ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಿಕ್ಕ ಮೂಳೆ ಪುರುಷರದ್ದು: ಡಿಸಿ ಲಕ್ಷ್ಮೀಪ್ರಿಯಾ

| Published : Dec 24 2024, 12:48 AM IST / Updated: Dec 24 2024, 12:49 AM IST

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಿಕ್ಕ ಮೂಳೆ ಪುರುಷರದ್ದು: ಡಿಸಿ ಲಕ್ಷ್ಮೀಪ್ರಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ಈ ವಿಧಿ ವಿಜ್ಞಾನ ವರದಿಯನ್ನು ಆಧರಿಸಿ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಮೃತಪಟ್ಟಿರುವ ಬಗ್ಗೆ ಪ್ರಮಾಣಪತ್ರ ನೀಡಲು ಕಾನೂನಾತ್ಮಕ ಪ್ರಕ್ರಿಯೆ ಮಾಡಬಹುದು ಎಂದು ಡಿಸಿ ಲಕ್ಷ್ಮೀಪ್ರಿಯಾ ತಿಳಿಸಿದರು.

ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿದ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಸಿಕ್ಕ ಎರಡೂ ಮೂಳೆ ಪುರುಷರದ್ದು ಎಂದು ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿದೆ. ಆದರೆ ಯಾರ ಮೂಳೆಯೆಂದು ಗುರುತು ಮಾಡಲು ಆಗಿಲ್ಲ ಎಂದು ತಜ್ಞರು ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮದವರ ಜತೆಗೆ ಮಾತನಾಡಿ, ಎರಡೂ ಒಬ್ಬರ ಮೂಳೆಯೇ ಅಥವಾ ಬೇರೆ ಬೇರೆ ಎನ್ನುವುದು ವರದಿಯಲ್ಲಿ ತಿಳಿಸಿಲ್ಲ ಎಂದರು.

ಜಿಲ್ಲಾಡಳಿತದಿಂದ ಎನ್‌ಡಿಆರ್‌ಎಫ್ ಪ್ರಕಾರ ಮೃತಪಟ್ಟವರ ಕುಟುಂಬಕ್ಕೆ ಮಾತ್ರ ಪರಿಹಾರ ನೀಡಬೇಕೆಂದಿದೆ. ಆದರೆ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಅವರ ಮರಣ ಪ್ರಮಾಣಪತ್ರ ನೀಡುವುದು ಕಷ್ಟವಾಗಿತ್ತು. ಈ ವಿಧಿ ವಿಜ್ಞಾನ ವರದಿಯನ್ನು ಆಧರಿಸಿ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಮೃತಪಟ್ಟಿರುವ ಬಗ್ಗೆ ಪ್ರಮಾಣಪತ್ರ ನೀಡಲು ಕಾನೂನಾತ್ಮಕ ಪ್ರಕ್ರಿಯೆ ಮಾಡಬಹುದು ಎಂದರು.ಮುರುಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಟೆಂಡರ್ ಪಡೆದವರಿಗೆ ಲೈಫ್ ಗಾರ್ಡ್‌ಗಳಿಗೆ ಪ್ರವಾಸಿಗರ ರಕ್ಷಣೆಗೆ ಬೇಕಾದ ಅಗತ್ಯ ಸುರಕ್ಷತಾ ಪರಿಕರ ಪೂರೈಕೆ ಮಾಡಲು ಷರತ್ತು ಹಾಕಲಾಗಿದೆ. ಆದಷ್ಟು ಶೀಘ್ರದಲ್ಲಿ ಪೂರೈಸುತ್ತಾರೆ. ಜತೆಗೆ ಜಿಲ್ಲಾಡಳಿತದಿಂದ ಕೂಡಾ ಪರಿಕರ ಪೂರೈಕೆಗೆ ವಾರದಲ್ಲಿ ಟೆಂಡರ್ ಕರೆದು ಪಡೆದುಕೊಳ್ಳಲಾಗುತ್ತದೆ.

ಆಯಾ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸರ್ವೆ ನಡೆಸಲಾಗಿದ್ದು, ಜಲಪಾತ, ಕಡಲತೀರಗಳಿಗೆ ಎಷ್ಟು ಜನ ಸೂಪರ್‌ವೈಸರ್, ಲೈಫ್ ಗಾರ್ಡ್ ಅವಶ್ಯಕತೆಯಿದೆ ಎಂದು ತಿಳಿದು ಸಮುದ್ರದಲ್ಲಿ ನಡೆಯುವ ಜಲಸಾಹಸ ಕ್ರೀಡೆಗಳಿಂದ ಬರುವ ಆದಾಯದಲ್ಲಿ ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ಸಮಯಾವಕಾಶ ಬೇಕಾಗುತ್ತದೆ. ಅಲ್ಲಿಯವರೆಗೆ ಸ್ಥಳೀಯ ಪೊಲೀಸ್ ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ ಎಂದರು.

ದುರಂತದಲ್ಲಿ 11 ಜನ ಕಣ್ಮರೆಯಾಗಿದ್ದರು

ಭಾರಿ ಮಳೆಯಿಂದಾಗಿ ಕಳೆದ ಜುಲೈ 16ರಂದು ಅಂಕೋಲಾದ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿತ್ತು. 11 ಜನ ಕಣ್ಮರೆಯಾಗಿದ್ದರು. ಒಂದು ವಾರದ ಅಂತರದಲ್ಲಿ ಹೆದ್ದಾರಿಯಂಚಿಗೆ ಹೋಟೆಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ, ಅವರ ಪತ್ನಿ ಶಾಂತಿ ನಾಯ್ಕ, ಮಕ್ಕಳಾದ ಅವಂತಿಕಾ, ರೋಷನ್ ಮೃತದೇಹಗಳು ಪತ್ತೆಯಾಗಿದ್ದವು. ಬಳಿಕ ಉಳುವರೆ ಗ್ರಾಮದ ಸಣ್ಣೀ ಗೌಡ, ಲಾರಿ ಚಾಲಕರುಗಳಾದ ತಮಿಳುನಾಡು ಮೂಲದ ಚಿಣ್ಣನ್, ಮುರುಗನ್ ಹಾಗೂ ಶರವಣನ್ ಮೃತದೇಹಗಳು ಪತ್ತೆಯಾಗಿತ್ತು. 70 ದಿನಗಳ ಬಳಿಕ ಕೇರಳದ ಅರ್ಜುನ್ ಶವ ಲಾರಿಯೊಂದಿಗೆ ಸಿಕ್ಕಿತ್ತು. ಆದರೆ ಜಗನ್ನಾಥ ನಾಯ್ಕ ಹಾಗೂ ಲೋಕೇಶ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕಾರ್ಯಾಚರಣೆ ವೇಳೆ ಗಂಗಾವಳಿ ನದಿಯಲ್ಲಿ ಎರಡು ಮೂಳೆಗಳು ಸಿಕ್ಕಿತ್ತು. ಆ ಮೂಳೆಗಳ ವರದಿ ಈಗ ಬಂದಿದೆ.