ಲೇಖಕಸ್ನೇಹಿ ಸಪ್ನ ಬುಕ್ ಹೌಸ್ ಕುಟುಂಬ: ಹಂಪನಾ

| Published : Dec 14 2024, 12:46 AM IST

ಲೇಖಕಸ್ನೇಹಿ ಸಪ್ನ ಬುಕ್ ಹೌಸ್ ಕುಟುಂಬ: ಹಂಪನಾ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯವು ಶಾಶ್ವತ ಸಾಹಿತ್ಯ, ತೂಕದ ಸಾಹಿತ್ಯ ಎಂದಾಗಿದ್ದ ಕಾಲವನ್ನು ಕಳೆದು, ಲೇಖಕರಿಗೆ ಸಾಹಿತ್ಯ ಸ್ಫೂರ್ತಿ ತುಂಬಿ, ವಿಶ್ವಾಸವನ್ನು ತಂದಿದ್ದು ಸಪ್ನ ಬುಕ್ ಹೌಸ್‌ನ ಸುರೇಶ್ ಶಾ- ಭಾನುಮತಿ ದಂಪತಿ ಮಕ್ಕಳಾದ ನಿತಿನ್ ಶಾ, ದೀಪಕ್ ಶಾ, ಪರೇಶ್ ಶಾ ಎಂದು ಹಿರಿಯ ಸಾಹಿತಿ, ವಿದ್ವಾಂಸ, ನಾಡೋಜ ಪ್ರೊ. ಹಂ.ಪ. ನಾಗರಾಜಯ್ಯ ಶ್ಲಾಘಿಸಿದ್ದಾರೆ.

ದಾವಣಗೆರೆ: ಕನ್ನಡ ಸಾಹಿತ್ಯವು ಶಾಶ್ವತ ಸಾಹಿತ್ಯ, ತೂಕದ ಸಾಹಿತ್ಯ ಎಂದಾಗಿದ್ದ ಕಾಲವನ್ನು ಕಳೆದು, ಲೇಖಕರಿಗೆ ಸಾಹಿತ್ಯ ಸ್ಫೂರ್ತಿ ತುಂಬಿ, ವಿಶ್ವಾಸವನ್ನು ತಂದಿದ್ದು ಸಪ್ನ ಬುಕ್ ಹೌಸ್‌ನ ಸುರೇಶ್ ಶಾ- ಭಾನುಮತಿ ದಂಪತಿ ಮಕ್ಕಳಾದ ನಿತಿನ್ ಶಾ, ದೀಪಕ್ ಶಾ, ಪರೇಶ್ ಶಾ ಎಂದು ಹಿರಿಯ ಸಾಹಿತಿ, ವಿದ್ವಾಂಸ, ನಾಡೋಜ ಪ್ರೊ. ಹಂ.ಪ. ನಾಗರಾಜಯ್ಯ ಶ್ಲಾಘಿಸಿದರು.

ನಗರದ ಎವಿಕೆ ರಸ್ತೆಯಲ್ಲಿ ಶುಕ್ರವಾರ ಬೆಂಗಳೂರಿನ ಸಪ್ನ ಬುಕ್ ಹೌಸ್‌ನ 23ನೇ ಶಾಖೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಶ್ವತ ಸಾಹಿತ್ಯವೆಂದರೆ ಮುದ್ರಣಗೊಂಡ ಪುಸ್ತಕ ಖರೀದಿಸದಿದ್ದುದು, ತೂಕದ ಸಾಹಿತ್ಯವೆಂದರೆ ರದ್ದಿಗೆ ಹಾಕುವಂತಾಗಿದ್ದ ಸಂದರ್ಭವನ್ನು ಅಳಿಸಿ, ಲೇಖಕರಿಗೆ ರಾಯಧನ ನೀಡುವಷ್ಟರ ಮಟ್ಟಿಗೆ ಸಪ್ನ ಬುಕ್ ಹೌಸ್ ಕುಟುಂಬ ಲೇಖಕರಿಗೆ ಪ್ರೋತ್ಸಾಹ, ಸ್ಫೂರ್ತಿಯ ಸೆಲೆಯಾಗಿದೆ ಎಂದರು.

ಅನ್ಯ ಪ್ರಕಾಶಕರು ಸಪ್ನ ಪ್ರಕಾಶಕರನ್ನು ದ್ವೇಷಿಸಲಿಲ್ಲ, ಎಲ್ಲ ಪ್ರಕಾಶರನ್ನು, ಮುದ್ರಕರು, ಲೇಖಕರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಪ್ನ ಬುಕ್‌ ಹೌಸ್‌ ಕುಟುಂಬ ಮಾಡಿಕೊಂಡೇ ಬಂದಿದೆ. ಜಾತಿಬೇಧ, ವಯೋಬೇಧ, ಲಿಂಗಬೇಧ, ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕವೆಂಬ ಬೇಧ, ಹಿರಿಯ-ಕಿರಿಯನೆಂಬ ಬೇಧ ಇದ್ಯಾವುದೂ ಇಲ್ಲದಂತೆ, ಕೃತಿಗೆ ಯೋಗ್ಯತೆ, ಪ್ರಕಟಿಸಲು ಅರ್ಹವಾಗಿದ್ದರೆ ಮುಲಾಜಿಲ್ಲದೇ ಸಪ್ನ ಮುದ್ರಿಸುತ್ತದೆ. 2, 3ನೇ ಮುದ್ರಣ ಕಂಡರೂ ಲೇಖಕನ ಗಮನಕ್ಕೆ ಬಾರದಿದ್ದರೂ, ರಾಯಧನ ನೀಡುವ ಮೂಲಕ ಅಚ್ಚರಿ ಮೂಡಿಸುವ ಕೆಲಸವನ್ನು ನಿತಿನ್ ಶಾ ಕುಟುಂಬ ಮಾಡುತ್ತಿದೆ ಎಂದರು.

ಸಪ್ನ ಬುಕ್ ಹೌಸ್ ಮಾಲೀಕ ನಿತಿನ್ ಶಾ ಮಾತನಾಡಿ, 57 ವರ್ಷಗಳನ್ನು ಪೂರೈಸಿದ ಸಂಸ್ಥೆ ಕಳೆದ ತಿಂಗಳಷ್ಟೇ ಹಾಸನದಲ್ಲಿ 22ನೇ ಶಾಖೆ ಆರಂಭಿಸಿತ್ತು. ಇದೀಗ 23ನೇ ಶಾಖೆ ದಾವಣಗೆರೆಯಲ್ಲಿ ಆರಂಭಿಸುತ್ತಿದ್ದೇವೆ. ಪುಸ್ತಕಗಳನ್ನು ಹುಡುಕಿಕೊಂಡು ನೀವು ನಮ್ಮ ಬೆಂಗಳೂರು ಪ್ರಧಾನ ಶಾಖೆಗೆ ಬರಬೇಕಿಲ್ಲ. ನಾವೇ ನಿಮ್ಮ ಊರಿಗೆ ಬಂದಿದ್ದೇವೆ. ಜಗತ್ತಿನ ಯಾವುದೇ ಪುಸ್ತಕವಾಗಿದ್ದರೂ 8-10 ದಿನದಲ್ಲಿ ಸಪ್ನ ಬುಕ್ ಹೌಸ್ ಆರಂಭಿಸಿರುವ ಸೇವೆ ಮೂಲಕ ತಲುಪಿಸುತ್ತೇವೆ ಎಂದು ಹೇಳಿದರು.

- - -

-ಫೋಟೋ: ಹಂ.ಪ.ನಾಗರಾಜಯ್ಯ