿಕೆ ವಿಪಕ್ಷವಾಗಿದ್ದ ಕಾಂಗ್ರೆಸ್ಸಿನ ತೀವ್ರ ವಿರೋಧದ ಮಧ್ಯೆಯೂ ಅಂಗೀಕರಿಸಿದ್ದೇ ಬಿಜೆಪಿ ಎಂದರು.ಪಾಲಿಕೆ ವಿಪಕ್ಷ ಬಿಜೆಪಿ ಮತ್ತು ಆ ಪಕ್ಷದ ಮುಖಂಡರು ಈಗ ಕಾಂಗ್ರೆಸ್ ಆಡಳಿತವು ಬಳಕೆದಾರರ ಶುಲ್ಕ ಹೆಚ್ಚಿಸಿದೆಯೆಂಬ ಹೇಳಿಕೆ ನೀಡುತ್ತಿರುವುದು ಖಂಡನೀಯ. ಬಿಜೆಪಿ ಅಧಿಕಾರಾವಧಿಯ 2023- 2024ನೇ ಸಾಲಿನಿಂದ ಜಾರಿಗೆ ಬರುವಂತೆ ದರ ಪರಿಷ್ಕರಿಸಲಾಗಿದೆ. 2024-25ನೇ ಸಾಲಿನಿಂದಲೇ ಅದು ಜಾರಿಗೆ ಬಂದಿದೆ. ಪ್ರಸ್ತುತ ವಸತಿಗೆ ಪ್ರತಿ ತಿಂಗಳು 500 ಚದರ ಅಡಿಗೆ ₹30, 500ರಿಂದ 1 ಸಾವಿರ ಚದರಡಿಗೆ ₹40, 1 ಸಾವಿರದಿಂದ 2 ಸಾವಿರ ಚದರಡಿಗೆ ₹50, 2 ಸಾವಿರ ಚದರಡಿ ಮೇಲ್ಪಟ್ಟ ಸ್ವತ್ತುಗಳಿಗೆ ₹75 ನಿಗದಿಪಡಿಸಿದ್ದೇ ಬಿಜೆಪಿ ಎಂದು ಮೇಯರ್ ದೂರಿದರು.
ವಾಣಿಜ್ಯ ಜಾಗಕ್ಕೆ 1 ಸಾವಿರ ಚದರ ಅಡಿಗೆ ತಿಂಗಳಿಗೆ ₹100, 1 ಸಾವಿರದಿಂದ 3 ಸಾವಿರ ಚದರಡಿಗೆ ₹300, 3 ಸಾವಿರದಿಂದ 5 ಸಾವಿರ ಚದರಡಿಗೆ ₹500, 5 ಸಾವಿರ ಚದರಡಿ ಮೇಲ್ಪತ್ತ ಸ್ವತ್ತುಗಳಿಗೆ ₹759, ಖಾಲಿ ನಿವೇಶನಕ್ಕೆ ಒಳಚರಂಡಿ ಶುಲ್ಕ ಕೈಬಿಟ್ಟು, ಬಳಕೆದಾರರ ಶುಲ್ಕ ಪ್ರತಿ ಚದರಡಿಗೆ ₹00.20 ಪೈಸೆಯಂತೆ ಪ್ರತಿ ತಿಂಗಳಿಗೆ ಪರಿಷ್ಕರಿಸಿದೆ. ಈ ಹಿಂದೆ ಪಾಲಿಕೆ ಆಡಳಿತದಲ್ಲಿದ್ದ ಬಿಜೆಪಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ವಿರೋಧದ ಮಧ್ಯೆಯೂ ಬಳಕೆದಾರರ ಶುಲ್ಕ ಹಾಗೂ ಒಳ ಚರಂಡಿ ಶುಲ್ಕ ಹೆಚ್ಚಳ ಅಂಗೀಕರಿಸಿದ್ದಾರೆ. ಈಗ ಕಾಂಗ್ರೆಸ್ಸಿನ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.ಬಳಕೆದಾರರ ಶುಲ್ಕವು 2022- 2023ರವರೆಗೆ ವಸತಿಗೆ ಪ್ರತಿ ತಿಂಗಳಿಗೆ 1 ಸಾವಿರ ಚದರಡಿಗೆ ₹10, 1 ಸಾವಿರದಿಂದ 2 ಸಾವಿರ ಚದರಡಿಗೆ ₹30, 3 ಸಾವಿರ ಚದರಡಿ ಮೇಲ್ಪಟ್ಟ ಸ್ವತ್ತುಗಳಿಗೆ ₹50 ನಿಗದಿಪಡಿಸಲಾಗಿದೆ. ಜಯಮ್ಮ ಗೋಪಿನಾಯ್ಕ ಮೇಯರ್ ಆಗಿದ್ದಾಗ 2024- 2025ನೇ ಸಾಲಿನಿಂದ ಜಾರಿಗೊಳ್ಳುವಂತೆ ಒಳಚರಂಡಿ ಶುಲ್ಕವನ್ನು ಆಗಿನ ವಿಪಕ್ಷ ಕಾಂಗ್ರೆಸ್ ಸದಸ್ಯರು ವಿರೋಧಿಸಿದ್ದರೂ, ಗೃಹ ಬಳಕೆಗೆ ವರ್ಷಕ್ಕೆ ₹600, ಗೃಹೇತರ ವರ್ಷಕ್ಕೆ ₹1200, ವಾಣಿಜ್ಯ-ಕೈಗಾರಿಕೆಗೆ ₹2400 ಪರಿಷ್ಕರಿಸಿ ಅಂಗೀಕರಿಸಿದ್ದು ಬಿಜೆಪಿ ಎಂದು ಪುನರುಚ್ಛರಿಸಿದರು.
