ಧರ್ಮದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ. ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ ಎಂಬಂತೆ ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾರೆ. ಗುರು-ಶಿಷ್ಯರ ಬಾಂಧವ್ಯ ಕೇವಲ ಬೋಧನೆ ಮತ್ತು ಕಲಿಕೆ ಸೀಮಿತವಾಗಿಲ್ಲ. ಇದು ಭರವಸೆ, ನಂಬಿಕೆ, ತತ್ವಗಳ ಸಂಗಮವಾಗಿದೆ ಎಂದು ನಿವೃತ್ತ ವಿಜ್ಞಾನ ಶಿಕ್ಷಕ ಬಿ.ಪುಟ್ಟಪ್ಪ ತಿಳಿಸಿದ್ದಾರೆ.

- ಜೀನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಶಿಕ್ಷಕ ಬಿ.ಪುಟ್ಟಪ್ಪ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಧರ್ಮದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ. ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ ಎಂಬಂತೆ ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾರೆ. ಗುರು-ಶಿಷ್ಯರ ಬಾಂಧವ್ಯ ಕೇವಲ ಬೋಧನೆ ಮತ್ತು ಕಲಿಕೆ ಸೀಮಿತವಾಗಿಲ್ಲ. ಇದು ಭರವಸೆ, ನಂಬಿಕೆ, ತತ್ವಗಳ ಸಂಗಮವಾಗಿದೆ ಎಂದು ನಿವೃತ್ತ ವಿಜ್ಞಾನ ಶಿಕ್ಷಕ ಬಿ.ಪುಟ್ಟಪ್ಪ ತಿಳಿಸಿದರು.

ತಾಲೂಕಿನ ಜೀನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ 1999ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರು-ಶಿಷ್ಯರ ನೆನಪಿನಂಗಳ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನನಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ. ಅನಂತರ ಸಮಾಜ, ಸಂಸಾರದಿಂದ ಕಲಿಯುವ ಪಾಠ, ಪ್ರಕೃತಿ ಕಲಿಸುವ ಪಾಠವೂ ಮುಖ್ಯವಾಗಿದೆ. ಪ್ರಕೃತಿ ಕಲಿಸುವ ಪಾಠವನ್ನು ಯಾವ ಗುರುವೂ ಕಲಿಸಲು ಸಾಧ್ಯವಿಲ್ಲ. ಪ್ರಕೃತಿ ಕಲಿಸುವ ಪಾಠ ವಿಭಿನ್ನವಾಗಿರುತ್ತದೆ. ಇದಕ್ಕೆ ನೈಜ ಸಾಕ್ಷಿ ಈಗ ಎದುರಾಗಿರುವ ಬರಗಾಲ ಎಂದು ಹೇಳಿದರು.

ನಿವೃತ್ತ ಗಣಿತ ಶಿಕ್ಷಕ ಎಚ್‌.ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ಆಯೋಜಿಸಿರುವ ಕಾರ್ಯಕ್ರಮ ನಮಗೆ ಹೊಸ ಉತ್ಸಾಹ ನೀಡಿದೆ. ನಾನು ಓದಿದ ಶಾಲೆಯಲ್ಲಿಯೇ ಶಿಕ್ಷಕನಾಗಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿ, ನಿಮ್ಮ ಒಗ್ಗಟ್ಟು ಎಂದಿಗೂ ಉಳಿಯಲಿ. ನಾವು ನೀಡುವ ಶಿಕ್ಷೆ ನಿಮಗೆ ಶ್ರೀರಕ್ಷೆಯಾಗಿದೆ. ಇಲ್ಲವಾದಲ್ಲಿ ನಿಮ್ಮ ವೃತ್ತಿಯಲ್ಲಿ ಸಾಧನೆ ಮಾಡಲು ಸಾಧ್ಯವಿರಲಿಲ್ಲ ಎಂದರು.

ವಿದ್ಯಾರ್ಥಿಗಳು ಮತ್ತು ಯೋಧರು ಸಮವಸ್ತ್ರದಲ್ಲಿರುತ್ತಾರೆ. ಅವರಲ್ಲಿ ಶಿಸ್ತು ಮುಖ್ಯವಾಗಿದೆ. ಮಕ್ಕಳ ಮನಸ್ಸು ಹಸಿ ಗೋಡೆಯಂತೆ, ಗೋಡೆಗೆ ಕಲ್ಲೆಸೆದರೆ ಅದು ಗುರುತು ಮೂಡುತ್ತದೆ. ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು. ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಿ, ಬದುಕು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಶಿಕ್ಷಕರಾದ ಬಿ.ಎಸ್‌.ದೇವರ, ಜಿ.ಎಸ್‌.ಚಂದ್ರಶೇಖರ, ಕೆ.ಜಿ.ಸರಸ್ವತಿ, ಹಳೇಯ ವಿದ್ಯಾರ್ಥಿಗಳಾದ ಅನಿತಾ, ಮಹೇಶನಾಯ್ಕ, ಕೆ.ಯುವರಾಜ್‌ ಮತ್ತಿತರರು ಕಾರ್ಯಕ್ರಮ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗರಾಜ್‌ ವಹಿಸಿದ್ದರು. ಶಿಕ್ಷಕರಾದ ಜಿ.ಎಸ್‌.ಚಂದ್ರೇಗೌಡ, ಮಧುಶ್ರೀ, ಅರಸು, ಗದಿಗೇಶ್‌, ಹುಚ್ಚಪ್ಪ, ಶಿವಕುಮಾರ್‌, ಎಸ್‌ಡಿಎಂಸಿ ಪದಾಧಿಕಾರಿಗಳಾದ ಕೆ.ಜಿ.ನಾಗರಾಜ್‌, ಶಿವಪ್ಪಗೂಳ್ಯಪ್ಪ, ಸುರೇಶ ಸೇರಿದಂತೆ ಮತ್ತಿತರರಿದ್ದರು.

ಹಳೇ ವಿದ್ಯಾರ್ಥಿ ಸಾವಿತ್ರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕರನ್ನು, ಹಾಲಿ ಶಿಕ್ಷಕರನ್ನು ಮತ್ತು ಬೋಧಕೇತರ ಸಿಬ್ಬಂದಿಯನ್ನು ಕೃತಜ್ಞತಾ ಭಾವದಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಒಟ್ಟು 17ಕ್ಕೂ ಹೆಚ್ಚು ಜನ ಗುರುಪೂಜ್ಯರು ಹಾಗೂ 80ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತರಾಗಿ 26 ವರ್ಷಗಳ ಬಳಿಕ ಸಂದಿಸಿ ಶಾಲಾ ದಿನಗಳ ನೆನಪುಗಳನ್ನು ಮತ್ತು ಗುರು-ಶಿಷ್ಯರ ಬಾಂಧವ್ಯವನ್ನು ಮೆಲಕು ಹಾಕಿ ಅಕ್ಷರ ಕಲಿಸಿದ ತಮ್ಮ ನೆಚ್ಚಿನ ಶಿಕ್ಷಕರನ್ನು ಜೀನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಗುರುಗಳಿಗೆ ಪುಷ್ಪವೃಷ್ಠಿ ಮೂಲಕ ಶಿಷ್ಯರು ತಮ್ಮ ಕೃತಜ್ಞತೆ, ಗೌರವವನ್ನು ಸಮರ್ಪಿಸಿದರು.

- - -

-ಚಿತ್ರ:

ಜೀನಹಳ್ಳಿ ಸರ್ಕಾರಿ ಪ್ರೌಢಶಾಲೆ -ಶಿಷ್ಯರ ನೆನಪಿನಂಗಳ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.