ಉತ್ತರಾಖಂಡದಲ್ಲಿ ಮೃತಪಟ್ಟ ಎಲ್ಲಾ 9 ಕನ್ನಡಿಗರ ಶವ ಪತ್ತೆ

| Published : Jun 07 2024, 12:33 AM IST / Updated: Jun 07 2024, 11:13 AM IST

ಸಾರಾಂಶ

ಉತ್ತರಾಖಂಡದ ಸಹಸ್ರತಾಲ್‌ಗೆ ಟ್ರೆಕ್ಕಿಂಗ್‌ಗೆ ತೆರಳಿ ಪ್ರತಿಕೂಲ ಹವಾಮಾನದಿಂದ ಮೃತಪಟ್ಟಿದ್ದ ನಗರದ 9 ಚಾರಣಿಗರ ಶವಗಳೂ ಪತ್ತೆಯಾಗಿವೆ.  

 ಬೆಂಗಳೂರು :  ಉತ್ತರಾಖಂಡದ ಸಹಸ್ರತಾಲ್‌ಗೆ ಟ್ರೆಕ್ಕಿಂಗ್‌ಗೆ ತೆರಳಿ ಪ್ರತಿಕೂಲ ಹವಾಮಾನದಿಂದ ಮೃತಪಟ್ಟಿದ್ದ ನಗರದ 9 ಚಾರಣಿಗರ ಶವಗಳೂ ಪತ್ತೆಯಾಗಿವೆ. ಇನ್ನು, ಹಿಮಗಾಳಿಯಲ್ಲಿ ಸಿಲುಕಿ ಬದುಕುಳಿದ 13 ಮಂದಿಯನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದು, ಗುರುವಾರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಹಿಮಗಾಳಿಗೆ ಸಿಲುಕಿ ಸಾವನ್ನಪ್ಪಿದ್ದ 9 ಮಂದಿಯಲ್ಲಿ ಬುಧವಾರ ಐವರ ಶವ ಪತ್ತೆಯಾಗಿದ್ದವು. ಗುರುವಾರ ಮುಂಜಾನೆ ಕಾರ್ಯಾಚರಣೆ ನಡೆಸಿ ಇನ್ನುಳಿದ ನಾಲ್ಕು ಶವಗಳನ್ನೂ ಪತ್ತೆ ಹಚ್ಚಲಾಯಿತು. ಆದರೆ ಕಾನೂನು ಪ್ರಕ್ರಿಯೆಗಳನ್ನು ಪೂರೈಸಲು ಹೆಚ್ಚು ಸಮಯ ಬೇಕಾಗಿದ್ದರಿಂದ ಶುಕ್ರವಾರ ಪಾರ್ಥಿವ ಶರೀರಗಳನ್ನು ನಗರಕ್ಕೆ ತರಲಾಗುವುದು. ಪವಾಡಸದೃಶವಾಗಿ ಬದುಕುಳಿದ 13 ಚಾರಣಿಗರು ಗುರುವಾರ ರಾತ್ರಿ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಸುರಕ್ಷಿತವಾಗಿ ಆಗಮಿಸಿದರು.

ದುರಂತದಲ್ಲಿ ಮೃತಪಟ್ಟಿದ್ದ ಸಿಂಧು ವಕೆಲಂ, ಆಶಾ ಸುಧಾಕರ್, ಸುಜಾತಾ ಮುಂಗುರವಾಡಿ, ವಿನಾಯಕ್‌ ಮುಂಗುರವಾಡಿ, ಚಿತ್ರಾ ಪ್ರಣೀತ್ ದೇಹಗಳನ್ನು ಬುಧವಾರ ಪತ್ತೆಹಚ್ಚಿ ವಿಮಾನದ ಮೂಲಕ ಉತ್ತರಕಾಶಿಗೆ ರವಾನಿಸಲಾಗಿತ್ತು. ಗುರುವಾರ ಮುಂಜಾನೆ ಕಾರ್ಯಾಚರಣೆ ನಡೆಸಿ ಪದ್ಮನಾಭ ಕೆ.ಪಿ, ವೆಂಕಟೇಶ್ ಪ್ರಸಾದ್ ಕೆ., ಅನಿತಾ ರಂಗಪ್ಪ, ಪದ್ಮಿನಿ ಹೆಗ್ಡೆ ಅವರ ಶವಗಳನ್ನೂ ಪತ್ತೆ ಹಚ್ಚಿ ಉತ್ತರಕಾಶಿಗೆ ಕಳುಹಿಸಲಾಗಿತ್ತು. ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಡೆಹ್ರಾಡೂನ್‌ಗೆ ಕೊಂಡೊಯ್ಯಲಾಯಿತು.

