ಸಾರಾಂಶ
ಮಾಗಡಿ: ತಾಲೂಕಿನ ಸಾವನದುರ್ಗ ಚಾರಣಕ್ಕೆ ಬಂದು ಬೆಟ್ಟದಲ್ಲಿ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಸತತ 5ನೇ ದಿನದ ಹುಡುಕಾಟದಲ್ಲಿ ಗಗನ್ ದೀಪ್ ಸಿಂಗ್ (30) ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಮೂಲದ ಈತ ಡಿ.24ರಂದು ಭಾನುವಾರ ಸ್ನೇಹಿತನ ಜೊತೆ ಸಾವನದುರ್ಗ ಬೆಟ್ಟಕ್ಕೆ ಚಾರಣಕ್ಕೆ ಬಂದಿದ್ದರು. ಹಗಲೆಲ್ಲಾ ಚಾರಣ ಮಾಡಿದ ಇವರು, ಸಂಜೆಯಾಗುತ್ತಿದ್ದಂತೆ ಸ್ನೇಹಿತನಿಂದ ದೂರವಾಗಿ ನಾಪತ್ತೆಯಾಗಿದ್ದನು. ಸ್ನೇಹಿತ ಸುತ್ತಮುತ್ತ ಹುಡುಕಾಡಿದರೂ ಕಾಣಿಸದಿದ್ದಾಗ ಪೊಲೀಸರಿಗೆ ವಿಷಯ ತಿಳಿಸಿದ್ದರು.ಕಳೆದ ಐದು ದಿನಗಳಿಂದ ಗಗನ್ ಗಾಗಿ ಅರಣ್ಯಾಧಿಕಾರಿಗಳು, ಪೊಲೀಸರು, ಸ್ಥಳೀಯರು ಹಾಗೂ ಎಸ್‌ಟಿಆರ್‌ಎಫ್ ತಂಡ ಹುಡುಕಾಡಿದ ಪರಿಣಾಮ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ. ಸಾವನದುರ್ಗ ಬೆಟ್ಟದ ಎಮ್ಮೆಬೀಡು ಪ್ರದೇಶದಲ್ಲಿ ಪೊಲೀಸರು, ಸ್ವಯಂ ಸೇವಕರ ತಂಡ ಕೊಳೆತ ವಾಸನೆಯ ಜಾಡು ಹಿಡಿದು ಶವ ಪತ್ತೆಯಚ್ಚಿದ್ದಾರೆ.
ಕಳೆದ 4 ದಿನಗಳಿಂದಲೂ ಬೆಟ್ಟದ ತುದಿಯ ಬಸವಣ್ಣನ ಗೋಪುರದ ಆಸುಪಾಸಿನಲ್ಲಿ ನಿರಂತರ ಹುಡುಕಾಟ ನಡೆಸಲಾಗಿತ್ತು. 5ನೇ ದಿನ ಬಸವಣ್ಣ ಗೋಪುರದ ಹಿಂಭಾಗದ ಇಳಿಜಾರು ಬಂಡೆಯಿಂದ 400 ಅಡಿ ಕೆಳಗೆ ಎಮ್ಮೆ ಬೀಡು ಪ್ರದೇಶದಲ್ಲಿ ಕೊಳೆತ ಶವ ಪತ್ತೆಯಾಗಿದೆ. ಕಾರ್ಯಾಚರಣೆಗೆ ಅತ್ಯಾಧುನಿಕ ಡ್ರೋನ್‌ಗಳ ಬಳಸಿ ಸತತ ಹುಡುಕಾಟ ನಡೆಸಲಾಗಿತ್ತು. ಗಗನ್ ದೀಪ್ ಸಿಂಗ್ ರಾತ್ರಿ ವೇಳೆ ದಾರಿ ಕಾಣದೆ ಬಂಡೆಯಿಂದ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.ಇನ್ನು ಮುಂದಾದರೂ ಸಾವನದುರ್ಗ ಬೆಟ್ಟ ಹತ್ತುವ ಚಾರಣಿಗರ ಬಗ್ಗೆ ಅರಣ್ಯ ಇಲಾಖೆ, ಎಕೋಟೂರಿಸಂ ಸಾಕಷ್ಟು ನಿಗಾವಹಿಸಬೇಕು. ಸಂಜೆ ವೇಳೆ ಬೆಟ್ಟ ಹತ್ತಿದ ಪ್ರವಾಸಿಗರು ಸುರಕ್ಷಿತವಾಗಿ ಇಳಿದಿದ್ದಾರೆಯೇ ಎಂಬುದನ್ನು ಗಮನಿಸಬೇಕು. ಇಲ್ಲವಾದರೆ ಇಂತಹ ಘಟನೆಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳಿಗೂ ಮಾಗಡಿ ಸಿಪಿಐ ಗಿರಿರಾಜ್ ಹಾಗೂ ಮಾಗಡಿ ವಲಯ ಅರಣ್ಯಾಧಿಕಾರಿ ಚೈತ್ರ ಧನ್ಯವಾದ ತಿಳಿಸಿದ್ದಾರೆ.ಗುರುವಾರ ರಾತ್ರಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಶವವನ್ನು ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
28ಮಾಗಡಿ1:ಸಾವನದುರ್ಗ ಬೆಟ್ಟದ ಎಮ್ಮೆ ಬೀಡು ಇಳಿಜಾರು ಬಂಡೆಯ ಕೆಳಗೆ ಗಗನ್ ದೀಪ್ ಸಿಂಗ್ ಶವ ಪತ್ತೆ.28ಮಾಗಡಿ2: (ಮಗ್‌ಶಾಟ್ ಫೋಟೋ ಮಾತ್ರ ಬಳಸಿ)
ಗಗನ್ ದೀಪ್ ಸಿಂಗ್ ಭಾವಚಿತ್ರ.