ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವಿಗೀಡಾದ ಬೆಳಗಾವಿಯ ನಾಲ್ವರ ಪೈಕಿ ಇಬ್ಬರ ಮೃತದೇಹಗಳನ್ನು ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಗುರುವಾರ ಸಂಜೆ 6.20ಕ್ಕೆ ತೆಗೆದುಕೊಂಡು ಬರಲಾಯಿತು.ಬೆಳಗಾವಿಯ ಶಿವಾಜಿ ನಗರದ ಮಹಾದೇವಿ ಬಾವನೂರ (48) ಹಾಗೂ ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ (61) ಅವರ ಮೃತದೇಹಗಳನ್ನು ಜಿಲ್ಲಾಡಳಿತದಿಂದ ಬರಮಾಡಿಕೊಳ್ಳಲಾಯಿತು. ಮಹಾದೇವಿ ಹಾಗೂ ಅರುಣ ಕೋಪರ್ಡೆ ಅವರ ಶವಗಳು ಸರಿಯಾದ ಸಮಯಕ್ಕೆ ದೆಹಲಿಗೆ ತಲುಪಿದ ಹಿನ್ನೆಲೆಯಲ್ಲಿ ಮಧ್ಯಾಹ್ನದ ವಿಮಾನದಲ್ಲಿ ದೆಹಲಿಯಿಂದ ನೇರವಾಗಿ ಬೆಳಗಾವಿಗೆ ತೆಗೆದುಕೊಂಡು ಬರಲಾಯಿತು. ಆದರೆ, ವಡಗಾವಿಯ ಜ್ಯೋತಿ ಹತ್ತರವಾಠ ಹಾಗೂ ಅವರ ಪುತ್ರಿ ಮೇಘಾ ಅವರ ಶವಗಳು ತಡವಾಗಿ ದೆಹಲಿ ತಲುಪಿದ್ದರಿಂದ ದೆಹಲಿಯಿಂದ ಗೋವಾಗೆ ಸಂಜೆ 6ಕ್ಕೆ ಮೃತದೇಹಗಳನ್ನು ತರಲಾಗಿದೆ. ಗುರುವಾರ ರಾತ್ರಿ 8.30ಕ್ಕೆ ಗೋವಾದಿಂದ ಹೊರಟ ಆ್ಯಂಬುಲೆನ್ಸ್‌ಗಳು ತಡರಾತ್ರಿ ಬೆಳಗಾವಿಗೆ ತಲುಪಿತು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷಾ ಪ್ರಕ್ರಿಯೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.
ಕುಟುಂಬಸ್ಥರ ಆಕ್ರಂದನ:ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅರುಣ ಕೋಪರ್ಡೆ ಮತ್ತು ಮಹಾದೇವಿ ಬಾವನೂರ ಅವರ ಮೃತರ ದೇಹಗಳನ್ನು ಆ್ಯಂಬುಲೆನ್ಸ್‌ಗಳಲ್ಲಿ ಹೊರತರುತ್ತಿದ್ದಂತೆಯೇ ಕುಟುಂಬಸ್ಥರು, ಸಂಬಂಧಿಕರ ದುಃಖ ಉಮ್ಮಳಿಸಿತು. ಶವಗಳ ಪೆಟ್ಟಿಗೆ ಮೇಲೆ ಒರಗಿದ ಅವರು ತೀವ್ರವಾಗಿ ರೋದಿಸಲು ಆರಂಭಿಸಿದರು. ಶವಗಳ ಪೆಟ್ಟಿಗೆ ತೆಗೆಯುತ್ತಿದ್ದಂತೆಯೇ ಮುಖ ನೋಡಲು ಅವಕಾಶ ಕೊಡುವಂತೆ ಕುಟುಂಬಸ್ಥರು ಹಲವು ಬಾರಿ ಮನವಿ ಮಾಡಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಹಸ್ತಾಂತರಿಸಲಾವುದು ಎಂದು ಅಧಿಕಾರಿಗಳು, ಪೊಲೀಸರು ಅವರನ್ನು ಸಮಾಧಾನಗೊಳಿಸಿದರು.ಈ ವೇಳೆ ಸಂಸದರಾದ ಜಗದೀಶ ಶೆಟ್ಟರ್, ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ಮಾಜಿ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಈ ವೇಳೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಪ್ರತ್ಯೇಕ ಆ್ಯಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷಾ ಪ್ರಕ್ರಿಯೆ ಮುಗಿದ ಬಳಿಕ ಅವರ ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.ಮೃತ ಮಹಾದೇವಿ ಬಾವನೂರು ಮೃತ ದೇಹಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಬೆಳಗಾವಿ ಶಿವಾಜಿನಗರದಲ್ಲಿ ಮಹಾದೇವಿ ಅವರ ನಿವಾಸವಿದೆ. ಆದರೆ, ಮನೆಯ ಮುಂದೆ ಪೂಜೆ ಸಲ್ಲಿಸಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾದೇವಿ ಅವರ ಪಾರ್ಥಿವ ಶರೀರವನ್ನು ನೂಲ್ವಿಗೆ ಆಂಬ್ಯುಲೆನ್ಸ್‌ನಲ್ಲಿ ತೆಗೆದುಕೊಂಡು ಹೋದರು.