ಅವಘಡದಲ್ಲಿ ಸಿಲುಕಿಕೊಂಡಿದ್ದ ಸೌಮ್ಯಾ ಕೆನಾಲೆ, ಸ್ಮೃತಿ ಡೋಲಾಸ್, ಶೀನಾ ಲಕ್ಷ್ಮಿ, ಎಸ್.ಶಿವಜ್ಯೋತಿ, ಅನಿಲ್ ಜಮತಿಗೆ ಅರುಣಾಚಲ ಭಟ್, ಭರತ್ ಬೊಮ್ಮನಗೌಡರ್, ಮಧು ಕಿರಣ್ ರೆಡ್ಡಿ, ಜೈಪ್ರಕಾಶ್ ಬಿ.ಎಸ್. ಅವರನ್ನು ಬುಧವಾರವೇ ರಕ್ಷಿಸಲಾಗಿತ್ತು. ಗುರುವಾರ ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಎಸ್.ಸುಧಾಕರ್, ವಿನಯ್ ಎಂ.ಕೆ, ವಿವೇಕ್ ಶ್ರೀಧರ್, ನವೀನ್ ಎ. ಮತ್ತು ರಿತಿಕಾ ಜಿಂದಾಲ್ ಅವರನ್ನು ರಕ್ಷಿಸಿ ವಿಮಾನದ ಮೂಲಕ ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ಕಳುಹಿಸಲಾಯಿತು.

ಕಾನೂನು ಪ್ರಕ್ರಿಯೆಯಿಂದ ವಿಳಂಬ:

9 ಮೃತ ದೇಹಗಳನ್ನೂ ಉತ್ತರಕಾಶಿಗೆ ತಂದು ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಗುರುವಾರ ಮಧ್ಯಾಹ್ನವೇ ಡೆಹ್ರಾಡೂನ್‌ಗೆ ತರಲಾಗಿತ್ತು. ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಮತ್ತು ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ರಂಜಿತ್ ಸಿನ್ಹಾ ಅವರನ್ನು ಭೇಟಿಯಾದ ಕೃಷ್ಣ ಬೈರೇಗೌಡ ಅವರು ಧನ್ಯವಾದ ಸಲ್ಲಿಸಿ ಶವಗಳನ್ನು ಬೆಂಗಳೂರಿಗೆ ಸಾಗಿಸಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಕೋರಿದ್ದು, ಅದಕ್ಕೆ ಅವರು ಒಪ್ಪಿಗೆಯನ್ನೂ ಸೂಚಿಸಿದ್ದರು.

ಶವಗಳು ವಾಸನೆ ಬಾರದಂತೆ ‘ಎಂಬಾಮಿಂಗ್‌’ ಸಹ ನಡೆಸಲಾಯಿತು. ಆದರೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೆಚ್ಚು ಸಮಾಯವಾಕಾಶ ಆಗಿದ್ದರಿಂದ ವಿಶೇಷ ವಿಮಾನದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದೆ ಮೃತದೇಹಗಳನ್ನು ಆ್ಯಂಬ್ಯುಲೆನ್ಸ್‌ಗಳ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗಿದೆ. ಶುಕ್ರವಾರ ಬೆಳಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಪಾರ್ಥಿವ ಶರೀರಗಳನ್ನು ರವಾನಿಸಲು ಸ್ಥಳ ಕಾಯ್ದಿರಿಸಲಾಗಿದೆ.