ಒಳಚರಂಡಿ ಶುಲ್ಕ ಹೆಚ್ಚಿಸಿರುವುದರ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲೇ ಚರ್ಚಿಸಿ, ಈ ಹಿಂದಿನ ಬಿಜೆಪಿ ಅಧಿಕಾರ ಅವಧಿಯಲ್ಲಿ ಮಾಡಿದ ಅವೈಜ್ಞಾನಿಕ ಹೆಚ್ಚಳ ನಿರ್ಣಯ ಪರಿಷ್ಕರಿಸಿ, ಶುಲ್ಕಗಳನ್ನು ಮತ್ತೆ ಪರಿಷ್ಕರಿಸುವ ಕೆಲಸವನ್ನು ಕಾಂಗ್ರೆಸ್ ಕೈಗೊಳ್ಳಲು ತೀರ್ಮಾನಿಸಲಿದೆ ಎಂದು ಸ್ಪಷ್ಟಪಡಿಸಿದರು.ಪಾಲಿಕೆ ಸದಸ್ಯರಾದ ಜಿ.ಎಸ್. ಮಂಜುನಾಥ ಗಡಿಗುಡಾಳ, ಮಾಜಿ ಉಪ ಮೇಯರ್ ಅಬ್ದುಲ್ ಲತೀಫ್, ಮುಖಂಡರಾದ ಜಗದೀಶ, ಯಾಸಿನ್ ಯರಗಲ್, ಸತೀಶ, ಉಮೇಶ ಇತರರು ಇದ್ದರು.
- - - ಬಾಕ್ಸ್ * ಎಲ್ಲೆಂದರಲ್ಲಿ ಕಸ ಎಸೆದರೆ ₹500 ದಂಡ ದಾವಣಗೆರೆಯಲ್ಲಿ ಎಲ್ಲೆಂದರಲ್ಲಿ ಹೆಚ್ಚು ಕಸ ಹಾಕುವ ವಾರ್ಡ್‌ಗಳ ಗುರುತಿಸಲಾಗಿದೆ. ಅಂತಹ ಪಾಯಿಂಟ್‌ಗಳಲ್ಲಿ ಒಬ್ಬ ಪೌರ ಕಾರ್ಮಿಕರನ್ನು ನೇಮಿಸಿದೆ. ನಿತ್ಯ ಸಂಜೆ 7ರಿಂದ ಮಧ್ಯರಾತ್ರಿ 1 ಗಂಟೆವರೆಗೆ ರಸ್ತೆಯಲ್ಲಿ, ಖಾಲಿ ನಿವೇಶನದಲ್ಲಿ ಕಸ ಹಾಕುವವರ ಫೋಟೋ ಸೆರೆ ಹಿಡಿದು, ಅಂತಹವರಿಗೆ ₹500 ದಂಡ ವಿಧಿಸಲಾಗುತ್ತಿದೆ. ಅಮಿತ್ ಚಿತ್ರ ಮಂದಿರ, ಕೆಟಿಜೆ ನಗರ 9ನೇ ಕ್ರಾಸ್, ಶಿವಪ್ಪಯ್ಯ ವೃತ್ತ, ವಿನೋಬ ನಗರ 2ನೇ ಮುಖ್ಯ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ, ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದವರಿಗೆ ದಂಡ ವಿಧಿಸಲಾಗಿದೆ. ಕಳೆದೊಂದು ವರ್ಷದಿಂದ ಇದು ನಡೆಯುತ್ತಿದ್ದು, ನಗರ ಸ್ವಚ್ಛತೆಗೆ ಜನತೆ ಸಹ ಪಾಲಿಕೆ ಜೊತೆ ಕೈ ಜೋಡಿಸಬೇಕು- ಜಿ.ಎಸ್.ಮಂಜುನಾಥ ಗಡಿಗುಡಾಳ, ಪಾಲಿಕೆ ಸದಸ್ಯ
- - -ಕೋಟ್
ದಾವಣಗೆರೆ ಪಾಲಿಕೆಯ ಮುಂಬರುವ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಶುಲ್ಕ ಪರಿಷ್ಕರಿಸಿ, ಕಡಿಮೆ ಮಾಡಲು ತೀರ್ಮಾನಿಸಲಾಗುವುದು. ಹಿಂದಿನ ಬಿಜೆಪಿ ಸರ್ಕಾರವು ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಿಸಿದ್ದರಿಂದ ಗೊಂದಲವಾಗಿದೆ. ಈಗಾಗಲೇ ಪಾಲಿಕೆ ಸ್ಥಾಯಿ ಸಮಿತಿ ಸಭೆಗಳು ನಡೆಯುತ್ತಿದ್ದು, ಜುಲೈ ಅಂತ್ಯಕ್ಕೆ ಪಾಲಿಕೆ ಸಾಮಾನ್ಯ ಸಭೆ ಕರೆಯಲಾಗುವುದು- ಬಿ.ಎಚ್.ವಿನಾಯಕ ಪೈಲ್ವಾನ್, ಮೇಯರ್
- - - -15ಕೆಡಿವಿಜಿ3, 4:ದಾವಣಗೆರೆ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಹಿರಿಯ ಸದಸ್ಯರಾದ ಎ.ನಾಗರಾಜ, ಜಿ.ಎಸ್.ಮಂಜುನಾಥ ಗಡಿಗುಡಾಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.