ಮೃತರ ಕುಟುಂಬಕ್ಕೆ ತಲಾ ₹ 2 ಲಕ್ಷ ಪರಿಹಾರ: ಮಹಾಕುಂಭಮೇಳದಲ್ಲಿ ಕಾಲ್ತುಳಿತದಿಂದ ಮೃತಪಟ್ಟ ಕುಟುಂಬದ ಅವಲಂಬಿತರಿಗೆ ತಂದೆ, ಸಚಿವ ಸತೀಶ ಜಾರಕಿಹೊಳಿ ಅವರು ವೈಯಕ್ತಿಕವಾಗಿ ತಲಾ ₹2 ಲಕ್ಷ ಪರಿಹಾರ ನೀಡಲಿದ್ದಾರೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಇದೆ ವೇಳೆ ಹೇಳಿದರು.ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಘೋಷಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಈ ಘಟನೆ ಆಗಿದೆ. ಉತ್ತರ ಪ್ರದೇಶದ ಸರ್ಕಾರ ಅಗತ್ಯ ಕೆಲಸ ಮಾಡುತ್ತಿದೆ. ಅಲ್ಲಿಗೆ ಹೋಗುವವರು ಕೂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಬಿಮ್ಸ್‌ನಲ್ಲೇ ಏಕೆ ಮರಣೋತ್ತರ ಪರೀಕ್ಷೆ?: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಕಾಲ್ತುಳಿತದಿಂದ ಮೃತಪಟ್ಟಿರುವ ಒಟ್ಟು 30 ಜನರಲ್ಲಿ ನಾಲ್ವರು ಬೆಳಗಾವಿಯವರೇ ಇದ್ದಾರೆ. ಆದರೆ, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ದೆಹಲಿಯ ಆಸ್ಪತ್ರೆಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅಲ್ಲಿ ವಿಮಾನಗಳ ಸಮಯ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮತ್ತು ದೆಹಲಿಯಲ್ಲಿರುವ ಪೊಲೀಸರು ನೀಡಿರುವ ಪ್ರಮಾಣಪತ್ರದ ಆಧಾರದ ಮೇಲಿಂದ ಏರ್ ಲಿಫ್ಟ್ ಮಾಡಲು ನಿರ್ಧರಿಸಲಾಗಿದೆ ಎಂದು ಡಿಸಿ ಮೊಹಮ್ಮದ ರೋಷನ್ ತಿಳಿಸಿದರು. ಹೀಗಾಗಿ ನಾಲ್ವರ ಮರಣೋತ್ತರ ಪರೀಕ್ಷೆಗಳನ್ನು ಬೆಳಗಾವಿಯ ಬಿಮ್ಸ್‌ನಲ್ಲಿಯೇ ನಿರ್ಧರಿಸಲಾಯಿತು ಎಂದಿದ್ದಾರೆ.ಮಹಾಕುಂಭಮೇಳದಲ್ಲಿ ಕಾಲ್ತುಳಿತದಿಂದ ಮೃತಪಟ್ಟಿರುವ ನಾಲ್ವರ ಪೈಕಿ ಇಬ್ಬರ ಶವಗಳು ಬೆಳಗಾವಿಗೆ ತಲುಪಿದೆ. ಅರುಣ ಕೋಪರ್ಡೆ ಮತ್ತು ಮಹಾದೇವಿ ಅವರ ಶವಗಳು ಬಂದಿದ್ದು, ಜ್ಯೋತಿ ಹತ್ತರವಾಠ ಮತ್ತು ಮೇಘಾ ಅವರ ಶವಗಳನ್ನು ದೆಹಲಿಯಿಂದ ಗೋವಾಗೆ ಏರ್‌ಲಿಫ್ಟ್ ಮಾಡಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ಆ್ಯಂಬೆಲೆನ್ಸ್ ಮೂಲಕ ತರಲಾಗುತ್ತದೆ.- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