ರಾಜ್ಯದ 22 ಚಾರಣಿಗರ ತಂಡ ಮೇ 28ರಂದು ಟ್ರೆಕ್ಕಿಂಗ್‌ಗೆಂದು ಉತ್ತರಾಖಂಡಕ್ಕೆ ತೆರಳಿತ್ತು. ಜೂ.4 ರಂದು ಬೆಳಿಗ್ಗೆ ಉತ್ತರ ಕಾಶಿಯಿಂದ 35 ಕಿ.ಮೀ. ದೂರದ ಅತ್ಯಂತ ಕಠಿಣ ಹಾದಿಯ ಸಹಸ್ರತಾಲ್‌ನ ಎತ್ತರದ ಪ್ರದೇಶದಲ್ಲಿ ಚಾರಣ ನಡೆಸಿತ್ತು. ಗಮ್ಯ ಸ್ಥಾನ ತಲುಪಿ ಮಧ್ಯಾಹ್ನ ಶಿಬಿರಕ್ಕೆ ಹಿಂದಿರುಗಬೇಕಾದರೆ ಹಿಮಗಾಳಿಯಿಂದಾಗಿ ಅಪಾಯಕ್ಕೆ ಸಿಲುಕಿ 9 ಮಂದಿ ಮೃತಪಟ್ಟಿದ್ದರು.ಉತ್ತರಾಖಂಡದಲ್ಲಿ ಮೃತ 9 ಕನ್ನಡಿಗರಲ್ಲಿ ಹುಬ್ಬಳ್ಳಿ ಮೂಲದ ದಂಪತಿ, ಶಿರಸಿ ಯುವತಿ

ಉತ್ತರಾಖಂಡದಲ್ಲಿ ಚಾರಣದ ವೇಳೆ ನಡೆದ ಹಿಮಪಾತದಲ್ಲಿ ಮೃತಪಟ್ಟ ಒಂಬತ್ತು ಮಂದಿ ಕನ್ನಡಿಗರಲ್ಲಿ ಹುಬ್ಬಳ್ಳಿ ಮೂಲದ ದಂಪತಿ ಹಾಗೂ ಶಿರಸಿಯ ಯುವತಿಯೂ ಸೇರಿದ್ದಾರೆ.

ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಹುಬ್ಬಳ‍್ಳಿಯ ವಿನಾಯಕ ಮುಂಗರವಾಡಿ ಹಾಗೂ ಸುಜಾತಾ ಮುಂಗರವಾಡಿ ಹಾಗೂ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಜಾಗನಳ್ಳಿ ಯುವತಿ ಪದ್ಮಿನಿ ಹೆಗಡೆ ಸಾವಿಗೀಡಾದವರು.

ವಿನಾಯಕ ಮುಂಗರವಾಡಿ ದಂಪತಿ ಮೂಲತಃ ಹುಬ್ಬಳ್ಳಿಯ ಉಣಕಲ್‌ನವರು. ಈ ದಂಪತಿ ಬಿವಿಬಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುಗಿಸಿದವರು. ಇವರಿಗೆ ಇಬ್ಬರು ಮಕ್ಕಳಿದ್ದು, ಇವರ ಕುಟುಂಬ ಸದ್ಯ ಬೆಂಗಳೂರಲ್ಲಿ ನೆಲೆಸಿದೆ. ದಂಪತಿ ಕರ್ನಾಟಕ ಚಾರಣಿಗರ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್‌ನ ಟ್ರಸ್ಟಿ ಕೂಡ ಹೌದು. ಆಗಾಗ ಚಾರಣಕ್ಕೆಂದು ವಿವಿಧೆಡೆ ತೆರಳುತ್ತಿದ್ದರು.

ಇನ್ನು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಶಿರಸಿಯ ಪದ್ಮಿನಿ ರಜಾ ದಿನಗಳಲ್ಲಿ ಟ್ರಕ್ಕಿಂಗ್‌ಗೆ ಹೋಗುತ್ತಿದ್ದರು. ಪದ್ಮಿನಿ ತಾಯಿ ಶೈಲಜಾ ಮತ್ತು ಸಹೋದರಿ ಮುಂಬೈನಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನ ಮೌಂಟೇನಿಯರಿಂಗ್‌ ಫೌಂಡೇಶನ್‌ ಜತೆಗೆ ಪದ್ಮಿನಿ ಮೇ 29ರಿಂದ ಜೂ.7ರ ವರೆಗಿನ ಭಟವಾಡಿ ಮಲ್ಲಾ ಕುಶಕಲ್ಯಾಣ ಸಹಸ್ತ್ರತಾಲ್‌ ಟ್ರಕಿಂಗ್‌ನಲ್ಲಿ ಪಾಲ್ಗೊಂಡಿದ್ದರು.